ಸಂಸದೀಯ ಜನತಂತ್ರ ದ ಸಂಕಟಗಳು

Update: 2019-07-21 18:36 GMT

ಸದ್ಯಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರ್ಯಾಯವಿಲ್ಲ. ಇಂದು ಬಂಡವಾಳಶಾಹಿ ಪ್ರಜಾಪ್ರಭುತ್ವ ವಾಗಿದ್ದರೂ ಜನರ ಪ್ರತಿರೋಧಕ್ಕೂ ಅವಕಾಶವಿದೆ. ಜನ ಇದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಜೈಲಿನಲ್ಲಿರಬೇಕಾದವರು ವಿಧಾನ ಸೌಧ ಪ್ರವೇಶಿಸಿರುವುದರಿಂದ ಅದರ ಘನತೆ ಮತ್ತು ಪಾವಿತ್ರಕ್ಕೆ ಚ್ಯುತಿ ಬಂದಿದೆ.


ಭಾರತದ ಸಂಸದೀಯ ಜನತಂತ್ರ ವ್ಯವಸ್ಥೆ ಹಿಂದೆಂದೂ ಕಂಡರಿಯದ ಬಿಕ್ಕಟ್ಟನ್ನು ಈಗ ಎದುರಿಸುತ್ತಿದೆ. ಚುನಾಯಿತ ಸದನಗಳ ಗುಣಮಟ್ಟ ಕ್ರಮೇಣ ಕುಸಿಯುತ್ತಿದೆ. ಒಂದು ಕಾಲದಲ್ಲಿ ಅಪರೂಪದ ಮೇಧಾವಿಗಳನ್ನು, ಚರ್ಚಾಪಟುಗಳನ್ನು ಹೊಂದಿದ್ದ ಶಾಸನ ಸಭೆಗಳು ಈಗ ಬೀದಿ ಕಾಳಗದ ರಣರಂಗಗಳಾಗುತ್ತಿವೆ. ಈ ಬಾರಿ ಲೋಕಸಭೆಗೆ ಚುನಾಯಿತರಾದವರಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಅದೇ ರೀತಿ ಕೋಟ್ಯಧಿಪತಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕರ್ನಾಟಕ ವಿಧಾನಸಭೆಯ ಕತೆ ಸಂಸತ್ತಿಗಿಂತ ಭಿನ್ನವಾಗಿಲ್ಲ. ನಾನು ರಾಜ್ಯ ವಿಧಾನ ಮಂಡಲದ ಉಭಯ ಸದನಗಳನ್ನು 70ರ ದಶಕದಿಂದ ನೋಡುತ್ತಿರುವೆ. 45 ವರ್ಷಗಳ ಹಿಂದಿನ ಆ ದಿನಗಳು ಈಗಲೂ ನೆನಪಿನಂಗಳದಲ್ಲಿ ಹಸಿರಾಗಿವೆ. ಬಾಲ್ಯದಲ್ಲೇ ರಾಜಕೀಯ ಆಸಕ್ತಿ ಹೊಂದಿದ ನಾನು ಆ ದಿನಗಳಲ್ಲಿ ಒಂದೆರಡು ಬಾರಿ ಬೆಂಗಳೂರಿಗೆ ಹೋದಾಗ, ವಿಧಾನಸಭಾ ಅಧಿವೇಶನಕ್ಕೆ ಹೋಗಿ ಕೇಳಿಸಿಕೊಂಡ ಮಾತುಗಳನ್ನು ಮರೆಯಲು ಸಾಧ್ಯವಿಲ್ಲ. ಸೋಶಿಯಲಿಸ್ಟ್ ಪಕ್ಷದ ಶಾಂತವೇರಿ ಗೋಪಾಲಗೌಡರು, ಕಮ್ಯುನಿಸ್ಟ್ ಪಕ್ಷದ ಬಿ.ವಿ. ಕಕ್ಕಿಲ್ಲಾಯರು, ಭೂಸುಧಾರಣಾ ಶಾಸನ ಮತ್ತು ಗೇಣಿದಾರರ ಸಮಸ್ಯೆಗಳ ಬಗ್ಗೆ ಮಾತಾಡುವಾಗ ಇಡೀ ಸದನದಲ್ಲಿ ನಿಶ್ಯಬ್ದ ವಾತಾವರಣ ಇರುತಿತ್ತು.

