ಮರಳಿ ಜನಾದೇಶ ಪಡೆಯಲಿ

Update: 2019-07-17 05:24 GMT

ಕರ್ನಾಟಕದ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಮತ್ತು ಉಳಿಸಿಕೊಳ್ಳಲು ನಡೆದಿರುವ ರಾಜಕೀಯ ಕಸರತ್ತುಗಳನ್ನು ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ. ಒಂದು ವಿಧದ ಅಪಹಾಸ್ಯದ ನಗು ಈ ನೋಟದಲ್ಲಿದೆಯೇನೋ ಎಂದೆನಿಸುತ್ತಿದೆ. ಏತನ್ಮಧ್ಯೆ ಅತೃಪ್ತರು ಮತ್ತು ವಿಧಾನಸಭಾಧ್ಯಕ್ಷರ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಬುಧವಾರಕ್ಕೆ ಕಾದಿರಿಸಿದೆ.

  ಕರ್ನಾಟಕದ ಬಹುತೇಕ ಕಡೆ ಬರಗಾಲದ ಕರಾಳ ಛಾಯೆ ಕವಿದಾಗ ಜನರ ನೆರವಿಗೆ ಧಾವಿಸಬೇಕಾದ ಸಮ್ಮಿಶ್ರ ಸರಕಾರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಬರಪರಿಹಾರ ಕಾರ್ಯದಲ್ಲಿ ಸರಕಾರದ ವೈಫಲ್ಯವನ್ನು ಬಯಲಿಗೆಳೆಯಬೇಕಾದ ಮುಖ್ಯ ಪ್ರತಿಪಕ್ಷ ಅತೃಪ್ತ ಶಾಸಕರ ಆರೈಕೆಯಲ್ಲಿ ತೊಡಗಿದೆ. ಇವರನ್ನು ಚುನಾಯಿಸಿ ವಿಧಾನಸಭೆಗೆ ಕಳುಹಿಸಿದ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕರ್ನಾಟಕದಲ್ಲಿ ಹಿಂದೆಂದೂ ಇಂಥ ವಿಚಿತ್ರ ಪರಿಸ್ಥಿತಿ ಉಂಟಾಗಿರಲಿಲ್ಲವೆಂದಲ್ಲ, ಆದರೆ ಈ ಬಾರಿಯದು ಹಿಂದಿಗಿಂತ ಭಿನ್ನವಾದ ಪರಿಸ್ಥಿತಿ. ವಿಧಾನ ಸಭಾಧ್ಯಕ್ಷರ ಕಚೇರಿಗೆ ರಾಜೀನಾಮೆ ಸಲ್ಲಿಸಿದ ಅತೃಪ್ತ ಶಾಸಕರು ಐಷಾರಾಮಿ ಹೊಟೇಲ್ ಸೇರಿ ವಾರದ ಮೇಲಾಯಿತು. ಇವರನ್ನು ಭೇಟಿ ಮಾಡಲು ಸಚಿವ ಡಿ.ಕೆ. ಶಿವಕುಮಾರ್ ಮತ್ತಿತರರು ನಡೆಸಿದ ಹರ ಸಾಹಸವನ್ನು ಮಹಾರಾಷ್ಟ್ರದ ಬಿಜೆಪಿ ಸರಕಾರ ವಿಫಲಗೊಳಿಸಿತು. ಸುಪ್ರೀಂ ಕೋರ್ಟ್ ಏನು ಹೇಳುತ್ತದೆ ಎಂದು ಈ ಶಾಸಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮುಖ್ಯ ಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರು ಕೂಡ ಅದೇ ನಿರೀಕ್ಷೆಯಲ್ಲಿದ್ದಾರೆ

