ಕುಲಭೂಷಣ್ ಪ್ರಕರಣ: ಇಂದು ಐಸಿಜೆ ತೀರ್ಪು

Update: 2019-07-17 03:49 GMT
ಕುಲಭೂಷಣ್ ಜಾಧವ್

ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಯ ಭೀತಿಯಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಇಂದು ತೀರ್ಪು ನೀಡಲಿದೆ.

ಪ್ರಕರಣದ ಸಾರ್ವಜನಿಕ ವಿಚಾರಣೆ ಸಂಜೆ 3ಕ್ಕೆ (ಭಾರತೀಯ ಕಾಲಮಾನದ ಪ್ರಕಾರ ಸಂಜೆ 6.30) ನಡೆಯಲಿದೆ ಎಂದು ಹೇಗ್‌ನಲ್ಲಿರುವ ನ್ಯಾಯಾಲಯ ಪ್ರಕಟಿಸಿದೆ. ನ್ಯಾಯಾಧೀಶ ಅಬ್ದುಲ್‌ ಖಾವಿ ಅಹ್ಮದ್ ಯೂಸುಫ್ ತೀರ್ಪು ಪ್ರಕಟಿಸಲಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನ ವಿಚಾರಣೆ ನಡೆದಿತ್ತು. ಈ ವೇಳೆ ಭಾರತ ಹಾಗೂ ಪಾಕಿಸ್ತಾನ ತಮ್ಮ ವಾದ ಹಾಗೂ ಪ್ರತಿವಾದ ಮಂಡಿಸಿದ್ದವು. ನಿವೃತ್ತ ನೌಕಾಪಡೆ ಅಧಿಕಾರಿಯಾಗಿರುವ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ, ಪಾಕಿಸ್ತಾನ- ಚೀನಾ ಆರ್ಥಿಕ ಕಾರಿಡಾರ್ ಯೋಜನೆಯನ್ನು ಗುರಿ ಮಾಡಿದ ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆರೋಪದಲ್ಲಿ ಮರಣ ದಂಡನೆ ಶಿಕ್ಷೆ ಪ್ರಕಟಿಸಿದೆ. ಜತೆಗೆ ಬಲೂಚಿಸ್ತಾನದಲ್ಲಿ ಅರಾಜಕತೆ ಬಿತ್ತಿದ ಆರೋಪವೂ ಅವರ ಮೇಲಿದೆ.

ಜಾಧವ್ ಅವರ ಭೇಟಿಗೆ ಕೌನ್ಸಿಲರ್‌ಗೆ ಅವಕಾಶ ನೀಡದ ಪಾಕಿಸ್ತಾನ ಕ್ರಮದ ವಿರುದ್ಧ ಭಾರತ 2017ರ ಮೇ ತಿಂಗಳಲ್ಲಿ ಅಂತರ್ ರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಕುಲಭೂಷಣ್ ಜಾಧವ್  ದೇಶವನ್ನು ಅಸ್ಥಿರಗೊಳಿಸುವ ಸಲುವಾಗಿ ಮತ್ತು ಭಯೋತ್ಪಾದನೆ, ಆತ್ಮಹತ್ಯಾ ಬಾಂಬ್‌ ದಾಳಿ, ಅಪಹರಣ ಮತ್ತಿತರ ಕೃತ್ಯಗಳನ್ನು ನಡೆಸಲು ಬಲೂಚಿಸ್ತಾನಕ್ಕೆ ಕಳುಹಿಸಲಾಗಿತ್ತು ಎಂಬ ವಾದವನ್ನು ಪಾಕಿಸ್ತಾನದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್ ವಾದಿಸಿದ್ದರು.

ಜಾಧವ್ ಇರುವಿಕೆ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತು ಎಂದು 15 ಮಂದಿ ನ್ಯಾಯಾಧೀಶರ ಪೀಠದ ಮುಂದೆ ವಾದಿಸಿತ್ತು.

2016ರ ಮಾರ್ಚ್ 3ರಂದು ಇರಾನ್ ಮೂಲಕ ಪ್ರವೇಶಿಸಿದ ಜಾಧವ್ ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಆದರೆ ನಿವೃತ್ತಿ ಬಳಿಕ ವ್ಯವಹಾರ ಮಾಡುತ್ತಿದ್ದ ಜಾಧವ್ ಅವರನ್ನು ಇರಾನ್‌ನಿಂದ ಅಪಹರಿಸಲಾಗಿದೆ ಎನ್ನುವುದು ಭಾರತದ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News