70 ದಶಕದ ನಂತರ ಅಂದರೆ 1972ರ ಚುನಾವಣೆಯಲ್ಲಿ ಗೋಪಾಲಗೌಡರು ಸ್ಪರ್ಧಿಸಲಿಲ್ಲ. ಅವರು ಸ್ಪರ್ಧಿಸುತ್ತಿದ್ದ ತೀರ್ಥಹಳ್ಳಿ ಮತಕ್ಷೇತ್ರದಿಂದ ಅದೇ ಸೋಶಿಯಲಿಸ್ಟ್ ಪಾರ್ಟಿಯ ಪರವಾಗಿ ಆರಿಸಿ ಬಂದಿದ್ದ ಕೋಣಂದೂರು ಲಿಂಗಪ್ಪ, ಸಾಗರದಿಂದ ಬಂದಿದ್ದ ಕಾಗೋಡು ತಿಮ್ಮಪ್ಪ ಹಾಗೂ ಸೊರಬದಿಂದ ಚುನಾಯಿತರಾಗಿದ್ದ ಎಸ್.ಬಂಗಾರಪ್ಪ ಆಗ ಸದನದಲ್ಲಿ ಹೀರೋಗಳು. ಕಮ್ಯುನಿಸ್ಟ್ ಪಕ್ಷದಿಂದ ಬೆಂಗಳೂರಿನಿಂದ ಎಂ.ಎಸ್.ಕೃಷ್ಣನ್, ಬೀದರ್ ಜಿಲ್ಲೆಯ ಹುಮನಾಬಾದ್‌ನಿಂದ ವಿ.ಎನ್. ಪಾಟೀಲ, ಬಂಟ್ವಾಳದಿಂದ ಬಿ.ವಿ.ಕಕ್ಕಿಲ್ಲಾಯ, ಉಳ್ಳಾಲದಿಂದ ಬಿ.ಎಂ . ಇದಿನಬ್ಬ, ಹರಿಹರದಿಂದ ಬಿ.ಬಸವಲಿಂಗಪ್ಪ ಮತ್ತು ಹಿರಿಯೂರಿನಿಂದ ಕೆ.ಎಚ್. ರಂಗನಾಥ ಚುನಾಯಿತರಾಗಿ ಬಂದಿದ್ದರು.

