ಜೆರುಸಲೇಮ್‌ನಲ್ಲಿ ಫೆಲೆಸ್ತೀನಿಯರ ಮನೆಗಳ ಧ್ವಂಸ ಆರಂಭಿಸಿದ ಇಸ್ರೇಲ್

Update: 2019-07-22 17:07 GMT

ಸುರ್ ಬಹೆರ್ (ಫೆಲೆಸ್ತೀನ್), ಜು. 22: ಜೆರುಸಲೇಮ್‌ನ ದಕ್ಷಿಣದಲ್ಲಿರುವ, ‘ಅಕ್ರಮ’ ಎಂಬುದಾಗಿ ಇಸ್ರೇಲ್ ಪರಿಗಣಿಸಿರುವ ಹಲವಾರು ಫೆಲೆಸ್ತೀನಿಯರ ಮನೆಗಳನ್ನು ಧ್ವಂಸಗೊಳಿಸುವ ಕಾರ್ಯವನ್ನು ಇಸ್ರೇಲ್ ಸೋಮವಾರ ಮುಂಜಾನೆ ಆರಂಭಿಸಿದೆ ಎಂದು ಎಎಫ್‌ಪಿ ಪತ್ರಕರ್ತರೊಬ್ಬರು ಹೇಳಿದ್ದಾರೆ. ಈ ಘಟನೆ ಬಗ್ಗೆ ಅಂತರ್‌ರಾಷ್ಟ್ರೀಯ ಕಳವಳ ವ್ಯಕ್ತವಾಗಿದೆ.

ಆಕ್ರಮಿತ ಪಶ್ಚಿಮ ದಂಡೆಯ ಗಡಿಯಲ್ಲಿರುವ ಇಸ್ರೇಲ್ ಭದ್ರತಾ ಬೇಲಿಯ ಸಮೀಪದಲ್ಲಿರುವ ಸುರ್ ಬಹೆರ್ ಎಂಬ ಸ್ಥಳದಲ್ಲಿರುವ ಕನಿಷ್ಠ ನಾಲ್ಕು ಕಟ್ಟಡಗಳನ್ನು ಸೋಮವಾರ ಮುಂಜಾನೆ ಡಝನ್‌ಗಟ್ಟಳೆ ಇಸ್ರೇಲ್ ಪೊಲೀಸರು ಮತ್ತು ಸೈನಿಕರು ಸೀಲ್ ಮಾಡಿದ್ದಾರೆ ಎಂದು ಪತ್ರಕರ್ತರು ಹೇಳಿದ್ದಾರೆ.

ಬಳಿಕ ನೆಲ ಸಮತಟ್ಟು ವಾಹನವೊಂದು ಅರ್ಧ ನಿರ್ಮಿಸಲ್ಪಟ್ಟಿರುವ ಎರಡು ಮಹಡಿಗಳ ಕಟ್ಟಡವೊಂದನ್ನು ಧ್ವಂಸಗೈಯಲು ಆರಂಭಿಸಿತು.

ನಿವಾಸಿಗಳು ಮತ್ತು ಪ್ರತಿಭಟನಕಾರರನ್ನು ಮನೆಗಳಿಂದ ಹೊರಗೆಳೆಯಲಾಯಿತು ಹಾಗೂ ಪತ್ರಕರ್ತರು ಅಲ್ಲಿಗೆ ಹೋಗುವುದನ್ನು ತಡೆಯಲಾಯಿತು.

ಆಕ್ರಮಿತ ಪಶ್ಚಿಮ ದಂಡೆ ಮತ್ತು ಇಸ್ರೇಲ್ ದೇಶವನ್ನು ಪ್ರತ್ಯೇಕಿಸುವ ತಡೆಬೇಲಿಗಳ ಸಮೀಪದಲ್ಲೇ ಈ ಕಟ್ಟಡಗಳು ಇವೆ. ಈ ಮನೆಗಳನ್ನು ಗೋಡೆಗೆ ತೀರಾ ಸಮೀಪದಲ್ಲಿ ಕಟ್ಟಲಾಗಿದೆ ಎಂದು ಇಸ್ರೇಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News