ವಿಶ್ವ ಕಪ್ ಫೈನಲ್ ವಿವಾದ : ಕುತೂಹಲಕಾರಿ ಮಾಹಿತಿ ಬಹಿರಂಗಪಡಿಸಿದರು ಇಂಗ್ಲೆಂಡ್ ಆಟಗಾರ ಆಂಡರ್ಸನ್ !

Update: 2019-07-17 10:30 GMT

ಲಂಡನ್: ಐಸಿಸಿ ವಿಶ್ವ ಕಪ್ ಅಂತಿಮ ಹಣಾಹಣಿಯಲ್ಲಿ ಫೀಲ್ಡರ್ ಎಸೆದ ಚೆಂಡು ಬೆನ್ ಸ್ಟೋಕ್ಸ್ ಅವರ ಬ್ಯಾಟ್ ಗೆ ತಾಗಿ  ಬೌಂಡರಿ ಲೈನ್ ನತ್ತ  ಸಾಗಿದ  ನಂತರ ಒಂದು ಹೆಚ್ಚುವರಿ ರನ್ ನೀಡುವ ಅಂಪೈರ್ ನಿರ್ಣಯದ ಸುತ್ತ ಎದ್ದಿರುವ ವಿವಾದದ ನಡುವೆಯೇ ಇನ್ನೊಂದು ವಿಷಯ ಇದೀಗ ಹೊರಬಿದ್ದಿದೆ. ಬೆನ್ ಸ್ಟೋಕ್ಸ್ ಆ ಸಂದರ್ಭದಲ್ಲಿಯೇ ನಾಲ್ಕು ಓವರ್ ತ್ರೋ ರನ್ ಗಳನ್ನು ತೆಗೆದು ಹಾಕುವಂತೆ ಕೋರಿದ್ದರೆಂದು ಅವರ ಟೆಸ್ಟ್ ತಂಡದ ಸಹ ಆಟಗಾರ ಜಿಮ್ಮಿ ಆಂಡರ್ಸನ್ ಬಹಿರಂಗ ಪಡಿಸಿದ್ದಾರೆ. ಆದರೆ ಅಂತಿಮವಾಗಿ ಈ ಓವರ್ ತ್ರೋಗಳೇ ಇಂಗ್ಲೆಂಡ್ ಪಾಲಿಗೆ ನಿರ್ಣಾಯಕವಾಗಿ ನ್ಯೂಜಿಲೆಂಡ್ ಫೈನಲ್ ನಲ್ಲಿ ಸೋಲುವಂತಾಗಿದೆ.

ಬ್ಲ್ಯಾಕ್ ಕ್ಯಾಪ್ಸ್ ಫೀಲ್ಡರ್ ಮಾರ್ಟಿನ್ ಗಪ್ಟಿಲ್ ಅವರ ಒಂದು ತ್ರೋ ಎರಡು ರನ್ ಪೂರ್ಣಗೊಳಿಸುವ ಸಲುವಾಗಿ  ಕ್ರೀಸ್ ತಲುಪಲು ಡೈವ್ ಮಾಡುತ್ತಿದ್ದ ಸ್ಟೋಕ್ಸ್ ಅವರ ಬ್ಯಾಟ್ ಗೆ ತಾಗಿ ಬೌಂಡರಿಯತ್ತ ಸಾಗಿತ್ತು. ಅದಾಗಲೇ ಬ್ಯಾಟ್ಸ್ ಮೆನ್ ಗಳು ಪಡೆದಿದ್ದ ಎರಡು ರನ್ ಗಳ ಜತೆ ಇನ್ನೂ ನಾಲ್ಕು ರನ್ ಸೇರಿಸಿ ಅಂಪೈರ್ ಗಳು ಸ್ಟೋಕ್ಸ್ ಅವರಿಗೆ ಒಟ್ಟು ಆರು ರನ್ ನೀಡಿದ್ದರು. ಆದರೆ ಕ್ರಿಕಟ್ ಪರಿಣತರ ಪ್ರಕಾರ ಸ್ಟೋಕ್ಸ್ ಅವರಿಗೆ ಅಂಪೈರ್ ಐದು ರನ್ ಮಾತ್ರ ನೀಡಬಹುದಾಗಿತ್ತು. ಹಾಗೇನಾದರೂ ಆಗಿದ್ದರೆ ನ್ಯೂಜಿಲೆಂಡ್ ಸ್ಕೋರ್ 241ಕ್ಕಿಂತ ಇಂಗ್ಲೆಂಡ್ ಒಂದು ರನ್ ಕಡಿಮೆ ಗಳಿಸುತ್ತಿತ್ತು.

ಸ್ಟೋಕ್ಸ್ ಅವರು ಅಂಪೈರ್ ಗೆ ಮಾಡಿದ್ದ ಮನವಿಯನ್ನು ಪರಿಗಣಿಸಿದ್ದರೆ ಆ ಪಂದ್ಯ ಟೈ ಆಗುತ್ತಿರಲಿಲ್ಲ. ಮುಂಬರುವ ಆಸ್ಟ್ರೇಲಿಯಾ ಸರಣಿಗೆ  ಬೆನ್ ಸ್ಟೋಕ್ಸ್ ಅವರ ಸಹ ಆಟಗಾರರಾಗಲಿರುವ ಆಂಡರ್ಸನ್  ಪ್ರಕಾರ ಆ ಓವರ್ ತ್ರೋ ಸಂಭವಿಸಿದಾಗಲೇ  ಬೆನ್ ಸ್ಟೋಕ್ಸ್ ತಮ್ಮ ಕೈಗಳನ್ನು ಮೇಲೆತ್ತಿದ್ದರಲ್ಲದೆ ತಮ್ಮ ತೀರ್ಮಾನವನ್ನು ಕೈಬಿಡುವಂತೆ ಅಂಪೈರ್ ಗಳಿಗೆ ವಿನಂತಿಸಿದ್ದರು. “ಬೆನ್ ಸ್ಟೋಕ್ಸ್ ಅವರು ಅಂಪೈರ್ ಗಳ ಬಳಿ ಹೋಗಿ ‘ಆ ನಾಲ್ಕು ರನ್ ಗಳನ್ನು ತೆಗೆದು ಬಿಡಿ ನಮಗೆ ಅದು ಬೇಡ' ಎಂದಿದ್ದರು,'' ಎಂದು ಆಂಡರ್ಸನ್ ಹೇಳಿದ್ದಾರೆ.

“ಕ್ರಿಕೆಟ್ ನಿಯಮಗಳಂತೆ ಸ್ಟಂಪ್ಸ್ ಗೆ ಎಸೆದ ಚೆಂಡು ಬ್ಯಾಟ್ಸ್ ಮೆನ್ ಗೆ ತಾಗಿ ನಂತರ ಬೌಂಡರಿಯತ್ತ ಸಾಗಿದರೆ  ನಿಯಮದ ಪ್ರಕಾರ ಬ್ಯಾಟ್ಸ್ ಮೆನ್ ಓಡುವ ಅಗತ್ಯವಿಲ್ಲ ಹಾಗೂ ಅದನ್ನು ಬೌಂಡರಿ ಎಂದು ಪರಿಗಣಿಸಲಾಗುತ್ತದೆ,'' ಎಂದು ಆಂಡರ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News