ವಸಡಿನ ರೋಗಗಳು

Update: 2019-07-22 18:31 GMT

ವಸಡು ಎನ್ನುವುದು ಹಲ್ಲಿನ ಸುತ್ತ ಇರುವ ರಕ್ಷಣಾ ಕವಚವಾಗಿದ್ದು, ಹಲ್ಲಿನ ಬೇರಿನ ಜಾಗದ ಸುತ್ತ ಹಲ್ಲನ್ನು ಭದ್ರವಾಗಿ ಹಿಡಿದಿಟ್ಟುಕೊಂಡು ಹಲ್ಲನ್ನು ಅಲುಗಾಡದಂತೆ ನೋಡಿಕೊಳ್ಳುತ್ತದೆ. ಆರೋಗ್ಯವಂತ ವಸಡು ನಸುಗುಲಾಬಿ ಬಣ್ಣ ಹೊಂದಿರುತ್ತದೆ. ವಸಡಿನ ಆರೋಗ್ಯ ಹದಗೆಟ್ಟಾಗ ವಸಡಿನ ಬಣ್ಣ ನಿಧಾನವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ವಸಡಿನ ಉರಿಯೂತ ಜಾಸ್ತಿಯಾದಾಗ ವಸಡಿನ ಬಣ್ಣ ಬದಲಾಗುವುದರ ಜೊತೆಗೆ, ರಕ್ತ ಒಸರಲು ಆರಂಭವಾಗುತ್ತದೆ. ವಸಡಿನ ರೋಗಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

1. ವಸಡಿನ ಉರಿಯೂತ ಮತ್ತು ವಸಡಿನಲ್ಲಿ ರಕ್ತ ಒಸರುವುದು.

2. ವಸಡಿನಲ್ಲಿ ಕೀವು ತುಂಬುವಿಕೆ.

3. ವಸಡಿನ ಅಧಿಕ ಬೆಳವಣಿಗೆ ಮತ್ತು ಅಡ್ಡಾದಿಡ್ಡಿ ಬೆಳವಣಿಗೆ.

4. ವಸಡಿನಲ್ಲಿ ದುರ್ಮಾಂಸ ಬೆಳೆಯುವಿಕೆ.

1. ವಸಡಿನ ಉರಿಯೂತ ಮತ್ತು ರಕ್ತ ಒಸರುವಿಕೆ:

ಇದೊಂದು ಅತಿ ಸಾಮಾನ್ಯ ಖಾಯಿಲೆಯಾಗಿದ್ದು ಹಲ್ಲಿನ ಶುಚಿತ್ವವನ್ನು ಕಾಪಾಡಿಕೊಳ್ಳದಿದ್ದಲ್ಲಿ, ಈ ತೊಂದರೆ ಸರ್ವೇಸಾಮಾನ್ಯ, ನೂರಕ್ಕೆ ಶೇ. 80 ಮಂದಿ ಈ ವಸಡಿನ ಉರಿಯೂತದಿಂದ ಬಳಲುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಗುರುತಿಸಿ ದಂತ ವೈದ್ಯರ ಬಳಿ ಹಲ್ಲು ಶುಚಿಗೊಳಿಸಿಕೊಂಡು ಹಲ್ಲಿನ ಸುತ್ತ ತುಂಬಿಕೊಂಡಿರುವ ದಂತ ಪಾಚಿ ಮತ್ತು ದಂತಕಿಟ್ಟಗಳನ್ನು ತೆಗೆಸಿಕೊಳ್ಳತಕ್ಕದ್ದು. ಈ ರೀತಿ ಮಾಡಿದಾಗ ಹಲ್ಲಿನ ಸುತ್ತ ಇರುವ ಬ್ಯಾಕ್ಟೀರಿಯಾ ಮತ್ತು ಇತರ ಕೀಟಾಣುಗಳ ಸಂಖ್ಯೆ ಕಡಿಮೆಯಾಗಿ ವಸಡಿನ ಆರೋಗ್ಯ ವೃದ್ಧಿಸುತ್ತದೆ. ನಿರ್ಲಕ್ಷ್ಯ ವಹಿಸಿ ಹಲ್ಲು ಶುಚಿಗೊಳಿಸದಿದ್ದಲ್ಲಿ ವಸಡಿನ ಉರಿಯೂತ ಜಾಸ್ತಿಯಾಗಿ, ವಸಡಿನಲ್ಲಿ ರಕ್ತ ಒಸರುತ್ತದೆ. ಹಲ್ಲುಜ್ಜುವಾಗ, ಗಟ್ಟಿಯಾದ ಆಹಾರ ಸೇವಿಸುವಾಗ, ಗಟ್ಟಿ ಹಣ್ಣು ಹಂಪಲು ಸೇವಿಸುವಾಗ ವಸಡಿನಿಂದ ರಕ್ತ ಒಸರುತ್ತದೆ. ಇದರ ಹೊರತಾಗಿ ರಕ್ತದಲ್ಲಿ ರಕ್ತ ತಟ್ಟೆಗಳು ಅಥವಾ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಮೆಯಾದಾಗಲೂ, ಡೆಂಗ್ ಜ್ವರ ಬಂದಾಗಲೂ ಅಥವಾ ರಕ್ತದ ಕ್ಯಾನ್ಸರ್ ಬಂದಾಗ ವಸಡಿನಲ್ಲಿ ರಕ್ತ ಒಸರುತ್ತದೆ. ನೂರಕ್ಕೆ 95 ಶೇಕಡಾ ಮಂದಿಯಲ್ಲಿ ಹಲ್ಲಿನ ಶುಚಿತ್ವ ಕಾಪಾಡದಿದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ ಉಂಟಾಗುತ್ತದೆ.