ಆಗ ದೇವರಾಜ ಅರಸು ಮುಖ್ಯಮಂತ್ರಿ, ಎಚ್.ಡಿ. ದೇವೇಗೌಡರು ಪ್ರತಿಪಕ್ಷ ನಾಯಕರು. ಸದನದಲ್ಲಿ ಆಗ ನಡೆಯುತ್ತಿದ್ದ ಚರ್ಚೆಗಳನ್ನು ಕೇಳಿದವರಿಗೆ ಇಂದಿನ ಸದನದ ಕಿರುಚಾಟ, ಅರಚಾಟ ನೋಡಿದಾಗ ಸಹಜವಾಗಿ ಬೇಸರವಾಗುತ್ತದೆ. ಸದನದಲ್ಲಿ ಆಗಲೂ ಪ್ರತಿಭಟನೆ, ಸಭಾತ್ಯಾಗಗಳು ಇರುತ್ತಿದ್ದವು. ಗೋಪಾಲಗೌಡರು ಒಮ್ಮೆ ಸಿಟ್ಟಿನಿಂದ ತಮ್ಮ ಮುಂದಿದ್ದ ಮೈಕನ್ನು ಮುರಿದು ನಂತರ ಕ್ಷಮೆಯಾಚಿಸಿದ್ದುಂಟು. ಇದೆಲ್ಲದರ ಜೊತೆಗೆ ಆಗ ಚುನಾಯಿತರಾದವರಿಗೆ ಸಂವಿಧಾನ ಮತ್ತು ಸದನದ ನಿಯಮಾವಳಿಗಳ ಬಗ್ಗೆ ತಿಳಿವಳಿಕೆ ಮತ್ತು ಗೌರವಗಳಿದ್ದವು. ಈಗಿನಂತೆ ಸದನದಲ್ಲಿ ಶರ್ಟು ಬಿಚ್ಚಿ ಯಾರೂ ಟೇಬಲ್ ಮೇಲೆ ನಿಲ್ಲುತ್ತಿರಲಿಲ್ಲ. ಆಗ ವೈಕುಂಠ ಬಾಳಿಗಾ, ಎಸ್.ಡಿ. ಕೋಠಾವಳೆ ಅವರಂಥ ವಿಧಾನ ಸಭಾಧ್ಯಕ್ಷರಿದ್ದರು. ಈಗಿರುವ ರಮೇಶ್‌ಕುಮಾರ್ ಕೂಡ ಅದೇ ಸತ್ಪರಂಪರೆಯ ವಾರಸುದಾರರಾಗಿ ಸದನದ ಮಾನ ಮರ್ಯಾದೆ ಕಾಪಾಡಿದ್ದಾರೆ. ಆದರೆ ಸದಸ್ಯರ ಗುಣಮಟ್ಟ ಮಾತ್ರ ಕುಸಿದಿದೆ.

90ರ ದಶಕದ ನಂತರ ವಿಧಾನ ಮಂಡಲದ ಗುಣಮಟ್ಟ ಕ್ರಮೇಣ ಕುಸಿಯುತ್ತಲೇ ಬಂತು. ಯಾವಾಗ ಗಣಿ ಉದ್ಯಮಿಗಳು, ರಿಯಲ್ ಎಸ್ಟೇಟ್ ದಂಗೆಕೋರರು, ಮರಳು ಸಾಗಾಟಗಾರರು ಸದನ ಪ್ರವೇಶಿಸಿದರೋ ಆಗಿನಿಂದ ಸದನದ ಘನತೆ ಕುಸಿಯತೊಡಗಿತು.
ಶಾಸನ ಸಭೆಗೆ ಬರುವವರಿಗೆ ತಾವು ಇಲ್ಲೇಕೆ ಬಂದಿದ್ದೇವೆ? ತಮ್ಮ ಕರ್ತವ್ಯವೇನು? ಸದನದ ಕಲಾಪವೆಂದರೆ ಏನು? ಕ್ರಿಯಾಲೋಪ ವೆಂದರೆ ಏನು? ಇವುಗಳ ಬಗ್ಗೆ ಕನಿಷ್ಠ ಪರಿಜ್ಞಾನ ಇರಬೇಕು. ಮಾತಾಡುವ ಚಾಕ ಚಕ್ಯತೆ ಇಲ್ಲದಿದ್ದರೆ ಕೇಳಿಸಿಕೊಳ್ಳುವ ಕಿವಿಗಳಾದರೂ ಇರಬೇಕು. ಸದನಕ್ಕೆ ಬರುವವರು ವಿದ್ಯಾವಂತರೇ ಆಗಬೇಕೆಂದಿಲ್ಲ. ಆದರೆ, ಕಲಿಯುವ ಆಸಕ್ತಿ ಇರಬೇಕು. ಈಗ ಗೆದ್ದು ಬರುವ ಅನೇಕರಲ್ಲಿ ದುಡ್ಡಿನ ಮದ ಬಿಟ್ಟರೆ ಬೇರೇನೂ ಇಲ್ಲ. ಅಂತಲೇ ರೆಸಾರ್ಟ್‌ಗಳಲ್ಲಿ ಕುಳಿತು ಸರಕಾರವನ್ನು ಬ್ಲ್ಲಾಕ್ ಮೇಲ್ ಮಾಡುತ್ತಾರೆ.

