×
Ad

ಭಾರತದ ಬಾಸ್ಕೆಟ್ ಬಾಲ್ ‌ನಲ್ಲಿ ಅಗ್ರ ಕ್ರಮಾಂಕ ಪಡೆದ ಮಂಗಳೂರಿನ ಸೌಕಿನ್ ಶೆಟ್ಟಿ

Update: 2019-07-21 23:40 IST

ಮಂಗಳೂರು, ಜು.21: ಮಂಗಳೂರಿನ ಸೌಕಿನ್ ಶೆಟ್ಟಿ ಇದೀಗ ಭಾರತದ ಬಾಸ್ಕೆಟ್ ಬಾಲ್ ನ ಅಗ್ರ ಕ್ರಮಾಂಕದ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಅಂತರ್‌ರಾಷ್ಟ್ರೀಯ ಬಾಸ್ಕೆಟ್ ಬಾಲ್  ಫೆಡರೇಷನ್ (ಫೀಬಾ) ಇದೀಗ ಪರಿಷ್ಕರಿಸಿರುವ ಕ್ರಮಾಂಕ ಪಟ್ಟಿಯಲ್ಲಿ ಸೌಕಿನ್ ಒಟ್ಟು 1,35,600 ಪಾಯಿಂಟ್ಸ್ ಗಳಿಸಿದ್ದಾರೆ. ಹೀಗಾಗಿ 23ರ ಹರೆಯದ ಇವರು ಭಾರತದ ಅಗ್ರ ಕ್ರಮಾಂಕದ ಅಟಗಾರರಾಗಿದ್ದಾರೆ. ವಿಶ್ವ ಮಟ್ಟದಲ್ಲಿ ಇವರು 1,238ನೇ ಕ್ರಮಾಂಕದಲ್ಲಿದ್ದಾರೆ.

ಇಂತಹ ಸಾಧನೆ ಮಾಡಿರುವ ಕರ್ನಾಟಕದ ಮೊದಲ ಬಾಸ್ಕೆಟ್‌ಬಾಲ್ ಅಟಗಾರ ಸೌಕಿನ್.

ಮಂಗಳೂರು ಬಾಸ್ಕೆಟ್ ಬಾಲ್

ಕ್ಲಬ್‌ನ ಪರ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಆಡುತ್ತಿದ್ದಾರೆ. ‘ಸೌಕಿನ್ ಅತ್ಯಂತ ಪ್ರತಿಭಾವಂತ ಆಟಗಾರ. ನಮ್ಮ ಕ್ಲಬ್ ಪರ ಒಂದು ದಶಕಕ್ಕೂ ಹೆಚ್ಚು ಕಾಲ ನೂರಾರು ಪಂದ್ಯಗಳಲ್ಲಿ ಆಡಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಕಾಲಕಾಲಕ್ಕೆ ಪ್ರೋತ್ಸಾಹ ನೀಡಿದ ಭಾರತ ಬಾಸ್ಕೆಟ್ಬಾಲ್ ಫೆಡರೇಷನ್ ಅಧ್ಯಕ್ಷ ಕೆ. ಗೋವಿಂದರಾಜ್ ಅವರಿಗೆ ನಮ್ಮ ಕ್ಲಬ್ ಚಿರ ಋಣಿ ’’ಎಂದು ಮಂಗಳೂರು ಬಾಸ್ಕೆಟ್‌ಬಾಲ್ ಕ್ಲಬ್‌ನ ಮುಖ್ಯಸ್ಥ ನವೀನ್ ಶೆಟ್ಟಿ ಹೇಳಿದ್ದಾರೆ.

6 ಅಡಿ 6 ಇಂಚು ಎತ್ತರ ಮತ್ತು 99 ಕೆ.ಜಿ. ದೇಹತೂಕದ ಅಜಾನುಬಾಹು ಸೌಕಿನ್ ಕೆಲವು ಸಮಯದ ಹಿಂದೆ ಔರಂಗಾಬಾದ್‌ನಲ್ಲಿ ನಡೆದಿದ್ದ ಭಾರತ ಕಿರಿಯರ ತಂಡದ ತರಬೇತಿ ಶಿಬಿರದಲ್ಲಿಯೂ ಪಾಲ್ಗೊಂಡಿದ್ದರು.

