ಹಾಂಕಾಂಗ್: ಪ್ರತಿಭಟನಕಾರರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

Update: 2019-07-22 17:01 GMT

ಹಾಂಕಾಂಗ್, ಜು. 22: ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರ ಮೇಲೆ ಸಂಘಟಿತ ಅಪರಾಧ ಗುಂಪುಗಳು ನಡೆಸಿದ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅದೇ ವೇಳೆ, ಈ ದಾಳಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರವಿವಾರ ರಾತ್ರಿ ಟಿ-ಶರ್ಟ್‌ಗಳನ್ನು ಧರಿಸಿದ ಹಾಗೂ ಬ್ಯಾಟ್, ಬಡಿಗೆ ಮತ್ತು ಕಬ್ಬಿಣದ ರಾಡ್‌ಗಳನ್ನು ಹಿಡಿದುಕೊಂಡ ಪುಂಡರು, ಬೃಹತ್ ಸರಕಾರ ವಿರೋಧಿ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಜನರ ಮೇಲೆ ದಾಳಿ ನಡೆಸಿದರು.

ದಾಳಿಯನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರದಲ್ಲಿ ಪ್ರತಿಭಟನಕಾರರು ತೋರಿಸಿದರು. ಯುವನ್ ಲಾಂಗ್ ರೈಲು ನಿಲ್ದಾಣ ಮತ್ತು ಸಬ್‌ವೇ ರೈಲುಗಳ ಒಳಗೆ ಪ್ರತಿಭಟನಕಾರರು ಮತ್ತು ಪತ್ರಕರ್ತರಿಗೆ ಪುಂಡರು ಹೊಡೆಯುತ್ತಿರುವುದು ಹಾಗೂ ನೆಲದಲ್ಲಿ ಭಾರೀ ರಕ್ತ ಹರಿಯುತ್ತಿರುವುದನ್ನು ವೀಡಿಯೊಗಳು ತೋರಿಸಿವೆ.

ದಾಳಿಯಲ್ಲಿ 45 ಮಂದಿ ಗಾಯಗೊಂಡಿದ್ದಾರೆ ಹಾಗೂ ಓರ್ವನ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

ಪೆಟ್ಟು ತಿನ್ನುತ್ತಿರುವವರು ನಿರಂತರವಾಗಿ ಕರೆಗಳನ್ನು ಮಾಡುತ್ತಿದ್ದರೂ, ಪೊಲೀಸರು ಒಂದು ಗಂಟೆಗೂ ಹೆಚ್ಚು ಅವಧಿಯ ಬಳಿಕ ಸ್ಥಳಕ್ಕೆ ಬಂದರು ಹಾಗೂ ಸೋಮವಾರ ಬೆಳಗ್ಗಿನವರೆಗೂ ಸುತ್ತಲಿನ ರಸ್ತೆಗಳಲ್ಲಿದ್ದ ದುಷ್ಕರ್ಮಿಗಳನ್ನು ಬಂಧಿಸಲು ವಿಫಲರಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News