80ರ ದಶಕದ ಮುಂಚಿನ ವಿಧಾನಸಭೆಯಲ್ಲಿ ಒಂದೂ ಮಾತಾಡದೇ ಮೌನವಾಗಿ ಕುಳಿತು ಎದ್ದು ಹೋಗುವ ಸದಸ್ಯರು ಇರಲಿಲ್ಲವೆಂದಲ್ಲ. ಆದರೆ ಯಾರೂ ಅಸಭ್ಯ ವಾಗಿ ವರ್ತಿಸುತ್ತಿರಲಿಲ್ಲ. ನಮ್ಮ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಿಂದ ಬರುತ್ತಿದ್ದ ಬಿ.ಎಸ್.ಪಾಟೀಲ (ಮನಗೂಳಿ) ಅವರು ಸದನದಲ್ಲಿ ಮಾತಾಡುತ್ತಿದ್ದುದು ಅಪರೂಪ. ಇಲ್ಲವೇ ಇಲ್ಲ ಎಂದು ಹೇಳಬಹುದು. ಜನ ಅವರನ್ನು ಮನಗೂಳಿ ಗೌಡರೆಂದು ಕರೆಯುತ್ತಿದ್ದರು. ಅವರ ಗೌಡಿಕೆ ಶಾಸನ ಸಭಾ ಸದಸ್ಯತ್ವ ಪ್ರತಿಷ್ಠೆಯ ಸಂಕೇತವಾಗಿತ್ತು. ಆದರೆ, ಎಲ್ಲರೂ ಹೀಗಿರಲಿಲ್ಲ. ಅದೇ ಬಿಜಾಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದಿಂದ ಗೆದ್ದು ಬರುತ್ತಿದ್ದ ಪಡಗಾನೂರು ಶಂಕರಗೌಡ ಪಾಟೀಲರು ಮಾತಾಡಲು ನಿಂತರೆ ಇಡೀ ಸದನ ಗಡ ಗಡ ನಡಗುತ್ತಿತ್ತು. ಒಮ್ಮೆ ಬಿಜಾಪುರ ಜಿಲ್ಲೆಯಲ್ಲಿ ಬರಗಾಲ ಬಿದ್ದು ದನಕರುಗಳು ಮೇವಿಲ್ಲದೆ ಸಾಯತೊಡಗಿದವು. ಜನ ಉದ್ಯೋಗಕ್ಕಾಗಿ ಗುಳೆ ಹೋಗ ತೊಡಗಿದರು. ಆಗ ಈ ಬಗ್ಗೆ ಪ್ರಸ್ತಾಪಿಸಲು ಶಂಕರಗೌಡರು ಎದ್ದು ನಿಂತರು. ಸ್ಪೀಕರ್ ಅವಕಾಶ ಕೊಡಲಿಲ್ಲ. ಆಗ ಕೋಪದಿಂದ ಕುದಿಯುತ್ತಿದ್ದ ಪಡಗಾನೂರು ಶಂಕರ ಗೌಡರು, ‘ನನ್ನ ಜನ ಸಾಯುತ್ತಿದ್ದಾರೆ ನೀವು ಮಾತನಾಡಲು ಬಿಡುತ್ತಿಲ್ಲ’ ಎಂದು ಸದನದಲ್ಲಿ ಅಕ್ಷರಶಃ ಬೊಬ್ಬೆ ಹಾಕಿದರು. ಆಗ ಮುಖ್ಯ ಮಂತ್ರಿಯಾಗಿದ್ದ ದೇವರಾಜ ಅರಸರು ಸ್ವತಃ ಎದ್ದು ನಿಂತು ಅವರಿಗೆ ಮಾತಾಡಲು ಅವಕಾಶ ನೀಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಆಗ ಪ್ರತಿಪಕ್ಷ ಸಾಲಿನಲ್ಲಿದ್ದ ಶಂಕರಗೌಡರು ಮಂತ್ರಿ ಸ್ಥಾನಕ್ಕಾಗಿ, ನಿಗಮ, ಮಂಡಲಿಗಳಿಗಾಗಿ ಬೊಬ್ಬೆ ಹಾಕಿರಲಿಲ್ಲ. ಬರ ಪೀಡಿತ ಜನರ ನೋವು, ಸಂಕಟಗಳ ನಿವೇದನೆಗೆ ಅವಕಾಶ ಕೋರಿ ಪ್ರತಿಭಟಿಸಿದ್ದರು.