ಇದೀಗ ಮಂಗಳೂರು ಬಾಸ್ಕೆಟ್‌ಬಾಲ್

ಕ್ಲಬ್ ತಂಡವು ರಾಜ್ಯ ‘ಎ’ ಡಿವಿಷನ್‌ನಲ್ಲಿ ಆಡುತ್ತಿದೆ. ಈ ಕ್ಲಬ್ ಇಂತಹದ್ದೊಂದು ಚಾರಿತ್ರಿಕ ಎತ್ತರಕ್ಕೆ ಏರಲು ಸೌಕಿನ್ ಸಾಮರ್ಥ್ಯದ ನೆರವು ಅಪಾರವಾಗಿದೆ. ಈಚೆಗೆ ಜನಪ್ರಿಯವಾಗಿರುವ ತ್ರಿ ಆನ್ ತ್ರಿ ಮಾದರಿ ಬಾಸ್ಕೆಟ್‌ಬಾಲ್‌ನಲ್ಲಿ ಸೌಕಿನ್ ಅಪಾರ ಪರಿಣತಿ ಗಳಿಸಿದ್ದು, ಒಂದು ತಂಡದಲ್ಲಿ ಮೂವರೇ ಆಡಲಿರುವ ಈ ಮಾದರಿಯ ಪ್ರಮುಖ ಟೂರ್ನಿಗಳಲ್ಲಿ ಇವರು ಉತ್ಕೃಷ್ಟ ಸಾಮರ್ಥ್ಯ ತೋರಿದ್ದಾರೆ. ಇದರಿಂದಾಗಿ ಅವರು ಭಾರತ ಅಗ್ರ ಆಟಗಾರನಾಗಿ ಮೂಡಿ ಬಂದಿದ್ದಾರೆ.

ಇಂಜಿನಿಯರಿಂಗ್ ಪದವೀಧರ ರಾಗಿರುವ 23ರ ಹರೆಯದ ಸೌಕಿನ್ ಇದೀಗ ಈ ಕ್ರೀಡೆಯಲ್ಲಿ ಪೂರ್ಣಾವಧಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹಿಂದೆ ಇವರು ಕರ್ನಾಟಕದ ಹದಿನೆಂಟು ವರ್ಷದೊಳಗಿನವರ ರಾಷ್ಟ್ರೀಯ ತಂಡದಲ್ಲಿ ಗಮನ ಸೆಳೆದಿದ್ದರು. ಕಳೆದ ನ್ಯಾಷನಲ್ ಗೇಮ್ಸ್‌ನಲ್ಲಿಯೂ ಇವರು ಕರ್ನಾಟಕ ತಂಡದ ಪರ ಆಡಿದ್ದರು. ಕಳೆದ ಆವೃತ್ತಿಯ ತ್ರಿ ಆನ್ ತ್ರಿ ಪ್ರೊ ಬಾಸ್ಕೆಟ್‌ಬಾಲ್ ಭಾರತದ ಆರು ನಗರಗಳಲ್ಲಿ ನಡೆದಿತ್ತು. ಎರಡನೇ ಆವೃತ್ತಿಯ ತ್ರಿ ಆನ್ ತ್ರಿ ಪ್ರೊ ಬಾಸ್ಕೆಟ್‌ಬಾಲ್ ಟೂರ್ನಮೆಂಟ್ ಮುಂದಿನ ಆಗಸ್ಟ್ 2ರಿಂದ ಸೆಪ್ಟಂಬರ್ 29ರ ತನಕ ದೇಶದ 5 ನಗರಗಳಲ್ಲಿ ನಡೆಯಲಿದೆ. 12 ತಂಡಗಳು ಬಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಪಾಲ್ಗೊಳ್ಳಲಿವೆ. ಎರಡು ತಿಂಗಳುಗಳಲ್ಲಿ 9 ಸುತ್ತುಗಳಲ್ಲಿ ಟೂರ್ನಮೆಂಟ್ ನಡೆಯಲಿದೆ. ಚಂಡಿಗಡ, ಅಮೃತಸರ, ಮೊಹಾಲಿ, ಜಲಂಧರ್, ಮತ್ತು ಪಟಿಯಾಲದಲ್ಲಿ ಬಾಸ್ಕೆಟ್‌ಬಾಲ್ ಲೀಗ್ ನಡೆಯಲಿದೆ. ಪಂಜಾಬ್ ಸರಕಾರವು ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈ ಲೀಗ್‌ನಲ್ಲಿ ಸೌಕಿನ್ ಶೆಟ್ಟಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News