ಲೋಕ ಜನಶಕ್ತಿ ಪಕ್ಷದ ಸಂಸದ ರಾಮಚಂದ್ರ ಪಾಸ್ವಾನ್ ನಿಧನ

Update: 2019-07-21 14:49 GMT

ಹೊಸದಿಲ್ಲಿ, ಜು.21: ಲೋಕ ಜನಶಕ್ತಿ ಪಕ್ಷದ ಸಂಸದ ರಾಮಚಂದ್ರ ಪಾಸ್ವಾನ್ ರವಿವಾರ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

57ರ ಹರೆಯದ ಪಾಸ್ವಾನ್ ಕೇಂದ್ರ ಸಚಿವ ಮತ್ತು ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸೋದರನಾಗಿದ್ದಾರೆ. ಅವರು ಬಿಹಾರದ ಸಮಸ್ಟಿಪುರವನ್ನು ಪ್ರತಿನಿಧಿಸುತ್ತಿದ್ದರು. ಪಾಸ್ವಾನ್ ನಿಧನದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, “ನನ್ನ ಚಿಕ್ಕಪ್ಪ ಹೊಸದಿಲ್ಲಿಯ ರಾಮಮನೋಹರ್ ಲೋಹಿಯ ಆಸ್ಪತ್ರೆಯಲ್ಲಿ ಮಧ್ಯಾಹ್ನ 1.24ಕ್ಕೆ ನಿಧನರಾಗಿದ್ದಾರೆ” ಎಂದು ತಿಳಿಸಿದ್ದಾರೆ. ಕಳೆದ ವಾರ ಹೃದಯಾಘಾತಕ್ಕೊಳಗಾಗಿದ್ದ ಪಾಸ್ವಾನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮೃತದೇಹವನ್ನು ರವಿವಾರ ಅವರ ದಿಲ್ಲಿಯ ನಿವಾಸದಲ್ಲಿ ಹಾಗೂ ಸೋಮವಾರ ಪಾಟ್ನಾದ ಎಲ್‌ಜೆಪಿ ಕಚೇರಿಯಲ್ಲಿ ಅಂತಿಮ ಗೌರವ ಸಲ್ಲಿಸಲು ಇಡಲಾಗುವುದು ಎಂದು ಚಿರಾಗ್ ತಿಳಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಪಾಟ್ನಾದಲ್ಲಿ ಸೋಮವಾರ ನಡೆಸಲಾಗುವುದು. 1999ರಲ್ಲಿ ಮೊದಲ ಬಾರಿ ಬಿಹಾರ ಸಮಸ್ಟಿಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾದ ರಾಮಚಂದ್ರ ಪಾಸ್ವಾನ್ ನಂತರ 2004 ಮತ್ತು 2014 ಹಾಗೂ ಕಳೆದ ಲೋಕಸಭಾ ಚುನಾವಣೆ ಸೇರಿದಂತೆ ಒಟ್ಟು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News