ನಿಮ್ಮ ಆಧಾರ್ ಮತ್ತು ಪಾನ್‌ಕಾರ್ಡ್ ಹೆಸರು ತಾಳೆಯಾಗುತ್ತಿಲ್ಲವೇ? ಆತಂಕ ಬೇಡ, ಪರಿಹಾರ ಮಾರ್ಗ ಇಲ್ಲಿದೆ.....

Update: 2019-07-18 18:37 GMT

 ಸೆ.1 ಆಧಾರ್-ಪಾನ್ ಜೋಡಣೆಗೆ ಅಂತಿಮ ಗಡುವಾಗಿದೆ. ಅಷ್ಟರೊಳಗೆ ತಮ್ಮ ಆಧಾರ್‌ನ್ನು ಪಾನ್‌ನೊಂದಿಗೆ ಜೋಡಣೆ ಮಾಡಿಕೊಳ್ಳದವರ ಪಾನ್ ಕಾರ್ಡ್‌ನ್ನು ಆದಾಯ ತೆರಿಗೆ ಇಲಾಖೆಯು ರದ್ದುಗೊಳಿಸಲಿದೆ. ಆಧಾರ್ ಮತ್ತು ಪಾನ್ ಕಾರ್ಡ್‌ಗಳಲ್ಲಿಯ ಹೆಸರು ತಾಳೆಯಾಗದಿದ್ದರೆ ಜೋಡಣೆ ವೇಳೆ ಸಮಸ್ಯೆ ಎದುರಾಗುತ್ತದೆ. ಆದರೆ ಅದಕ್ಕಾಗಿ ಆತಂಕ ಪಟ್ಟುಕೊಳ್ಳಬೇಕಿಲ್ಲ. ಆಧಾರ್ ದತ್ತಾಂಶ ಕೋಶದಲ್ಲಿಯ ನಿಮ್ಮ ಹೆಸರನ್ನು ಅಪ್‌ಡೇಟ್ ಮಾಡಲು ಬಯಸಿದ್ದಲ್ಲಿ ಅದನ್ನು ಆನ್‌ಲೈನ್ ಮೂಲಕ ಅಥವಾ ಆಧಾರ ನೋಂದಣಿ ಕೇಂದ್ರದಲ್ಲಿ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್‌ನ್ನು ನಿಮ್ಮ ಪಾನ್ ಕಾರ್ಡ್‌ನೊಂದಿಗೆ ಜೋಡಣೆಗೊಳಿಸಲು ಪ್ರಯತ್ನಿಸುತ್ತಿದ್ದೀರಿ,ಆದರೆ ಅದು ಆಗುತ್ತಿಲ್ಲ ಎಂದಿಟ್ಟುಕೊಳ್ಳೋಣ. ಇಂತಹ ಸಂದರ್ಭದಲ್ಲಿ ನೀವು ಆಧಾರ್ ಮತ್ತು ಪಾನ್‌ನಲ್ಲಿ ನೋಂದಾಯಿಸಿರುವ ನಿಮ್ಮ ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ. ಜೋಡಣೆ ಪ್ರಕ್ರಿಯೆ ಯಶಸ್ವಿಯಾಗಬೇಕಿದ್ದರೆ ಎರಡೂ ದಾಖಲೆಗಳಲ್ಲಿ ನಿಮ್ಮ ಜನ್ಮದಿನಾಂಕ, ಹೆಸರು ಮತ್ತು ಲಿಂಗಗಳಂತಹ ವಿವರಗಳು ತಾಳೆಯಾಗುತ್ತಿವೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಆಧಾರ್ ಕಾರ್ಡ್‌ನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ನೀಡಿದರೆ ಪಾನ್ ಕಾರ್ಡ್‌ನ್ನು ಆದಾಯ ತೆರಿಗೆ ಇಲಾಖೆಯು ನೀಡುತ್ತದೆ.
ಆಧಾರ್ ಮತ್ತು ಪಾನ್‌ಗಳಲ್ಲಿ ನಿಮ್ಮ ನೋಂದಾಯಿತ ಹೆಸರಿನಲ್ಲಿ ಪುಟ್ಟ ವ್ಯತ್ಯಾಸವಿದ್ದರೆ ನೀವು ಆಧಾರ್‌ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಆಧಾರ್‌ನ ಒಂದು ಬಾರಿಯ ಪಾಸ್‌ವರ್ಡ್(ಒಟಿಪಿ) ಬರುತ್ತದೆ. ಆದರೆ ಈ ಒಟಿಪಿಯನ್ನು ಪಡೆಯಲು ಪಾನ್ ಕಾರ್ಡ್‌ಧಾರಕರ ಆಧಾರ್ ಮತ್ತು ಪಾನ್‌ಗಳಲ್ಲಿ ಲಿಂಗ ಮತ್ತು ಜನ್ಮದಿನಾಂಕಕ್ಕೆ ಸಂಬಂಧಿಸಿದ ವಿವರಗಳು ಒಂದೇ ಆಗಿರಬೇಕು. ಆಧಾರ್ ಮತ್ತು ಪಾನ್‌ನಲ್ಲಿಯ ಹೆಸರುಗಳು ಸಂಪೂರ್ಣವಾಗಿ ತಾಳೆಯಾಗುತ್ತಿಲ್ಲವಾದರೆ ಜೋಡಣೆಯು ಯಶಸ್ವಿಯಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಬಂಧಿತ ವ್ಯಕ್ತಿಯು ಪಾನ್ ಡಾಟಾ ಬೇಸ್ ಅಥವಾ ಆಧಾರ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