ಈಗ ಕರ್ನಾಟಕದ ಬಹುತೇಕ ಭಾಗ ಬರಗಾಲದಿಂದ ತತ್ತರಿಸಿ ಹೋಗಿರುವಾಗ, ಜನ ಕುಡಿಯವ ನೀರಿಗೆ ಬಾಯಿ ಬಾಯಿ ಬಿಡುತ್ತಿರುವಾಗ ನಮ್ಮ ಶಾಸಕರು ಮಂತ್ರಿ ಮಾಡಲಿಲ್ಲ ಎಂದು ರೆಸಾರ್ಟ್‌ನಲ್ಲಿ ಹೋಗಿ ಕುಳಿತಿದ್ದಾರೆ. ಆಗಿನ ಜನ ಪ್ರತಿನಿಧಿಗಳಿಗೂ ಈಗಿನ ಜನ ಪ್ರತಿನಿಧಿಗಳ ನಡುವಿನ ವ್ಯತ್ಯಾಸವಿದು.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಬಹುದೊಡ್ಡ ಪ್ರಮಾಣದಲ್ಲಿ ನೈತಿಕ ಅಧಃಪತನ ಆರಂಭವಾಯಿತು. 2008ರಲ್ಲಿ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾದಾಗ ಗಣಿ ಲೂಟಿಕೋರರು, ಬಳ್ಳಾರಿ ರಿಪಬ್ಲಿಕ್‌ನ ಖಳನಾಯಕರು ವಿಧಾನಸಭೆ ಪ್ರವೇಶ ಮಾಡಿ ಮಂತ್ರಿಗಳಾದರು. ಆಗ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಮರ್ಯಾದೆ ಇರಲಿಲ್ಲ. ಅವರು ಬಳ್ಳಾರಿಗೆ ಹೋದರೆ, ಅವರ ಸ್ವಾಗತಕ್ಕೆ ಅಧಿಕಾರಿಗಳು ಬರುತ್ತಿರಲಿಲ್ಲ. ಕೊನೆಗೆ ಯಡಿಯೂರಪ್ಪ ಪರಪ್ಪನ ಅಗ್ರ ಹಾರ ಪ್ರವೇಶ ಮಾಡಿ ಬಂದರು .