ಮುಂಬೈನ ಐಷಾರಾಮಿ ಹೊಟೇಲ್‌ನಲ್ಲಿ ತಂಗಿದ ಶಾಸಕರ ಖರ್ಚು ವೆಚ್ಚಕ್ಕಾಗಿ ನಿತ್ಯವೂ ಲಕ್ಷಾಂತರ ರೂಪಾಯಿ ವ್ಯಯವಾಗುತ್ತಿದೆ. ಈ ಹೊಟೇಲ್‌ನ ಒಂದು ಐಷಾರಾಮಿ ಕೊಠಡಿಯ ಒಂದು ದಿನದ ಬಾಡಿಗೆಯೇ 26 ಸಾವಿರ ರೂಪಾಯಿ. ಒಬ್ಬೊಬ್ಬರಿಗೆ ಒಂದೊಂದು ಕೊಠಡಿ ನೀಡಲಾಗಿದೆ. ಇದರೊಂದಿಗೆ ಇವರ ನಿತ್ಯದ ಊಟ, ಪಾನೀಯ, ತಿಂಡಿ, ತೀರ್ಥಗಳ ಖರ್ಚು ಸೇರಿ ಒಬ್ಬೊಬ್ಬರಿಗೆ ತಲಾ ಒಂದು ಲಕ್ಷ ರೂಪಾಯಿ ವ್ಯಯವಾಗುತ್ತದೆ. ಇದರೊಂದಿಗೆ ಇವರು ಬೆಂಗಳೂರಿಂದ ಮುಂಬೈಗೆ ಹೋದ ವಿಶೇಷ ವಿಮಾನದ ಖರ್ಚು ಹಾಗೂ ಮಹಾರಾಷ್ಟ್ರದ ದೇವಾಲಯಗಳ ದರ್ಶನಕ್ಕಾಗಿ ಇವರು ಓಡಾಡುತ್ತಿರುವ ವಿಶೇಷ ವಿಮಾನದ ಖರ್ಚು ಲಕ್ಷಾಂತರ ರೂಪಾಯಿ ಆಗುತ್ತದೆ. ಇದನ್ನು ಭರಿಸುವವರು ಯಾರು? ಯಾವುದೇ ಲಾಭವಿಲ್ಲದೆ ಅವರು ಯಾಕೆ ಹೀಗೆ ರೆಸಾರ್ಟ್ ನಲ್ಲಿಟ್ಟು ಈ ಶಾಸಕರನ್ನು ತಮ್ಮ ಹಣದಲ್ಲಿ ಸಾಕುತ್ತಾರೆ? ಅವರ ಉದ್ದೇಶ, ಹಾಕಿದ ಹಣದ ಹಲವು ಪಟ್ಟು ಹಣವನ್ನು ದೋಚುವುದು. ಇನ್ನೊಂದು ಕಡೆ ಈ ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳುವವರೂ ರೆಸಾರ್ಟ್ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬೆಂಗಳೂರಿನ ರೆಸಾರ್ಟ್‌ಗಳಲ್ಲಿ ತಂಗಿದ್ದಾರೆ. ಎರಡೂ ಕಡೆಯವರು ತನ್ನ ಊರಿನ ಮುಖ ನೋಡಿ ಎರಡು ವಾರಗಳೇ ಗತಿಸಿದವು. ಮುಂಬೈ ಐಷಾರಾಮಿ ಹೊಟೇಲ್ ಹಾಗೂ ಬೆಂಗಳೂರಿನ ರೆಸಾರ್ಟ್‌ಗಳ ಖರ್ಚು ವೆಚ್ಚಗಳಿಗಾಗಿ ನಿತ್ಯ ಲಕ್ಷಾಂತರ ರೂಪಾಯಿಯನ್ನು ನೀರಿನಂತೆ ವ್ಯಯಿಸಲಾಗುತ್ತಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ನ ವಕೀಲರ ಫೀಸು ಬೇರೆ. ಅತೃಪ್ತ ಶಾಸಕರು, ಸ್ಪೀಕರ್ ಹಾಗೂ ಮುಖ್ಯ ಮಂತ್ರಿಗಳ ಪರವಾಗಿ ವಾದಿಸುವ ವಕೀಲರು ಒಂದು ಸಲಕ್ಕೆ ಒಂದು ಬಾರಿ ಎದ್ದು ನಿಂತು ವಾದಿಸಿದರೆ ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಕೊಡಬೇಕು. ಅತೃಪ್ತ ಶಾಸಕರ ವಕೀಲರ ಫೀಸು ಒಂದು ಸಲಕ್ಕೆ ಹದಿನೈದು ಲಕ್ಷ ರೂ.ಎಂದು ಹೇಳಲಾಗುತ್ತದೆ. ಅದೇ ರೀತಿ ಸ್ಪೀಕರ್ ಹಾಗೂ ಸಿಎಂ ಪರವಾಗಿ ವಾದಿಸುವವರ ಶುಲ್ಕ ಅನುಕ್ರಮವಾಗಿ ಹದಿನೆಂಟು ಲಕ್ಷ ರೂಪಾಯಿ ಹಾಗೂ ಹತ್ತು ಲಕ್ಷ ರೂಪಾಯಿ ಎಂದು ವರದಿಯಾಗಿದೆ.

