“ಅಮೆರಿಕದಲ್ಲಿ ಸಂತೋಷವಿಲ್ಲದಿದ್ದರೆ ಹೋಗಿ”

Update: 2019-07-16 14:26 GMT

ವಾಶಿಂಗ್ಟನ್, ಜು. 16: ಡೆಮಾಕ್ರಟಿಕ್ ಪಕ್ಷದ ನಾಲ್ವರು ಪ್ರಗತಿಪರ ಸಂಸದೆಯರ ವಿರುದ್ಧದ ವಾಗ್ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಅಮೆರಿಕದಲ್ಲಿ ಅವರು ಸಂತೋಷವಾಗಿಲ್ಲದಿದ್ದರೆ, ಅವರು ಹೋಗಬಹುದು ಎಂದು ಹೇಳಿದ್ದಾರೆ.

‘‘ಅವರು ದೂರುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ’’ ಎಂದು ಶ್ವೇತಭವನದಲ್ಲಿ ನಡೆದ ‘ಮೇಡ್ ಇನ್ ಅಮೆರಿಕ’ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಅವರು ನಮ್ಮ ದೇಶವನ್ನು ದ್ವೇಷಿಸುವ ಜನರು. ಅವರು ನಮ್ಮ ದೇಶವನ್ನು ಗಾಢವಾಗಿ ದ್ವೇಷಿಸುತ್ತಿದ್ದಾರೆ ಎಂದು ನನಗನಿಸುತ್ತದೆ’’ ಎಂದರು.

‘‘ನೀವು ಇಲ್ಲಿ ಸಂತೋಷವಾಗಿಲ್ಲದಿದ್ದರೆ ಹೋಗಬಹುದು’’ ಎಂದು ಟ್ರಂಪ್ ಹೇಳಿದರು. ‘‘ನಾನು ಹೇಳುವುದಿಷ್ಟೆ. ಅವರು ಇಲ್ಲಿಂದ ಹೋಗಲು ಬಯಸಿದ್ದರೆ, ಹೋಗಬಹುದು’’ ಎಂದು ಟ್ರಂಪ್ ನುಡಿದರು.

ಈ ಎಲ್ಲ ನಾಲ್ವರು ಮಹಿಳೆಯರು ಅಲ್-ಖಾಯಿದದಂಥ ಅಮೆರಿಕದ ಶತ್ರುಗಳನ್ನು ಪ್ರೀತಿಸುತ್ತಾರೆ ಎಂಬುದಾಗಿಯೂ ಅವರು ಆರೋಪಿಸಿದರು.

ಮ್ಯಾಸಚೂಸಿಟ್ಸ್‌ನ ಅಯಾನಾ ಪ್ರೆಸ್ಲಿ, ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ, ಮಿನಸೋಟ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಉಮರ್ ಮತ್ತು ಮಿಶಿಗನ್‌ನ ರಶೀದಾ ತ್ಲೈಬ್‌ರನ್ನು ಗುರಿಯಾಗಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ನಾಲ್ವರೂ ಮಹಿಳೆಯರು ಬಿಳಿಯೇತರರು.

ಟ್ರಂಪ್‌ರದ್ದು ಬಿಳಿಯ ರಾಷ್ಟ್ರೀಯವಾದಿಗಳ ಕಾರ್ಯಸೂಚಿ: ಮಹಿಳಾ ಸಂಸದರಿಂದ ಆರೋಪ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ತಂತ್ರಗಾರಿಕೆಗೆ ಬಲಿ ಬೀಳದಂತೆ ಅವರಿಂದ ಟೀಕೆಗೊಳಗಾದ ನಾಲ್ವರು ಡೆಮಾಕ್ರಟಿಕ್ ಸಂಸದೆಯರು ಜನರನ್ನು ಒತ್ತಾಯಿಸಿದ್ದಾರೆ.

ಸೋಮವಾರ ರಾತ್ರಿ ತುರ್ತಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ, ಅಮೆರಿಕದ ಕುರಿತ ತಮ್ಮ ಕಲ್ಪನೆಗಳನ್ನು ಅಯಾನಾ ಪ್ರೆಸ್ಲಿ, ಅಲೆಕ್ಸಾಂಡ್ರಿಯಾ ಒಕಾಸಿಯೊ, ಇಲ್ಹಾನ್ ಉಮರ್ ಮತ್ತು ರಶೀದಾ ತ್ಲೈಬ್ ಬಿಚ್ಚಿಟ್ಟರು.

ಅಮೆರಿಕವು ವಲಸಿಗರ ದೇಶವಾಗಿದ್ದು, ತಮ್ಮಂಥಹ ಬಿಳಿಯೇತರ ಮಹಿಳೆಯರಿಗೆ ಅವಕಾಶಗಳನ್ನು ಒದಗಿಸುತ್ತದೆ ಹಾಗೂ ಅದು ಸಿರಿವಂತರಿಗಾಗಿ ಇರುವ ದೇಶವಲ್ಲ ಎಂದು ಅವರು ಹೇಳಿದರು.

ಟ್ರಂಪ್ ಮಾತನಾಡುತ್ತಿರುವುದು ‘ಬಿಳಿಯ ರಾಷ್ಟ್ರೀಯವಾದಿಗಳ ಕಾರ್ಯಸೂಚಿಯನ್ನು’ ಎಂದು ಈ ಮಹಿಳೆಯರು ಹೇಳಿದ್ದಾರೆ.

 ‘‘ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರು ಈ ಅಧ್ಯಕ್ಷರು. ಕರಿಯ ಆ್ಯತ್ಲೀಟ್‌ಗಳನ್ನು ‘ಸನ್ಸ್ ಆಫ್ ಬಿಚ್’ ಎಂದು ಕರೆದವರು ಈ ಅಧ್ಯಕ್ಷರು. ಕರಿಯ ಮತ್ತು ಕಂದು ಬಣ್ಣಗಳ ಜನರ ದೇಶಗಳಿಂದ ಬಂದವರನ್ನು ‘ಶಿಟ್ ಹೋಲ್‌ಗಳು’ ಎಂಬುದಾಗಿ ಕರೆದವರು ಈ ಅಧ್ಯಕ್ಷರು. ತನ್ನ ವಿರುದ್ಧ ಪ್ರತಿಭಟನೆ ನಡೆಸುವವರನ್ನು ನವ-ನಾಝಿಗಳು ಎಂದು ಕರೆದವರು ಈ ಅಧ್ಯಕ್ಷರು’’ ಎಂದು ಇಲ್ಹಾನ್ ಉಮರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News