ಲೋಕಸಭೆಯಲ್ಲಿ ಒವೈಸಿ – ಅಮಿತ್ ಶಾ ವಾಗ್ಯುದ್ಧ

Update: 2019-07-15 15:27 GMT

ಹೊಸದಿಲ್ಲಿ,ಜು.15: ದೇಶದಲ್ಲಿ ಮತ್ತು ವಿದೇಶಗಳಲ್ಲಿ ಭಯೋತ್ಪಾದಕ ಪ್ರಕರಣಗಳ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹೆಚ್ಚಿನ ಅಧಿಕಾರವನ್ನು ನೀಡುವ ಎನ್‌ಐಎ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯು ಸೋಮವಾರ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಅಂಗೀಕರಿಸಿದೆ.

ತಿದ್ದುಪಡಿಗಳು ಸೈಬರ್ ಅಪರಾಧಗಳು ಮತ್ತು ಮಾನವ ಕಳ್ಳಸಾಗಾಣಿಕೆಯ ಪ್ರಕರಣಗಳ ತನಿಖೆಯನ್ನು ನಡೆಸಲು ಎನ್‌ಐಗೆ ಅವಕಾಶ ನೀಡಲಿವೆ. ವಿದೇಶಗಳಲ್ಲಿ ಭಾರತೀಯರು ಮತ್ತು ಭಾರತೀಯ ಹಿತಾಸಕ್ತಿಗಳ ಮೇಲಿನ ಭಯೋತ್ಪಾದಕ ದಾಳಿಗಳ ತನಿಖೆಯನ್ನು ನಡೆಸಲು ಮಸೂದೆಯು ಎನ್‌ಐಎಗೆ ಅಧಿಕಾರ ನೀಡಲಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆ,2019ರ ಕುರಿತು ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಗೃಹಸಚಿವ ಅಮಿತ್ ಶಾ ಅವರು,ಮೋದಿ ಸರಕಾರವು ಧರ್ಮದ ಆಧಾರದಲ್ಲಿ ಎನ್‌ಐಎ ಕಾಯ್ದೆಯನ್ನೆಂದಿಗೂ ದುರ್ಬಳಕೆ ಮಾಡುವುದಿಲ್ಲ,ಆದರೆ ಆರೋಪಿಯ ಧರ್ಮವನ್ನು ಪರಿಗಣಿಸದೆ ಭಯೋತ್ಪಾದನೆಯು ಅಂತ್ಯಗೊಳ್ಳುವಂತೆ ನೋಡಿಕೊಳ್ಳಲಿದೆ ಎಂದು ಒತ್ತಿ ಹೇಳಿದರು.

 ಭಯೋತ್ಪಾದನೆ ನಿಗ್ರಹ ಕಾಯ್ದೆ ಪೊಟಾವನ್ನು ರದ್ದುಗೊಳಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಶಾ,ಕಾಯ್ದೆಯ ದುರುಪಯೋಗವಾಗುತ್ತಿದೆ ಎಂದು ಅದನ್ನು ರದ್ದುಗೊಳಿಸಿರಲಿಲ್ಲ,ತನ್ನ ಮತ ಬ್ಯಾಂಕನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಆ ಕೆಲಸವನ್ನು ಮಾಡಿತ್ತು. ಆದರೆ ಮುಂಬೈ ಭಯೋತ್ಪಾದಕ ದಾಳಿಗಳ ಬಳಿಕ ಎನ್‌ಐಎಯನ್ನು ತರುವುದು ಕಾಂಗ್ರೆಸ್ ನೇತೃತ್ವದ ಅದೇ ಯುಪಿಎ ಸರಕಾರಕ್ಕೆ ಅನಿವಾರ್ಯವಾಗಿತ್ತು ಎಂದರು.

ಇದಕ್ಕೂ ಮುನ್ನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಹಲವಾರು ಪ್ರತಿಪಕ್ಷ ನಾಯಕರು ಮಸೂದೆಯನ್ನು ಟೀಕಿಸಿ,ಸರಕಾರವು ರಾಜಕೀಯ ಪ್ರತೀಕಾರಕ್ಕಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

 ಎನ್‌ಐಎಯನ್ನು ನಿರ್ದಿಷ್ಟ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ದುರುಪಯೋಗಿಸಲಾಗುತ್ತಿದೆ ಎಂಬ ಕೆಲವು ಸಂಸದರ ಆರೋಪಕ್ಕೆ ಉತ್ತರಿಸಿದ ಶಾ,‘‘ ಮೋದಿ ಸರಕಾರಕ್ಕೆ ಇಂತಹ ಯಾವುದೇ ಉದ್ದೇಶವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಭಯೋತ್ಪಾದನೆಗೆ ಅಂತ್ಯ ಹಾಡುವುದು ಅದರ ಏಕೈಕ ಉದ್ದೇಶವಾಗಿದೆ,ಆದರೆ ಕ್ರಮವನ್ನು ತೆಗೆದುಕೊಳ್ಳುವಾಗ ಆರೋಪಿಯ ಧರ್ಮ ಯಾವುದು ಎನ್ನ್ನುವುದನ್ನ್ನು ನಾವು ನೋಡುವುದಿಲ್ಲ ಎಂದರು.