2. ವಸಡಿನಲ್ಲಿ ಕೀವು ತುಂಬುವುದು:

ಸಾಮಾನ್ಯವಾಗಿ ಮಧುಮೇಹ ರೋಗಿಗಳಲ್ಲಿ ಈ ತೊಂದರೆ ಹೆಚ್ಚಾಗಿ ಕಾಣಿಸುತ್ತದೆ. ಹಲ್ಲಿನ ಸುತ್ತ ಇರುವ ದಂತಧಾರ ಎಲುಬು ಸವೆದು ಹೋಗಿ, ಹಲ್ಲಿನ ಸುತ್ತ ಆಳವಾದ ಗುಂಡಿಗಳು ಉಂಟಾಗಿ ಅದರಲ್ಲಿ ಬ್ಯಾಕ್ಟೀರಿಯಾ ವೃದ್ಧಿಸಿ ಹಲ್ಲಿನ ಸುತ್ತ ಕೀವು ತುಂಬಿಕೊಳ್ಳುತ್ತದೆ. ಬಾಯಿ ವಾಸನೆ, ಹಲ್ಲು ಅಲುಗಾಡುವುದು ಕೂಡಾ ಕಂಡು ಬರುತ್ತದೆ. ಕೆಲವೊಂದು ವಿಶೇಷ ಬ್ಯಾಕ್ಟೀರಿಯಾಗಳಿಂದಲೂ ಈ ರೀತಿ ಕೀವು ತುಂಬುವ ಸಾಧ್ಯತೆ ಇರುತ್ತದೆ. ದಂತ ವೈದ್ಯರು ಹಲ್ಲಿನ ಕ್ಷಕಿರಣ ತೆಗೆದು ದಂತಧಾರ ಎಲುಬಿನ ಗುಣಮಟ್ಟ ಪರಿಶೀಲಿಸಿ, ವ್ಯಕ್ತಿಯ ವಯಸ್ಸು, ದೇಹದ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.

3. ವಸಡಿನ ಅಧಿಕ ಬೆಳವಣಿಗೆ ಮತ್ತು ಅಡ್ಡಾದಿಡ್ಡಿ ಬೆಳವಣಿಗೆ:

