ಬಿಜೆಪಿ ಸೇರಿದ ಅಲ್ಪೇಶ್ ಠಾಕೂರ್, ದವಳಸಿಂಹ್ ಝಾಲಾ

Update: 2019-07-18 18:10 GMT

ಗಾಂಧಿನಗರ, ಜು. 18: ಕಾಂಗ್ರೆಸ್‌ನ ಬಂಡಾಯ ಶಾಸಕರಾದ ಅಲ್ಪೇಶ್ ಠಾಕೂರ್ ಹಾಗೂ ದವಳಸಿಂಹ ಝಾಲಾ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಗುಜರಾತ್ ಬಿಜೆಪಿ ಅಧ್ಯಕ್ಷ ಜಿತು ವಾಘಾನಿ ಅವರ ಉಪಸ್ಥಿತಿಯಲ್ಲಿ ಅಲ್ಫೇಶ್ ಠಾಕೂರ್ ಹಾಗೂ ದವಳಸಿಂಹ ಝಾಲಾ ಬಿಜೆಪಿ ಸೇರಿದರು. ಎರಡು ಸ್ಥಾನಗಳಿಗಾಗಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತ ಚಲಾಯಿಸಿದ ಬಳಿಕ ಇಬ್ಬರು ನಾಯಕರು ಗುಜರಾತ್ ವಿಧಾನಸಭೆ ಸದಸ್ಯತ್ವಕ್ಕೆ ಜುಲೈ 5ರಂದು ರಾಜೀನಾಮೆ ನೀಡಿದ್ದರು.

‘‘ನಾನು ಮತ ಚಲಾಯಿಸಿದ ಕುರಿತು ವಿವಾದ ಉಂಟು ಮಾಡಲು ಕಾಂಗ್ರೆಸ್ ಪರಿವೀಕ್ಷಕರು ಪ್ರಯತ್ನಿಸಿದರು.’’ ಎಂದು 2017ರ ವಿಧಾನ ಸಭಾ ಚುನಾವಣೆಯಲ್ಲಿ ರಾಧಾನ್‌ಪುರದಿಂದ ಆಯ್ಕೆಯಾದ ಶಾಸಕ ಅಲ್ಪೇಶ್ ಠಾಕೂರ್ ಹೇಳಿದ್ದಾರೆ.

‘‘ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರ ನಂಬಿಕೆಯಿಂದ ನಾನು ಕಾಂಗ್ರೆಸ್ ಸೇರಿದ್ದೆ. ಆದರೆ, ದುರಾದೃಷ್ಟವೆಂದರೆ ಅವರು ನಮಗಾಗಿ ಏನನ್ನೂ ಮಾಡಿಲ್ಲ. ನಮಗೆ ಮತ್ತೆ ಮತ್ತೆ ಅವಮಾನ ಮಾಡಲಾಯಿತು. ಆದುದರಿಂದ ನಾನು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ದೇಶ ಹೊಸ ಎತ್ತರಕ್ಕೆ ಏರಬೇಕಾಗಿರುವುದರಿಂದ, ಪ್ರಾಮಾಣಿಕ ರಾಷ್ಟ್ರೀಯ ನಾಯಕತ್ವಕ್ಕೆ ನಾನು ಮತ ಚಲಾಯಿಸಿದ್ದೇನೆ. ಕಾಂಗ್ರೆಸ್‌ನಲ್ಲಿ ಇರುವಾಗ ಮಾನಸಿಕ ಒತ್ತಡ ಉಂಟಾಗುತ್ತಿತ್ತು. ಈಗ ನಾನು ಎಲ್ಲ ಹೊರೆಯಿಂದ ಮುಕ್ತನಾಗಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಪಕ್ಷದ ಕಾರ್ಯಕರ್ತರ ಮಾತನ್ನು ಆಲಿಸುವುದಿಲ್ಲ ಎಂದು ಬಯಾಡ್‌ನ ಶಾಸಕ ಝಾಲಾ ಹೇಳಿದ್ದಾರೆ. ‘‘ನಾನು ಶಾಸಕನಾದ ದಿನದಿಂದ ಪಕ್ಷದ ಹಿರಿಯ ನಾಯಕರು ನನಗೆ ಕಿರುಕುಳ ನೀಡಿದರು. ನಾನು ಈ ಬಗ್ಗೆ ಪಕ್ಷದ ಕಚೇರಿಗೆ ಲಿಖಿತ ಪತ್ರದ ಮೂಲಕ ಮಾಹಿತಿ ನೀಡಿದ್ದೆ. ಆದರೆ, ಪಕ್ಷದ ಕಾರ್ಯಕರ್ತರು ಇದನ್ನು ಆಲಿಸಲಿಲ್ಲ. ಪಕ್ಷದ ನಾಯಕರು ತಳಸ್ತರದ ಕಾರ್ಯಕರ್ತರ ಮಾತುಗಳನ್ನು ಆಲಿಸುವುದಿಲ್ಲ. ಆದುದರಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ’’ ಎಂದು ಝಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News