ಭಾರತದ ಡಬಲ್ಸ್ ತಂಡಗಳ ಶುಭಾರಂಭ

Update: 2019-07-16 18:23 GMT

ಹೈದರಾಬಾದ್, ಜು.16: ಜಕಾರ್ತದಲ್ಲಿ ಮಂಗಳವಾರ ಆರಂಭವಾದ ಇಂಡೋನೇಶ್ಯಾ ಓಪನ್ ಬಿಡಬ್ಲುಎಫ್ ಸೂಪರ್-1000 ಟೂರ್ನಮೆಂಟ್‌ನಲ್ಲಿ ಭಾರತೀಯ ಡಬಲ್ಸ್ ತಂಡಗಳು ಶುಭಾರಂಭ ಮಾಡಿವೆ.

  ಯುವ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಹಾಗೂ ಮಿಕ್ಸೆಡ್ ಡಬಲ್ಸ್ ಜೋಡಿ ಪ್ರಣಯ್ ಜೆ.ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದರು. ಆದರೆ, ಮಹಿಳಾ ಡಬಲ್ಸ್ ತಂಡ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ಮಲೇಶ್ಯಾದ ವಿವಿಯನ್ ಹೂ ಹಾಗೂ ಚೆಂಗ್ ವೆನ್ ವಿರುದ್ಧ 20-22, 22-20, 20-22 ಗೇಮ್‌ಗಳಿಂದ ಸೋತಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಮಲೇಶ್ಯಾದ ಗೊ ಝಿ ಫೀ ಹಾಗೂ ನೂರ್ ಇಝುದ್ದೀನ್‌ರನ್ನು 21-19, 18-21, 21-19 ಗೇಮ್‌ಗಳಿಂದ ಮಣಿಸಿದರು. ಭಾರತದ ಹುಡುಗರು ಮೊದಲ ಗೇಮ್‌ನ್ನು ಜಯಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, 2ನೇ ಗೇಮ್‌ನ್ನು ಸೋತಿದ್ದರು. ನಿರ್ಣಾಯಕ ಗೇಮ್‌ನಲಿ ಭಾರತೀಯರು 20-17 ಮುನ್ನಡೆ ಸಾಧಿಸಿದ್ದು, ಅಂತಿಮವಾಗಿ 21-19ರಿಂದ ಜಯ ಸಾಧಿಸಿದರು.

 ಮಿಕ್ಸೆಡ್ ಡಬಲ್ಸ್ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಪ್ರಣವ್ ಹಾಗೂ ಸಿಕ್ಕಿ ಹಾಲೆಂಡ್‌ನ ರಾಬಿನ್ ಟಬೆಲಿಂಗ್ ಹಾಗೂ ಸೆಲೆನಾ ಪಿಯೆಕ್‌ರನ್ನು 25-23, 16-21, 21-19 ಗೇಮ್‌ಗಳಿಂದ ಮಣಿಸಿದರು. ಮೊದಲ ಗೇಮ್‌ನಲ್ಲಿ ಐದು ಅಂಕ ಉಳಿಸಿದ ಭಾರತೀಯರು ಬೇಗನೇ ತಿರುಗೇಟು ನೀಡಿದರು. ಡಚ್ ಜೋಡಿ ಎರಡನೇ ಗೇಮ್‌ನ್ನು 21-16ರಿಂದ ಸುಲಭವಾಗಿ ಜಯಿಸಿತು. ಮೂರನೇ ಗೇಮ್‌ನಲ್ಲಿ ಮತ್ತೊಮ್ಮೆ ತೀವ್ರ ಪೈಪೋಟಿ ಕಂಡುಬಂತು. 14-18 ಹಿನ್ನಡೆಯಲ್ಲಿದ್ದ ಪ್ರಣವ್-ಸಿಕ್ಕಿ ಆರು ಅಂಕ ಗಳಿಸಿ ಗೆಲುವಿನ ಹಳಿಗೆ ಬಂದರು. ಅಂತಿಮವಾಗಿ ಮೂರನೇ ಗೇಮ್‌ನ್ನು 21-19 ಅಂತರದಿಂದ ಗೆದ್ದುಕೊಂಡರು.

ವಿಶ್ವದ ನಂ.1 ಆಟಗಾರ ಕೆಂಟಾ ಮೊಮೊಟಾ ಪುರುಷರ ಸಿಂಗಲ್ಸ್‌ನಲ್ಲಿ ಮಲೇಶ್ಯಾದ ಡರೆನ್ ಲೀವ್ ವಿರುದ್ಧ 22-20, 21-14 ಗೇಮ್‌ಗಳ ಅಂತರದಿಂದ ಜಯ ದಾಖಲಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಮಾಜಿ ನಂ.2ನೇ ಆಟಗಾರ್ತಿ ದಕ್ಷಿಣ ಕೊರಿಯಾದ ಜಿ ಹ್ಯೂನ್ ಸಂಗ್ ಕೆನಡಾದ ಮಿಚೆಲ್ಲಿ ಲಿ ವಿರುದ್ಧ 20-22, 14-21 ಅಂತರದಿಂದ ಜಯ ಸಾಧಿಸಿದರು.

ಭಾರತದ ಸಿಂಗಲ್ಸ್ ಆಟಗಾರರು ಬುಧವಾರ ತಮ್ಮ ಮೊದಲ ಸುತ್ತಿನ ಪಂದ್ಯಗಳನ್ನು ಆಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News