ಇಂಗ್ಲೆಂಡ್‌ಗೆ ಹೆಚ್ಚುವರಿ ರನ್ ನೀಡಿದ್ದು ಸರಿಯಲ್ಲ: ಟೌಫೆಲ್

Update: 2019-07-15 18:44 GMT

ಲಂಡನ್, ಜು.16: ನಾಟಕೀಯ ತಿರುವುಗಳಿಗೆ ಸಾಕ್ಷಿಯಾದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಅತ್ಯಧಿಕ ಬೌಂಡರಿ ಬಾರಿಸಿದ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಮೇಲುಗೈ ಸಾಧಿಸಿ ಮೊದಲ ಬಾರಿ ವಿಶ್ವಕಪ್ ಎತ್ತಿಹಿಡಿಯಿತು. ಸಾಮಾಜಿಕ ಜಾಲತಾಣದಲ್ಲಿ ಟೈ-ಬ್ರೇಕ್ ನಿಯಮ ಹಾಗೂ ಇಂಗ್ಲೆಂಡ್ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಓವರ್ ಥ್ರೋ ಸನ್ನಿವೇಶ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

‘‘ಓವರ್ ಥ್ರೋಗೆ ಆರು ನೀಡಿದ್ದು ಸರಿಯಲ್ಲ. ಈ ವಿಷಯದಲ್ಲಿ ಅಂಪೈರ್ ಸ್ಪಷ್ಟವಾಗಿ ತಪ್ಪು ಮಾಡಿದ್ದಾರೆ. ಬ್ಯಾಟ್ಸ್‌ಮನ್ ಎರಡು ರನ್ ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಅವರು ಆರು ರನ್ ಬದಲಿಗೆ ಐದು ರನ್ ನೀಡಬೇಕಾಗಿತ್ತು.’’ ಎಂದು ಐದು ಬಾರಿ ಐಸಿಸಿ ವರ್ಷದ ಪ್ರಶಸ್ತಿ ಜಯಿಸಿದ್ದ ಆಸ್ಟ್ರೇಲಿಯದ ಮಾಜಿ ಅಂಪೈರ್ ಸೈಮನ್ ಟೌಫೆಲ್ ‘ಫೋಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯ’ಕ್ಕೆ ತಿಳಿಸಿದ್ದಾರೆ. ರವಿವಾರದ ಫೈನಲ್ ಪಂದ್ಯದಲ್ಲಿ ಗೆಲ್ಲಲು 242 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ ಬೆನ್ ಸ್ಟೋಕ್ಸ್ ಏಕಾಂಗಿ ಹೋರಾಟದಿಂದ ಗೆಲುವಿನತ್ತ ಸಾಗಿತ್ತು. ಇಂಗ್ಲೆಂಡ್‌ಗೆ 3 ಎಸೆತಗಳಲ್ಲಿ 9 ರನ್ ಅಗತ್ಯವಿತ್ತು. ಆಗ ಕಿವೀಸ್ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ, 50ನೇ ಓವರ್‌ನ 4ನೇ ಎಸೆದ ಬಳಿಕ ಪಂದ್ಯ ಇಂಗ್ಲೆಂಡ್‌ನತ್ತ ತಿರುಗಿದ್ದಲ್ಲದೆ, ಅಂಪೈರ್ ಪ್ರಮಾದ ಕಿವೀಸ್‌ನ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತೇ? ಎಂಬ ಚರ್ಚೆಗೆ ನಾಂದಿ ಹಾಡಿತು.

ಬೆನ್ ಸ್ಟೋಕ್ಸ್ 49.4ನೇ ಓವರ್‌ನಲ್ಲಿ ಎರಡು ರನ್ ಯತ್ನದಲ್ಲಿದ್ದಾಗ ಮಾರ್ಟಿನ್ ಗಪ್ಟಿಲ್ ಅವರ ನೇರ ಎಸೆತ ಸ್ಟೋಕ್ಸ್ ಬ್ಯಾಟ್‌ಗೆ ತಗಲಿ ಬೌಂಡರಿ ಗೆರೆ ದಾಟಿತು. ಅಂಪೈರ್ ಕುಮಾರ ಧರ್ಮಸೇನ ಸಹ ಅಂಪೈರ್ ಮರಾಯಿಸ್ ಎರಾಸ್ಮಸ್‌ರನ್ನು ಸಂಪರ್ಕಿಸಿ ಇಂಗ್ಲೆಂಡ್‌ಗೆ ಆರು ರನ್ ನೀಡಿದರು. ಎರಡು ರನ್ ಬ್ಯಾಟ್ಸ್‌ಮನ್‌ಗೆ ಹಾಗೂ 4 ರನ್ ಓವರ್ ಥ್ರೋಗೆ ನೀಡಿದ್ದರು. ಆದರೆ, ಟೌಫೆಲ್ ಸಹಿತ ಹಲವು ಕ್ರಿಕೆಟ್ ವಿಶ್ಲೇಷಕರು ಐಸಿಸಿ ಹ್ಯಾಂಡ್‌ಬುಕ್ ವಾಕ್ಯವನ್ನು ಬೆಟ್ಟು ಮಾಡಿ, ಅಂಪೈರ್ ಆರು ರನ್ ಬದಲಿಗೆ ಐದು ನೀಡಬೇಕಿತ್ತು ಎಂದು ವಾದಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News