ಕಳೆದ ವಾರ ವಿಧಾನ ಸೌಧದಲ್ಲಿ ನಡೆದ ಘಟನೆಗಳು ಯಾರಿಗೂ ಮರ್ಯಾದೆ ತರುವುದಿಲ್ಲ. ನಮ್ಮ ಜನ ಪ್ರತಿನಿಧಿಗಳು ಬೀದಿ ರೌಡಿಗಳಂತೆ ವರ್ತಿಸಿದರು. ಶಾಸಕರೊಬ್ಬರ ಮೇಲೆ ನಡೆದ ಹಲ್ಲೆ, ಕೊರಳಪಟ್ಟಿ ಹಿಡಿದು ಎಳೆದಾಡಿದ್ದು ಅಸಹ್ಯವೆನಿಸಿತು. ಕಾಂಗ್ರೆಸ್‌ನವರು ತಮ್ಮ ಪಕ್ಷದ ಶಾಸಕನನ್ನು ರಾಜೀನಾಮೆ ನೀಡಿದ್ದೇಕೆ ಎಂದು ಆವೇಶದಿಂದ ಪ್ರಶ್ನಿಸುವಾಗ, ಅದಕ್ಕೆ ಸಂಬಂಧವೇ ಇಲ್ಲದ ಬಿಜೆಪಿಯ ರೇಣುಕಾಚಾರ್ಯ ಅಲ್ಲಿ ಹೋಗಿ ಅಸಭ್ಯ ಭಾಷೆಯಲ್ಲಿ ಕೂಗಾಡಿದ್ದು ಸರಿಯಲ್ಲ. ಈತನ ಇತಿಹಾಸ ಎಲ್ಲರಿಗೂ ಗೊತ್ತಿದೆ. ಹೊನ್ನಾಳಿಯ ಜನ ಈತನನ್ನು ಆರಿಸಿ ಕಳಿಸುತ್ತಾರೆ. ಬಸವಣ್ಣನವರ ಹೆಸರು ಹೇಳುವ ಮಠಾಧೀಶರ ಆಶೀರ್ವಾದವೂ ಈತನಿಗಿದೆ. ಇಂಥವರನ್ನು ವಿಧಾನಸಭೆಗೆ ಕಳಿಸಿದರೆ ಜನ ಸಾಮಾನ್ಯರ ಕಲ್ಯಾಣ ಹೇಗೆ ಆಗುತ್ತದೆ.

ಹಿಂದೆ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಸದನದಲ್ಲಿ ಶಾಸಕರನ್ನು ನಿಯಂತ್ರಿಸಲು ಸಮವಸ್ತ್ರ ಧರಿಸಿದ ಪೊಲೀಸರನ್ನೇ ಸದನಕ್ಕೆ ನುಗ್ಗಿಸಲಾಗಿತ್ತು. ಈ ಬಾರಿ ಮತ್ತೆ ವಿಧಾನ ಸೌಧಕ್ಕೆ ಪೊಲೀಸರು ಬಂದರು. ಇಡೀ ವಿಧಾನ ಸೌಧವನ್ನು ಎರಡು ತಾಸು ಪೊಲೀಸರು ವಶಪಡಿಸಿಕೊಂಡರು. ಈ ಪವಿತ್ರ ಕಟ್ಟಡದಲ್ಲಿ ಲಾಠಿ ಪ್ರಹಾರವೂ ನಡೆಯಿತು.

ರಮೇಶ್‌ಕುಮಾರ್ ಅವರಂಥ ಸಂವಿಧಾನ ನಿಷ್ಠ, ಅಧ್ಯಯನಶೀಲ ಸ್ಪೀಕರ್ ಇರುವುದರಿಂದ ವಿಧಾನ ಸಭೆಯ ಘನತೆ, ಗೌರವ ಪೂರ್ತಿ ಹಾಳಾಗಿಲ್ಲ. ಆದರೆ ಕಳೆದ ಹತ್ತು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಂದ ಜನರಿಗೆ ಸಹಜವಾಗಿ ಭ್ರಮನಿರಸನವಾಗಿದೆ. ಸದ್ಯಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರ್ಯಾಯವಿಲ್ಲ. ಇಂದು ಬಂಡವಾಳಶಾಹಿ ಪ್ರಜಾಪ್ರಭುತ್ವ ವಾಗಿದ್ದರೂ ಜನರ ಪ್ರತಿರೋಧಕ್ಕೂ ಅವಕಾಶವಿದೆ. ಜನ ಇದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಜೈಲಿನಲ್ಲಿರಬೇಕಾದವರು ವಿಧಾನ ಸೌಧ ಪ್ರವೇಶಿಸಿರುವುದರಿಂದ ಅದರ ಘನತೆ ಮತ್ತು ಪಾವಿತ್ರಕ್ಕೆ ಚ್ಯುತಿ ಬಂದಿದೆ.

