ನವಜಾತ ಶಿಶುವನ್ನು ಚರಂಡಿಗೆಸೆದ ಮಹಿಳೆ: ರಕ್ಷಿಸಿದ ಬೀದಿನಾಯಿಗಳು

Update: 2019-07-20 09:52 GMT

ಚಂಡೀಗಢ, ಜು.20: ಅಪರಿಚಿತ ಮಹಿಳೆಯೊಬ್ಬಳು ಪ್ಲಾಸ್ಟಿಕ್ ನಲ್ಲಿ ಸುತ್ತಿದ್ದ ನವಜಾತ ಹೆಣ್ಣು ಶಿಶುವನ್ನು ಚರಂಡಿಗೆಸೆದಿದ್ದು, ಮಗವನ್ನು ಅಲ್ಲಿಯೇ ಸಮೀಪದಲ್ಲಿದ್ದ ಬೀದಿನಾಯಿಗಳ ಗುಂಪೊಂದು ರಕ್ಷಿಸಿದ ಘಟನೆ ಇಲ್ಲಿನ ಕೈತಾಲ್ ಪಟ್ಟಣದಲ್ಲಿ ನಡೆದಿದೆ.

 ಜೋರಾಗಿ ಅಳುತ್ತಿದ್ದ ಶಿಶುವನ್ನು ಚರಂಡಿಯಿಂದ ಹೊರಗೆಳೆದು ನಾಯಿಗಳು ಬೊಗಳಲಾರಂಭಿಸಿದ್ದರಿಂದ ದಾರಿಹೋಕರು ಶಿಶುವನ್ನು ಗಮನಿಸಿದ್ದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಆ ಶಿಶುವಿನ ಪ್ರಾಣ ಉಳಿದಿದೆ.

ಹತ್ತಿರದಲ್ಲಿಯೇ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಈ ಸಂಪೂರ್ಣ ಘಟನಾವಳಿ ಸೆರೆಯಾಗಿದೆ. ಮಹಿಳೆ ಮಗುವನ್ನು ಎಸೆಯುತ್ತಿರುವುದು ಹಾಗೂ ಶಿಶುವನ್ನು ಬೀದಿ ನಾಯಿಗಳು ಹೊರಕ್ಕೆಳೆಯುತ್ತಿರುವುದೂ ವೀಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಗುರುವಾರ ಮುಂಜಾನೆ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಶಿಶುವಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  1,100 ಗ್ರಾಮ್‍ಗಿಂತಲೂ ಕಡಿಮೆ ತೂಗುತ್ತಿರುವ ಶಿಶುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಶಿಶುವನ್ನು ಚರಂಡಿಗೆಸೆದ ಅಪರಿಚಿತ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಹಾಗೂ ಆಕೆಗಾಗಿ ಶೋಧ ಮುಂದುವರಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News