 ಇಷ್ಟೆಲ್ಲ ಖರ್ಚು ಮಾಡಿ, ಕಸರತ್ತು ನಡೆಸಿ ಈ ಸರಕಾರವನ್ನು ಉಳಿಸಿಕೊಳ್ಳುವ ಅಗತ್ಯವಾದರೂ ಏನಿದೆ? ಈವರೆಗೆ ಕೋಮುವಾದಿ ಫ್ಯಾಶಿಸ್ಟ್ ಬಿಜೆಪಿ ಸರಕಾರ ಬರಬಾರದೆಂಬ ನೆಪವೊಂದು ಮೈತ್ರಿಯನ್ನು ಉಳಿಸಿಕೊಂಡು ಬಂದಿತ್ತು.ಆದರೆ ಸದ್ಯಕ್ಕೆ ಕಾಂಗ್ರೆಸ್, ಜೆಡಿಎಸ್ ಒಳಗಿರುವ ಶಾಸಕರು, ಜಾತ್ಯತೀತ ವೌಲ್ಯಕ್ಕೆ ಎಳ್ಳು ನೀರು ಬಿಟ್ಟಾಗಿದೆ. ಅಧಿಕಾರ ಮತ್ತು ಹಣದ ಮುಂದೆ ಜಾತ್ಯತೀತತೆ ಲೆಕ್ಕವೇ ಅಲ್ಲ ಎನ್ನುವುದನ್ನು ಅವರು ಬಹಿರಂಗವಾಗಿ ಸಾರಿದ್ದಾರೆ. ಅಧಿಕಾರ ಸಿಗುವುದಾದರೆ ಬಿಜೆಪಿಯೊಂದಿಗೆ ಕೈ ಜೋಡಿಸುವುದಕ್ಕೆ ಸಿದ್ಧ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಇಂತಹ ಮನಸ್ಥಿತಿಯನ್ನು ಹೊಂದಿರುವ ಶಾಸಕರನ್ನು ಮನವೊಲಿಸಿ ಮತ್ತೆ ತಮ್ಮ ಪಕ್ಷಕ್ಕೆ ಕರೆಸಿ, ಅವರನ್ನು ಅಧಿಕಾರ ಮತ್ತು ಹಣದ ಮೂಲಕ ಸಂತೃಪ್ತಗೊಳಿಸಿ ಸರಕಾರವನ್ನು ಉಳಿಸುವುದರಿಂದ ಈ ನಾಡಿಗೆ ಯಾವ ಲಾಭವೂ ಇಲ್ಲ. ಸದ್ಯದ ಸರಕಾರದ ಸ್ಥಿತಿ ನೋಡಿದ ಜನರು, ಬಿಜೆಪಿಯೆಂದಲ್ಲ, ಎಲ್ಲ ಪಕ್ಷಗಳ ಕುರಿತಂತೆಯೂ ಜಿಗುಪ್ಸೆಯನ್ನು ತಳೆದಿದ್ದಾರೆ. ಇಂತಹ ಸರಕಾರ ಉಳಿದರೆಷ್ಟು ಬಿಟ್ಟರೆಷ್ಟು ಎನ್ನುವ ನಿರ್ಧಾರಕ್ಕೆ ಆಯಾ ಪಕ್ಷದ ಕಾರ್ಯಕರ್ತರೇ ಬಂದಿದ್ದಾರೆ.

