ನಿಮಗೆ ಯಾಕಾಗಿ ನೊಬೆಲ್ ಪ್ರಶಸ್ತಿ ಕೊಟ್ಟರು?

Update: 2019-07-19 04:11 GMT

ವಾಷಿಂಗ್ಟನ್: ಇರಾಕ್‌ನಲ್ಲಿ ಯಝೀದಿಗಳಿಗೆ ನೆರವಾಗುವಂತೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ನಾದಿಯಾ ಮುರಾದ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೋರಿದಾಗ, ಮುರಾದ್ ಅವರ ಪರಿಚಯ ಸಿಗದೇ ಅಧ್ಯಕ್ಷರು ಗೊಂದಲಕ್ಕೆ ಒಳಗಾದ ಘಟನೆ ವರದಿಯಾಗಿದೆ.

2014 ರಿಂದ 2018ರ ಮಧ್ಯದಲ್ಲಿ ಡಯೇಶ್ ಸಂಘಟನೆ ತನ್ನ ವಿಸ್ತರಣಾ ಅಭಿಯಾನದ ವೇಳೆ ಅಪಹರಣಕ್ಕೆ ಒಳಗಾಗಿ ಲೈಂಗಿಕ ಜೀತಕ್ಕೆ ಸಿಲುಕಿಕೊಂಡ ಸಾವಿರಾರು ಯಝೀದಿ ಮಹಿಳೆಯರಲ್ಲಿ ಮುರಾದ್ ಕೂಡಾ ಒಬ್ಬರು. ಕಳೆದ ವರ್ಷ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು. ರಕ್ಷಣಾ ಇಲಾಖೆ ಜತೆಗೆ ಸಭೆಗೆ ಆಗಮಿಸಿದ್ದ ಟ್ರಂಪ್ ಅವರನ್ನು ಓವಲ್ ಕಚೇರಿಯಲ್ಲಿ ಭೇಟಿ ಮಾಡಿದ ಧಾರ್ಮಿಕ ದಾಳಿ ಸಂತ್ರಸ್ತರ ಗುಂಪಿನಲ್ಲಿ ಮುರಾದ್ ಕೂಡಾ ತೆರಳಿದ್ದರು.

ತನ್ನ ತಾಯಿ ಹಾಗೂ ಆರು ಮಂದಿ ಸಹೋದರರು ಹತ್ಯೆಗೀಡಾದ ಬಗ್ಗೆ ಹಾಗೂ 3000ಕ್ಕೂ ಹೆಚ್ಚು ಯಝೀದಿಗಳು ಇನ್ನೂ ನಾಪತ್ತೆಯಾಗಿರುವ ಬಗ್ಗೆ ಮುರಾದ್ ವಿವರಿಸಿದರು. ಇದಕ್ಕೆ ಟ್ರಂಪ್ ಅವರಿಂದ ಬಂದ ಪ್ರತಿಕ್ರಿಯೆ, "ನಿಮಗೆ ನೊಬೆಲ್ ಪ್ರಶಸ್ತಿ ಬಂದಿದೆಯೇ ? ನಂಬಲಸಾಧ್ಯ. ಯಾವ ಕಾರಣಕ್ಕಾಗಿ ಅವರು ನಿಮಗೆ ಕೊಟ್ಟಿದ್ದಾರೆ ?"

ಮುರಾದ್ ತಮ್ಮ ಕಥೆಯನ್ನು ಮತ್ತೆ ಬಣ್ಣಿಸಿದರು. "ಅದು ನನಗೆ ಬಂತು; ನಾನದನ್ನು ಬಿಡಲಿಲ್ಲ. ಐಸಿಸ್ ಕಾರ್ಯಕರ್ತರು ಸಾವಿರಾರು ಯಝೀದಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ನಾನು ಸ್ಪಷ್ಟಪಡಿಸಬಯಸುತ್ತೇನೆ. ಏನಾದರೂ ಮಾಡಿ; ಇದು ಒಂದು ಕುಟುಂಬದ ವಿಷಯವಲ್ಲ" ಎಂದು ಅಧ್ಯಕ್ಷರಲ್ಲಿ ಮೊರೆ ಇಟ್ಟರು.

ದೇಶದಲ್ಲಿ ಯಝೀದಿಗಳಿಗೆ ಸುರಕ್ಷಿತ ಜೀವನಕ್ಕೆ ಸೌಲಭ್ಯ ಕಲ್ಪಿಸುವಂತೆ ಇರಾಕ್ ಹಾಗೂ ಅರೆ ಸ್ವಾಯತ್ತ ಕುರ್ದಿಶ್ ಸರ್ಕಾರಕ್ಕೆ ಸೂಚನೆ ನೀಡುವಂತೆಯೂ ಅವರು ಕೋರಿದರು. "ಆ ಪ್ರದೇಶವನ್ನು ನಾನು ಚೆನ್ನಾಗಿ ಬಲ್ಲೆ" ಎಂದು ಟ್ರಂಪ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News