ಶಾ-ಒವೈಸಿ ವಾಗ್ಯುದ್ಧ

ಎನ್‌ಐಎ ಮಸೂದೆ ಮೇಲಿನ ಚರ್ಚೆ ಸಂದರ್ಭದಲ್ಲಿ ಶಾ ಮತ್ತು ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ ನಡುವಿನ ವಾಗ್ಯುದ್ಧಕ್ಕೆ ಸದನವು ಸಾಕ್ಷಿಯಾಯಿತು.

ಬಿಜೆಪಿ ಸದಸ್ಯ ಸತ್ಯಪಾಲ ಸಿಂಗ್ ಅವರು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾಗ ಒವೈಸಿ ಸೇರಿದಂತೆ ಪ್ರತಿಪಕ್ಷ ಸದಸ್ಯರು ಅವರಿಗೆ ಅಡ್ಡಿಯನ್ನುಂಟು ಮಾಡಿದ್ದು ವಾಗ್ಯುದ್ಧಕ್ಕೆ ನಾಂದಿ ಹಾಡಿತು.

ನಿರ್ದಿಷ್ಟ ಪ್ರಕರಣವೊಂದರಲ್ಲಿ ತನಿಖೆಯ ಜಾಡನ್ನು ಬದಲಿಸುವಂತೆ ಆಗಿನ ಹೈದರಾಬಾದ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದ ರಾಜ್ಯದ ರಾಜಕೀಯ ನಾಯಕರೋರ್ವರು,ಇಲ್ಲದಿದ್ದರೆ ರಾಜ್ಯದಿಂದ ಹೊರಗೆ ವರ್ಗಾವಣೆಯ ಬೆದರಿಕೆಯನ್ನು ಒಡ್ಡಿದ್ದರು. ಆ ಸಂದರ್ಭದಲ್ಲಿ ತಾನು ಮುಂಬೈ ಪೊಲೀಸ್ ಆಯುಕ್ತನಾಗಿದ್ದರಿಂದ ತನಗೆ ಈ ಬೆಳವಣಿಗೆಯ ಮಾಹಿತಿಯಿತ್ತು ಎಂಬ ಸಿಂಗ್ ಹೇಳಿಕೆಯನ್ನು ಆಕ್ಷೇಪಿಸಿದ ಹೈದರಾಬಾದ್ ಸಂಸದ ಒವೈಸಿ,ಅವರು ತನ್ನ ಹೇಳಿಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸದನದಲ್ಲಿ ಮಂಡಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಶಾ,ಪ್ರತಿಪಕ್ಷ ಸದಸ್ಯರು ಮಾತನಾಡುತ್ತಿದ್ದಾಗ ಆಡಳಿತಾರೂಢ ಸದಸ್ಯರು ಅಡ್ಡಿಪಡಿಸಿರರಿಲ್ಲ,ಹೀಗಾಗಿ ಅವರೂ ಇದೇ ರೀತಿ ವರ್ತಿಸಬೇಕು ಎಂದರು.

ಒವೈಸಿಯತ್ತ ಬೆಟ್ಟು ಮಾಡಿದ ಶಾ,ಪ್ರತಿಪಕ್ಷ ಸದಸ್ಯರು ಇತರರ ಅಭಿಪ್ರಾಯವನ್ನು ಆಲಿಸುವ ತಾಳ್ಮೆ ಹೊಂದಿರಬೇಕು ಎಂದರು. ಇದರಿಂದ ಕೆರಳಿದ ಒವೈಸಿ ತನ್ನನ್ನು ಬೆಟ್ಟು ಮಾಡದಂತೆ ಶಾಗೆ ಸೂಚಿಸಿದರಲ್ಲದೆ,ತನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದರು.

ಇದಕ್ಕೆ ಉತ್ತರಿಸಿದ ಶಾ, “ನಾನು ನಿಮ್ಮನ್ನು ಹೆದರಿಸುತ್ತಿಲ್ಲ.ಪ್ರತಿಪಕ್ಷ ಸದಸ್ಯರಿಗೆ ಎದುರು ಅಭಿಪ್ರಾಯವನ್ನು ಕೇಳುವ ತಾಳ್ಮೆ ಇರಬೇಕು ಎಂದಷ್ಟೇ ಹೇಳುತ್ತಿದ್ದೇನೆ. ನಿಮ್ಮ ಮನಸ್ಸಿನಲ್ಲಿ ಭೀತಿಯ್ದಿರೆ ನಾನೇನು ಮಾಡಲು ಸಾಧ್ಯ?” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News