 ಅತೃಪ್ತ ಶಾಸಕರನ್ನು ತೃಪ್ತಿ ಪಡಿಸುವುದು ಸುಲಭವೇನೂ ಅಲ್ಲ. ಇಂತಹ ಬ್ಲಾಕ್‌ಮೇಲ್ ರಾಜಕಾರಣದಿಂದ ಲಾಭವಿದೆ ಎನ್ನುವುದು ಗೊತ್ತಾದಾಕ್ಷಣ ಇನ್ನಷ್ಟು ಶಾಸಕರು ಬೀದಿಗಿಳಿಯಬಹುದು. ಸರಕಾರದ ಮೇಲೆ ಒತ್ತಡ ತರಬಹುದು. ಇದು ಮುಂದೆ ವ್ಯಾಪಕ ಭ್ರಷ್ಟಾಚಾರಕ್ಕೂ ಕಾರಣವಾಗಬಹುದು. ನಾಯಕರು ಶಾಸಕರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನಾಡಿನ ಅಭಿವೃದ್ಧಿಯ ಕಡೆಗೆ ಗಮನ ಕೊಡಲು ಸಮಯ ಎಲ್ಲಿದೆ? ಇಂದು ಪಕ್ಷದ ಶಾಸಕರಿಗೇ ಸರಕಾರ ಉಳಿಯುವುದು ಬೇಡ ಎಂದ ಮೇಲೆ, ಯಾಕಾಗಿ ಅವರನ್ನು ಓಲೈಸಬೇಕು. ಸದ್ಯಕ್ಕೆ ಸರಕಾರ ಉಳಿಯುವುದು, ಅದರೊಳಗಿರುವ ಕೆಲವು ಶಕ್ತಿಗಳಿಗಷ್ಟೇ ಅತ್ಯಗತ್ಯವಾಗಿದೆ. ಸುಲಭವಾಗಿ ಸಿಕ್ಕಿದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವುದಕ್ಕೆ ಕುಮಾರಸ್ವಾಮಿಯವರಿಗೆ ಮನಸ್ಸಿಲ್ಲವಾಗಿದೆ. ಜೊತೆಗೆ ಡಿಕೆಶಿಗೂ ಈ ಸರಕಾರವನ್ನು ಹೇಗಾದರೂ ಮಾಡಿ ಉಳಿಸಬೇಕೆಂಬ ಹಟವಿದೆ. ಆದರೆ ಎಲ್ಲ ವೌಲ್ಯಗಳನ್ನು ಗಾಳಿಗೆ ತೂರಿ ಸರಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯ ಈ ನಾಡಿನ ಜನತೆಗಂತೂ ಇಲ್ಲ. ಒಂದು ವೇಳೆ ಈ ಸರಕಾರ ಬಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಅದೂ ಇಂತಹದೇ ಸನ್ನಿವೇಶವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ. ಹೊರಗಿನಿಂದ ಬಂದ ಶಾಸಕರಿಗೆ ಅಧಿಕಾರ ಕೊಟ್ಟಾಕ್ಷಣ ಬಿಜೆಪಿಯೊಳಗಿನ ಶಾಸಕರು ಬಂಡೇಳುವ ಸಾಧ್ಯತೆಗಳಿವೆ. ಸುಪ್ರೀಂಕೋರ್ಟ್ ಏನೇ ಹೇಳಲಿ. ಆದರೆ ಈ ಅತಂತ್ರ ಮುಂದುವರಿಯದೇ ಇರಬೇಕಾದರೆ, ಸರಕಾರ ವಿಸರ್ಜನೆಯಾಗಬೇಕು. ಈ ಎಲ್ಲ ಸಮಸ್ಯೆಗಳಿಗೆ ಹೊಸ ಜನಾದೇಶವೇ ಉತ್ತರ. ಹಣ, ಅಧಿಕಾರಕ್ಕಾಗಿ ಪ್ರಜಾಸತ್ತೆಯ ಮೌಲ್ಯಗಳನ್ನು ಕಾಲಡಿಗೆ ಹಾಕಿ ತುಳಿದ ಶಾಸಕರನ್ನು ಗುರುತಿಸಿ ಅವರನ್ನು ಮನೆಗೆ ಕಳುಹಿಸುವ ಮಹತ್ತರ ಹೊಣೆಗಾರಿಕೆ ಮತದಾರರ ಮೇಲಿದೆ. ಮತದಾರರು ತಮ್ಮ ಈ ಹೊಣೆಗಾರಿಕೆಯನ್ನು ಪ್ರಬುದ್ಧತೆಯಿಂದ ನಿರ್ವಹಿಸಿದಾಗಷ್ಟೇ ಅವರಿಗೆ ರಾಜಕಾರಣಿಗಳನ್ನು ಟೀಕಿಸುವ ಅರ್ಹತೆ ಬರುತ್ತದೆ. ಜೊತೆಗೆ ರಾಜಕಾರಣಿಗಳೂ ಅದರಿಂದ ಪಾಠವನ್ನು ಕಲಿಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News