ಸಹಾಯಕ್ಕಾಗಿ ಫಿಫಾ ಮೊರೆ ಹೋದ ಪಂಜಾಬ್ ಸಹಿತ 6 ಐ-ಲೀಗ್ ಕ್ಲಬ್‌ಗಳು

Update: 2019-07-22 17:53 GMT

ಹೊಸದಿಲ್ಲಿ, ಜು.22: ಭಾರತೀಯ ಫುಟ್ಬಾಲ್‌ನಲ್ಲಿ ಉಳಿವಿಗಾಗಿ ಹೋರಾಡುತ್ತಿರುವ ತಮಗೆ ಸಹಾಯ ಹಸ್ತ ಚಾಚುವಂತೆ ಮಿನರ್ವ ಪಂಜಾಬ್, ಮೋಹನ್ ಬಗಾನ್ ಹಾಗೂ ಈಸ್ಟ್ ಬಂಗಾಳ ಸಹಿತ ಅಗ್ರ ಐ-ಲೀಗ್ ಕ್ಲಬ್‌ಗಳು ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊಗೆ ಪತ್ರದ ಮೂಲಕ ವಿನಂತಿಸಿವೆ.

ಚರ್ಚಿಲ್ ಬ್ರದರ್ಸ್, ಐಝ್ವಲ್ ಎಫ್‌ಸಿ ಹಾಗೂ ಗೋಕುಲಂ ಕೇರಳ ಎಫ್‌ಸಿ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಇತರ ಕ್ಲಬ್‌ಗಳಾಗಿವೆ.

ಮಿನರ್ವ ಪಂಜಾಬ್ ಮಾಲಕ ರಂಜಿತ್ ಬಾಲಾಜಿ ಸಹಿ ಇರುವ ಪತ್ರವನ್ನು ಫಿಫಾ ಅಧ್ಯಕ್ಷರಿಗೆ ಕಳುಹಿಸಲಾಗಿದೆ.

2010ರಲ್ಲಿ ಎಐಎಫ್‌ಎಫ್ ಹಾಗೂ ಐಎಂಜಿ-ರಿಲಯನ್ಸ್ ಮಧ್ಯೆ ನಡೆದಿರುವ ಮಾಸ್ಟರ್ ರೈಟ್ ಅಗ್ರಿಮೆಂಟ್(ಎಂಆರ್‌ಎ)ಪ್ರಕಾರ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ(ಎಐಎಫ್‌ಎಫ್)ಇಂಡಿಯನ್ ಸೂಪರ್ ಲೀಗ್‌ಗೆ(ಐಎಸ್‌ಎಲ್)ಉನ್ನತ ಲೀಗ್ ಸ್ಥಾನಮಾನ ನೀಡಲು ಮುಂದಾಗಿದೆ. ಈ ನಿರ್ಧಾರದ ವಿರುದ್ಧ ಕ್ಲಬ್‌ಗಳು ಹೋರಾಟ ನಡೆಸುತ್ತಿವೆ.

‘‘2013ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಐಎಸ್‌ಎಲ್‌ಗೆ ದೇಶದ ಅತ್ಯಂತ ಹಳೆಯ ಲೀಗ್ ಸ್ಥಾನಮಾನ ನೀಡಲು ಎಐಎಫ್‌ಎಫ್ ಚಿಂತಿಸುತ್ತಿರುವ ವಿಚಾರ ಮಾಧ್ಯಮಗಳಲ್ಲಿ, ಪತ್ರಿಕಾಹೇಳಿಕೆಗಳಲ್ಲಿ ವರದಿಯಾಗಿದೆ. ಐ-ಲೀಗ್ 2007ರಲ್ಲಿ ಆರಂಭವಾಗಿದ್ದು, ಇದು ಭಾರತದ ಮೊತ್ತ ಮೊದಲ ವೃತ್ತಿಪರ ಫುಟ್ಬಾಲ್ ಲೀಗ್ ಆಗಿದೆ. ಐ-ಲೀಗ್‌ಗೆ ಎರಡನೇ ಸ್ಥಾನಮಾನ ನೀಡಲು ಎಐಎಫ್‌ಎಫ್ ಬಯಸಿದೆ’’ ಎಂದು ಫಿಫಾಗೆ ಕ್ಲಬ್‌ಗಳು ಬರೆದಿರುವ ಪತ್ರದಲ್ಲಿ ತಿಳಿಸಿವೆ.

 ‘‘ಭಾರತೀಯ ಫುಟ್ಬಾಲ್‌ನ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಭಾರತ ಸಹಿತ ವಿಶ್ವದಲ್ಲಿ ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆ. ಎಐಎಫ್‌ಎಫ್ ಕಾರ್ಯವೈಖರಿಯ ಕುರಿತು ತನಿಖೆ ನಡೆಸುವ ಅಗತ್ಯವಿದೆ’’ ಎಂದು ಫಿಫಾ ಅಧ್ಯಕ್ಷರನ್ನು ವಿನಂತಿಸಲಾಗಿದೆ. ‘‘ಐ-ಲೀಗ್ ಕ್ಲಬ್‌ಗಳ ಭವಿಷ್ಯ ಸುರಕ್ಷಿತವಾಗಿದೆ. ಮುಂದಿನ 2-3 ವರ್ಷಗಳ ಕಾಲ ಐ-ಲೀಗ್ ಕೂಡ ಐಎಸ್‌ಎಲ್‌ನೊಂದಿಗೆ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳಲು ಎಎಫ್‌ಸಿಗೆ ತಿಳಿಸಿದ್ದೇನೆ’’ ಎಂದು ಈ ತಿಂಗಳಾರಂಭದಲ್ಲಿ ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದರು.

‘‘ಐಎಸ್‌ಎಲ್ ಕ್ಲಬ್‌ಗಳ ಮಾಲಕತ್ವದ ಫ್ರಾಂಚೈಸಿ ಆಧರಿತ ವಾಣಿಜ್ಯ ಉದ್ಯಮವಾಗಿದೆ. ಇದರಲ್ಲಿ 35ಕ್ಕೂ ಅಧಿಕ ವಯಸ್ಸಿನ ಆಟಗಾರರಿದ್ದಾರೆ. ವಿದೇಶದಲ್ಲಿ ತಿರಸ್ಕರಿಸಲ್ಪಟ್ಟ ಆಟಗಾರರನ್ನು ಲೀಗ್‌ನಲ್ಲಿ ಆಡಿಸಲಾಗುತ್ತಿದ್ದು, ಇದು ಭಾರತೀಯ ಫುಟ್ಬಾಲ್ ಗುಣಮಟ್ಟಕ್ಕೆ ಧಕ್ಕೆ ತಂದಿದೆ. ಐಎಸ್‌ಎಲ್, ಫುಟ್ಬಾಲ್ ಕ್ರೀಡೆಯ ಐಪಿಎಲ್ ಇದ್ದಂತೆ. ವಾಣಿಜ್ಯಲೀಗ್ ದೇಶದ ಅತ್ಯಂತ ಹಳೆಯ ಲೀಗ್ ಆಗಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಫಿಫಾ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News