ಮುಂದಿನ ಡಿಫ್‌ಎಕ್ಸ್‌ಪೋ ಲಕ್ನೋದಲ್ಲಿ

Update: 2019-07-21 14:57 GMT

ಹೊಸದಿಲ್ಲಿ,ಜು.21: ಭಾರತದ ಮುಂದಿನ ಬೃಹತ್ ರಕ್ಷಣಾ ಪ್ರದರ್ಶನ ‘ಡಿಫ್‌ಎಕ್ಸ್‌ಪೋ’2020ರಲ್ಲಿ ಲಕ್ನೋದಲ್ಲಿ ನಡೆಯಲಿದ್ದು,ಪ್ರಮುಖ ಜಾಗತಿಕ ಮತ್ತು ದೇಶಿಯ ಮಿಲಿಟರಿ ಸಂಸ್ಥೆಗಳು ಪಾಲ್ಗೊಂಡು ತಮ್ಮ ಇತ್ತೀಚಿನ ಶಸ್ತ್ರಾಸ್ತ್ರಗಳನ್ನು ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಪ್ರದರ್ಶಿಸಲಿವೆ ಎಂದು ರಕ್ಷಣಾ ಸಚಿವಾಲಯವು ರವಿವಾರ ಪ್ರಕಟಿಸಿದೆ.

ಲಕ್ನೋದಲ್ಲಿ ಡಿಫ್‌ಎಕ್ಸ್‌ಪೋ ಮೊದಲ ಬಾರಿಗೆ ನಡೆಯಲಿದ್ದು,ಹಲವಾರು ಪ್ರಮುಖ ರಾಷ್ಟ್ರಗಳ ನಿಯೋಗಗಳು ಭಾಗವಹಿಸಲಿವೆ.

‘ಭಾರತ:ಉದಯೋನ್ಮುಖ ರಕ್ಷಣಾ ತಯಾರಿಕೆ ಕೇಂದ್ರ ’ಡಿಫ್‌ಎಕ್ಸ್‌ಪೋದ ವಿಷಯವಾಗಿರಲಿದ್ದು,ರಕ್ಷಣಾ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಂತರದ ಮೇಲೆ ಗಮನವನ್ನು ಕೇಂದ್ರಿಕರಿಸಲಿದೆ ಎಂದು ಸಚಿವಾಲಯವು ತಿಳಿಸಿದೆ.

ಡಿಫ್‌ಎಕ್ಸ್‌ಪೋ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಹಿಂದಿನ ಪ್ರದರ್ಶನವನ್ನು ಎಪ್ರಿಲ್,2018ರಲ್ಲಿ ಚೆನ್ನೈ ಸಮೀಪದ ತಿರುವಿಡಂತೈನಲ್ಲಿ ಆಯೋಜಿಸಲಾಗಿತ್ತು. 11ನೇ ಡಿಫ್‌ಎಕ್ಸ್‌ಪೋ ಮುಂದಿನ ವರ್ಷದ ಫೆಬ್ರುವರಿ ಮತ್ತು ಎಪ್ರಿಲ್ ನಡುವೆ ಲಕ್ನೋದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಭಾರತವನ್ನು ಮಿಲಿಟರಿ ತಯಾರಿಕೆ ಕೇಂದ್ರವನ್ನಾಗಿ ಪರಿವರ್ತಿಸುವ ಮತ್ತು ದೇಶಿಯ ರಕ್ಷಣಾ ಕೈಗಾರಿಕೆಯನ್ನು ಉತ್ತೇಜಿಸುವ ಮೂಲಕ 2025ರ ವೇಳೆಗೆ ಮಿಲಿಟರಿ ಸರಕುಗಳು ಮತ್ತು ಸೇವೆಗಳಲ್ಲಿ 1,70,000 ಕೋ.ರೂ.ಗಳ ವಹಿವಾಟು ಸಾಧನೆಯ ತನ್ನ ಗುರಿಯನ್ನು ಬೆಂಬತ್ತುವ ಮೊದಲ ಗಂಭೀರ ಪ್ರಯತ್ನವನ್ನಾಗಿ 10ನೇ ಡಿಫ್‌ಎಕ್ಸ್‌ಪೋವನ್ನು ಬಿಂಬಿಸಲು ಸರಕಾರವು ಶ್ರಮಿಸಿತ್ತು.

11ನೇ ಡಿಫ್‌ಎಕ್ಸ್‌ಪೋ ಉತ್ತರ ಪ್ರದೇಶವನ್ನು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಗಳಿಗೆ ಉದಯೋನ್ಮುಖ ಆಕರ್ಷಕ ತಾಣವನ್ನಾಗಿ ಬಿಂಬಿಸಲಿದೆ ಹಾಗೂ ರಕ್ಷಣಾ ಕೈಗಾರಿಕೆಯಲ್ಲಿ ಮೈತ್ರಿಗಳು ಮತ್ತು ಜಂಟಿ ಯೋಜನೆಗಳಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News