 ಆಧಾರ್ ಕಾರ್ಡ್‌ನಲ್ಲಿಯ ನಿಮ್ಮ ಹೆಸರಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದ್ದರೆ ನೀವು ಯುಐಡಿಎಐನ ಎಸ್‌ಎಸ್‌ಯುಪಿ ಪೋರ್ಟಲ್‌ಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ನೀವು ಅಪ್‌ಡೇಟ್ ಅಥವಾ ಬದಲಾವಣೆ ಮಾಡಲು ಬಯಸಿರುವ ಕ್ಷೇತ್ರವನ್ನು ಆಯ್ದಕೊಂಡು ಮಾಹಿತಿಗಳನ್ನು ತುಂಬಬೇಕಾಗುತ್ತದೆ. ಈಗ ನೀವು ಈ ಫಾರ್ಮ್‌ನ್ನು ಸಬ್‌ಮಿಟ್ ಮಾಡಿದರೆ ಯುನಿಕ್ ರಿಕ್ವೆಸ್ಟ್ ನಂಬರ್(ಯುಆರ್‌ಎನ್) ಸೃಷ್ಟಿಯಾಗುತ್ತದೆ. ಈಗ ಅಪ್‌ಡೇಟ್‌ನ್ನು ಪರಿಶೀಲಿಸಲು ಬಿಪಿಒ ಸರ್ವಿಸ್ ಪ್ರೊವೈಡರ್‌ನ್ನು ಆಯ್ಕೆ ಮಾಡಿಕೊಳ್ಳಬೇಕು.( ಈ ಬಿಪಿಒ ನಿಮ್ಮ ಅಪ್‌ಡೇಟ್ ಆದ ಆಧಾರ್‌ನ್ನು ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತದೆ. ಇಷ್ಟಾದ ಬಳಿಕ ನೀವು ಪೂರಕ ದಾಖಲೆಗಳ ಮೂಲ ಸ್ಕಾನ್ ಅನ್ನು ಲಗತ್ತಿಸಬೇಕಾಗುತ್ತದೆ. ಅಂತಿಮವಾಗಿ ನಿಮ್ಮ ಆಧಾರ್ ಅಪ್‌ಡೇಟ್ ಸ್ಥಿತಿಗತಿಯನ್ನು ಯುಆರ್ ಎನ್ ಬಳಸಿ ನೀವು ಪರಿಶೀಲಿಸಬಹುದು.
ನಿಮ್ಮ ಆಧಾರ್ ಕಾರ್ಡ್‌ನಲ್ಲಿಯ ಹೆಸರು ಬದಲಾವಣೆಗೆ ಆನ್‌ಲೈನ್ ಮಾರ್ಗ ಬೇಡವೆಂದಿದ್ದರೆ ನೀವು ಆಧಾರ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು. https://uidai.gov.in/images/aadhaar_enrolment_correction_form_version_2.1.pdf ನಿಂದ ಆಧಾರ್ ಅಪ್‌ಡೇಟ್ ಫಾರ್ಮ್‌ನ್ನು ಸಹ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪಾನ್ ಕಾರ್ಡ್‌ನಲ್ಲಿಯ ನಿಮ್ಮ ಹೆಸರನ್ನು ಅಪ್‌ಡೇಟ್ ಮಾಡಲು ಬಯಸಿದ್ದರೆ ನೀವು https://www.onlineservices.nsdl.com/paam/endUserRegisterContact.htmlhttps://tin.tin.nsdl.com/pan/correctiondsc.html ಗೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ ನೀವು ಹಾಲಿ ಪಾನ್ ಡಾಟಾದಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿ/ಪಾನ್ ಕಾರ್ಡ್‌ನ ಮರುಮುದ್ರಣ(ಹಾಲಿ ಪಾನ್ ಡಾಟಾದಲ್ಲಿ ಯಾವುದೇ ಬದಲಾವಣೆಯಿಲ್ಲದೆ); ಈ ಪೈಕಿ ನಿಮಗೆ ಬೇಕಾದ ಅರ್ಜಿಯ ವಿಧವನ್ನು ಆಯ್ಕೆ ಮಾಡಿಕೊಳ್ಳಬೇಕು. ಅರ್ಜಿ ನಮೂನೆಯಲ್ಲಿ ಕೇಳಿರುವ ವಿವರಗಳನ್ನು ತುಂಬಿ ಸಬ್‌ಮಿಟ್ ಮಾಡಿದರೆ ಟೋಕನ್ ನಂ. ಸೃಷ್ಟಿಯಾಗುತ್ತದೆ ಮತ್ತು ಪಾನ್ ಅರ್ಜಿ ನಮೂನೆಯೊಂದಿಗ ಮಂದುವರಿಯಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಪಾನ್ ತಿದ್ದುಪಡಿ ಫಾರ್ಮ್ ಅನ್ನು ಇಲ್ಲಿಂದ ಪಡೆಯಬಹುದಾಗಿದೆ.

Writer - ಎನ್.ಕೆ.

contributor

Editor - ಎನ್.ಕೆ.

contributor

Similar News

ಜಗದಗಲ
ಜಗ ದಗಲ