ಸಿಆರ್‌ಪಿಎಫ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಯಾನಿಟರಿ ಪ್ಯಾಡ್‌ಗಳ ಪೂರೈಕೆ, ವಿಲೇವಾರಿ ವ್ಯವಸ್ಥೆಗೆ ಮಂಜೂರಾತಿ

Update: 2019-07-21 15:02 GMT

ಹೊಸದಿಲ್ಲಿ,ಜು.21: ತನ್ನ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿಗಳಿಗಾಗಿ 500ಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್ ವಿತರಕ ಯಂತ್ರಗಳು ಮತ್ತು ಬಳಸಲಾದ ಪ್ಯಾಡ್‌ಗಳ ವೈಜ್ಞಾನಿಕ ವಿಲೇವಾರಿಗಾಗಿ ದಹನ ಯಂತ್ರಗಳ ಖರೀದಿ ಮತ್ತು ಸ್ಥಾಪನೆಗಾಗಿ ದೇಶದ ಅತ್ಯಂತ ದೊಡ್ಡ ಅರೆ ಮಿಲಿಟರಿ ಪಡೆಯಾಗಿರುವ ಸಿಆರ್‌ಪಿಎಫ್‌ಗೆ ಸರಕಾರವು 2,10,69,000 ರೂ.ಗಳ ವಿಶೇಷ ಹಣಕಾಸು ನೆರವನ್ನು ಮಂಜೂರು ಮಾಡಿದೆ.

ಒಟ್ಟು 288 ಪ್ಯಾಡ್ ವೆಂಡಿಂಗ್ ಯಂತ್ರಗಳು ಮತ್ತು ಅಷ್ಟೇ ಸಂಖ್ಯೆಯಲ್ಲಿ ಇನ್‌ಸಿನರೇಟರ್ ಅಥವಾ ದಹನ ಯಂತ್ರಗಳನ್ನು ಖರೀದಿಸಲು ಸರಕಾರವು ಸಿಆರ್‌ಪಿಎಫ್‌ಗೆ ಅನುಮತಿ ನೀಡಿದೆ. ಅಲ್ಲದೆ ತನ್ನ ಎಲ್ಲ ಆರೂ ಮಹಿಳಾ ಬಟಾಲಿಯನ್‌ಗಳು,ಕ್ಷಿಪ್ರ ಕ್ರಿಯಾ ಪಡೆಯ 15 ವಿಶೇಷ ದಂಗೆ ನಿಗ್ರಹ ಘಟಕಗಳು ಮತ್ತು ತರಬೇತಿ ಸಂಸ್ಥೆಗಳಲ್ಲಿ ಬಟ್ಟೆಗಳನ್ನು ಒಣಗಿಸುವ 738 ಸ್ಟೀಲ್ ಸ್ಟಾಂಡ್‌ಗಳ ಖರೀದಿಗೂ ಸಿಆರ್‌ಪಿಎಫ್‌ಗೆ ಗೃಹ ಸಚಿವಾಲಯವು ಅನುಮತಿ ನೀಡಿದೆ.

ಒಂದು ಪ್ಯಾಡ್ ವೆಂಡಿಂಗ್ ಯಂತ್ರದ ಅಂದಾಜು ಬೆಲೆ 25,000 ರೂ.,ದಹನ ಯಂತ್ರದ ಬೆಲೆ ಸುಮಾರು 40,000 ರೂ. ಮತ್ತು ಪ್ರತಿ ಬಟ್ಟೆ ಒಣಗಿಸುವ ಸ್ಟಾಂಡ್‌ನ ಬೆಲೆ 3,000 ರೂ.ಆಗಿವೆ ಎಂದು ಗೃಹ ಸಚಿವಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಸಿಆರ್‌ಪಿಎಫ್ ಹೋರಾಟ ಕ್ಷೇತ್ರದಲ್ಲಿ 8,000ಕ್ಕೂ ಅಧಿಕ ಮಹಿಳಾ ಸಿಬ್ಬಂದಿಗಳನ್ನು ಹೊಂದಿದೆ. ಸರಕಾರದ ಮಂಜೂರಾತಿಯಿಂದ ಈ ಸಿಬ್ಬಂದಿಗಳ ಜೀವನಮಟ್ಟ ಮತ್ತು ಕಾರ್ಯಾಚರಣೆ ಸ್ಥಿತಿ ಉತ್ತಮಗೊಳ್ಳಲಿದೆ ಎಂದು ಪಡೆಯ ವಕ್ತಾರ ಡಿಐಜಿ ಮೋಸೆಸ್ ದಿನಕರನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News