ವ್ಯಾಸರಾಯರ ವೃಂದಾವನ ಧ್ವಂಸಗೈದ ‘ಆಧುನಿಕ ಬಹಮನಿ ಸುಲ್ತಾನರ’ ಹೆಸರು ಮುಚ್ಚಿಟ್ಟ ತೇಜಸ್ವಿ ಸೂರ್ಯ!

Update: 2019-07-22 10:54 GMT

ಬೆಂಗಳೂರು, ಜು.22: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯ ವ್ಯಾಸರಾಯರ ವೃಂದಾವನವನ್ನು ಇತ್ತೀಚೆಗೆ ಕಿಡಿಗೇಡಿಗಳ ತಂಡವೊಂದು ದ್ವಂಸಗೈದಿತ್ತು. ಚಾರಿತ್ರಿಕ ಹಿನ್ನೆಲೆಯಿರುವ ವೃಂದಾವನ ದ್ವಂಸದ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ಕೃತ್ಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಪೊಲೀಸರು ಇನ್ನೂ ತನಿಖೆ ಪ್ರಾರಂಭಿಸುವ ಮೊದಲೇ ಕೆಲವರು ಈ ಪ್ರಕರಣಕ್ಕೆ ಮತೀಯ ಬಣ್ಣ ಬಳಿಯಲು ಆರಂಭಿಸಿದ್ದರು.

ಜು.18ರಂದು ಈ ಬಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, “ಸಂತ ವ್ಯಾಸರಾಜ ಸ್ವಾಮಿಯವರ 15ನೆ ಶತಮಾನದ ಬೃಂದಾವನ ಧ್ವಂಸದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಇಂತಹ ದಾಳಿಗಳು 5 ಶತಮಾನಗಳ ಹಿಂದೆ ಬಹಮಾನಿ ಸುಲ್ತಾನರಿಂದ ನಡೆದಿತ್ತು” ಎಂದಿದ್ದರು.

ಸಂಸದರ ಈ ಟ್ವೀಟ್ ಗೆ ಹಲವು ಪ್ರತಿಕ್ರಿಯೆಗಳು ಬಂದಿತ್ತು. “ಹಲವು ವಿಧಗಳಲ್ಲಿ ಜಿಹಾದ್ ರೂಪುಗೊಂಡಿದೆ” ಎಂದು ರೂಪ್ ದಾರಕ್ ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದ್ದರೆ, ಮಹಾದೇವ್ ಭಾರದ್ವಾಜ್ ಎಂಬ ಖಾತೆಯಿಂದ “ಮದ್ರಸಗಳು ಸೃಷ್ಟಿಸಿದ ಮುಸ್ಲಿಮರು-ಜಿಹಾದಿಗಳು-ಗಾಝಿಗಳು-ಉಗ್ರರು-ಅತ್ಯಾಚಾರಿಗಳು-ಲೂಟಿಕೋರರು-ದೇಶದ್ರೋಹಿಗಳ ಉದ್ದೇಶಗಳ ಬಗ್ಗೆ ನಿಮಗೆ ಅನುಮಾನವಿದೆಯೇ?” ಎನ್ನಲಾಗಿತ್ತು.

ಮೋಹನ್ ದೀಕ್ಷಿತ್ ಎನ್ನುವ ಖಾತೆಯಿಂದ “ಹಿಂದೂಗಳು ಜನರನ್ನು ಮತಾಂತರ ಮಾಡದೇ ಇರುವುದು ನಮ್ಮ ಸಂಸ್ಕೃತಿಯ ಮೊದಲ ತಪ್ಪು, ಎರಡನೆಯದು ನಾವು ಅನ್ಯಾಯದ ವಿರುದ್ಧ ಹೋರಾಡಲು ಒಗ್ಗಟ್ಟಾಗಿಲ್ಲ” ಎಂದಿತ್ತು.

ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದೇವಾಲಯದ ಅರ್ಚಕ ಸೇರಿ ಐವರನ್ನು ಬಂಧಿಸಿದ್ದಾರೆ. ತಾಡಪತ್ರಿಯ ಬುಗ್ಗ ರಾಮಲಿಂಗೇಶ್ವರ ದೇವಾಲಯದ ಅರ್ಚಕ ಟಿ.ಬಾಲನರಸಯ್ಯ(42), ವಾಹನ ಚಾಲಕ ಬಿ.ವಿಜಯಕುಮಾರ್, ಕೆ.ಕುಮ್ಮಟಕೇಶವ, ಡಿ.ಮನೋಹರ ಹಾಗೂ ಪೊಲ್ಲಾರಿ ಮುರಳಿ ಬಂಧಿತ ಆರೋಪಿಗಳಾಗಿದ್ದು, ಇದೇ ಪ್ರಕರಣದಲ್ಲಿ ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಕೊಪ್ಪಳ ಎಸ್ಪಿ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

ನಿಧಿಗಾಗಿ ಧ್ವಂಸ

ಆರೋಪಿಗಳು, ನಿಧಿ ಹಾಗೂ ವಜ್ರಗಳ ಆಸೆಗಾಗಿ ವ್ಯಾಸರಾಜ ಗುರುಗಳ ಸಮಾಧಿ ಸ್ಮಾರಕವನ್ನು ಧ್ವಂಸ ಮಾಡಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಇದಕ್ಕಾಗಿಯೇ, ಕೃತ್ಯ ನಡೆಸುವ ಮುನ್ನ ಸ್ಥಳದಲ್ಲಿ ಬುಗ್ಗ ರಾಮಲಿಂಗೇಶ್ವರ ದೇವಾಲಯದ ಅರ್ಚಕ ಟಿ.ಬಾಲನರಸಯ್ಯ ನೇತೃತ್ವದಲ್ಲಿ ಪೂಜೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವೃಂದಾವನ ದ್ವಂಸಗೈದ ಆರೋಪಿಗಳನ್ನು ಬಂಧನವಾಗುತ್ತಲೇ, ಈ ಪ್ರಕರಣಕ್ಕೆ ಕೋಮುಬಣ್ಣ ಬಳಿಯಲು ಮುಂದಾಗಿದ್ದವರೆಲ್ಲರೂ ಸುಮ್ಮನಾಗಿದ್ದಾರೆ.

ತೇಜಸ್ವಿ ಸೂರ್ಯರ ಮೇಲಿನ ಟ್ವೀಟ್ ಗೆ ನಿನ್ನೆ ಹಲವರು ರಿಪ್ಲೈ ಮಾಡುತ್ತಿದ್ದು, 5 ಬಹಮನಿ ಸುಲ್ತಾನರ ಹೆಸರುಗಳು ಎಂದು ಆರೋಪಿಗಳ ಹೆಸರನ್ನು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಬಹಮನಿ ಸುಲ್ತಾನರ’ ಹೆಸರು ಬಹಿರಂಗಪಡಿಸಿ ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News