ಇಂಥ ಅಸಭ್ಯ, ಅಸಹ್ಯ ರಾಜಕಾರಣಿಗಳ ವೇಷದ ಸಮಾಜ ವಿರೋಧಿ ಶಕ್ತಿಗಳಿಗೆ ಜನ ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ. ಒಮ್ಮೆ ಚುನಾಯಿತನಾದ ವ್ಯಕ್ತಿಯನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರ ಮತದಾರರಿಗೆ ಇಲ್ಲ. ಪಾಠ ಕಲಿಸಲು 5 ವರ್ಷ ಅವರು ಕಾಯಬೇಕಾಗುತ್ತದೆ. ಸಂವಿಧಾನದಲ್ಲಿ ಅಂಥ ಅವಕಾಶ ಇಲ್ಲವಾದರೂ ಜನತಾ ಪ್ರಾತಿನಿಧ್ಯ ಕಾನೂನಿಗೆ ತಿದ್ದುಪಡಿ ತಂದು ಚುನಾಯಿತ ಪ್ರತಿನಿಧಿಗಳನ್ನು ಅವರು ತಪ್ಪುಮಾಡಿದಲ್ಲಿ ವಾಪಸು ಕರೆಸಿಕೊಳ್ಳುವ ಅವಕಾಶವನ್ನು ಮತದಾರರಿಗೆ ಕಲ್ಪಿಸಬೇಕಿದೆ. ಅದಕ್ಕಾಗಿ ಸರಕಾರದ ಮೇಲೆ ಜನಾಂದೋಲನದ ಮೂಲಕ ಒತ್ತಡ ತರಬೇಕಾಗಿದೆ. ಒಟ್ಟಾರೆ ಭಾರತದ ಸಂಸದೀಯ ಜನತಂತ್ರ ವ್ಯವಸ್ಥೆ ಈಗ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದೆಡೆ ಕಾರ್ಪೊರೇಟ್ ಶಕ್ತಿಗಳು, ಇನ್ನೊಂದೆಡೆ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳು ಈ ಸಂಸದೀಯ ವ್ಯವಸ್ಥೆಯ ವಿರುದ್ಧ ಸಂಚು ನಡೆಸಿವೆ. ಇದನ್ನು ಉಳಿಸಿಕೊಳ್ಳಬೇಕಾಗಿದೆ.

ಕಳೆದ ಶುಕ್ರವಾರ ನಡೆದ ವಿಧಾನ ಸಭೆ ಅಧಿವೇಶನದಲ್ಲಿ ಬಸವಕಲ್ಯಾಣದ ಶಾಸಕ ನಾರಾಯಣರಾವ ಅದ್ಭುತ ಭಾಷಣ ಮಾಡಿದರು. ಆದೇ ರೀತಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಚಿವ ಕೃಷ್ಣಭೈರೇಗೌಡರ ವಿದ್ವತ್ಪೂರ್ಣ ಭಾಷಣಗಳು ಸದನದ ಕಲಾಪದ ಬಗ್ಗೆ ಭರವಸೆ ಮೂಡಿಸಿದವು. ಸ್ಪೀಕರ್ ರಮೇಶ್ ಕುಮಾರ್ ನನಗೆ ನಾಲ್ಕು ದಶಕಗಳಿಂದ ಗೊತ್ತು. ಅವರು ಸಭಾಧ್ಯಕ್ಷರಾಗಿ ಸದನದ ಕಲಾಪ ನಿರ್ವಹಿಸಿದ ರೀತಿ ಗಮನಾರ್ಹವಾಗಿತ್ತು. ಬಿಜೆಪಿಯಲ್ಲಿ ಸಂವಿಧಾನದ ವಿಧಿ, ವಿಧಾನಗಳ ಬಗ್ಗೆ ಮಾತಾಡುವವರಿಲ್ಲ. ಈಗ ಮಾತಾಡುವ ಮಾಧುಸ್ವಾಮಿ ಕೂಡ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ದಳದವರು ಚೆನ್ನಾಗಿ ನೋಡಿಕೊಂಡಿದ್ದರೆ, ಅವರು ಬಿಜೆಪಿಗೆ ಹೋಗುತ್ತಿರಲಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News