ಕೆಲವೊಂದು ರೋಗಗಳಿಗೆ ಬಳಸುವ ಔಷಧಿ ಗಳಿಂದ ವಸಡು ಅಡ್ಡಾದಿಡ್ಡಿಯಾಗಿ ಬೆಳೆದು ಹಲ್ಲು ಮುಚ್ಚಿ ಬಿಡತ್ತದೆ. ಅಧಿಕ ರಕ್ತದೊತ್ತಡಕ್ಕೆ ಬಳಸುವ ನಿಫೆಡಿಪೈನ್ ಎಂಬ ಮಾತ್ರೆ ಮತ್ತು ಅಪಸ್ಮಾರ ರೋಗಕ್ಕೆ ಬಳಸುವ ಫೀನೋಬಾರ್ಬಿಟೋನ್ ಔಷಧಿ ವಸಡಿನ ಅಡ್ಡಾದಿಡ್ಡಿ ಅಧಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಇಂತಹ ರೋಗಿಗಳಲ್ಲಿ ಹಲ್ಲಿನ ಶುಚಿತ್ವಕ್ಕೆ ಅತಿ ಹೆಚ್ಚು ಗಮನ ಕೊಡಬೇಕು ಮತ್ತು ಪ್ರತಿ 6 ತಿಂಗಳಿಗೊಮ್ಮೆ ದಂತ ವೈದ್ಯರ ಭೇಟಿ ಅತಿ ಅವಶ್ಯಕ. ಸೈಕ್ಲೊಸ್ಪೋರಿನ್ ಮತ್ತು ಕ್ಯಾಲ್ಸಿಯಂ ಚಾನೆಲ್ ಬ್ಲಾಕರ್ ಎಂಬ ಗುಂಪಿನ ಔಷಧಿಗಳಿಂದಲೂ ಈ ತೊಂದರೆ ಬರಬಹುದು. ಕೆಲವೊಂದು ಅತಿ ವಿರಳ ಕಾರಣಗಳಾದ ಅನುವಂಶೀಯ ಕಾರಣದಿಂದಲೂ ವಸಡಿನ ಅಧಿಕ ಬೆಳವಣಿಗೆ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಯಾವ ಕಾರಣದಿಂದ ಆಗಿದೆ ಎಂಬುದನ್ನು ಅರಿತು, ದಂತ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಔಷಧಿಯ ಕಾರಣದಿಂದ ಉಂಟಾಗಿದ್ದಲ್ಲಿ, ಅಂತಹ ಔಷಧಿಗಳ ಬದಲು ಬೇರೆ ಔಷಧಿ ನೀಡುವಂತೆ ವೈದ್ಯರ ಬಳಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳ್ಳುತ್ತಾರೆ. ಒಮ್ಮೆ ಈ ರೀತಿ ಬೆಳೆದ ವಸಡನ್ನು ಕತ್ತರಿಸಿ ತೆಗೆದು ವಸಡಿಗೆ ಸೂಕ್ತ ರೂಪ ಮತ್ತು ಆಕಾರ ನೀಡಲಾಗುತ್ತದೆ.

4. ವಸಡಿನಲ್ಲಿ ದುರ್ಮಾಂಸ ಬೆಳೆಯುವುದು:

ವಸಡಿನಲ್ಲಿ ದುರ್ಮಾಂಸ ಬೆಳೆಯುವುದು ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ. ಇದನ್ನು ಗರ್ಭಾವಸ್ಥೆಯ ವಸಡಿನ ಗಡ್ಡೆಗಳು ಎಂದು ಕರೆಯುತ್ತಾರೆ. ರಸದೂತಗಳ ಏರುಪೇರು ಮತ್ತು ಹಲ್ಲಿನ ಶುಚಿತ್ವ ಕಾಪಾಡಿಕೊಳ್ಳದ ಕಾರಣದಿಂದ ಈ ತೊಂದರೆಗಳು ಉಂಟಾಗುತ್ತದೆ. ಮಗುವಿನ ಜನನದ ಬಳಿಕ ಈ ಗಡ್ಡೆಯನ್ನು ಕತ್ತರಿಸಿ ತೆಗೆದು ಹಲ್ಲು ಶುಚಿಗೊಳಿಸಿ ಚಿಕಿತ್ಸೆ ನೀಡಲಾಗುತ್ತದೆ. ರಸದೂತಗಳು ಸಹಜ ಸ್ಥಿತಿಗೆ ಬಂದಾಗ ಈ ತೊಂದರೆ ಮರುಕಳಿಸುವುದಿಲ್ಲ. ಇನ್ನು ಕೆಲವೊಮ್ಮೆ ಏಡ್ಸ್ ರೋಗ ಬಂದಾಗ, ಲಿಂಪೋಮ ಎಂಬ ರಕ್ತ ಸಂಬಂಧಿ ಕ್ಯಾನ್ಸರ್ ಬಂದಾಗ ವಸಡಿನಲ್ಲಿ ದುರ್ಮಾಂಸ ಬೆಳೆಯುವ ಸಾಧ್ಯತೆ ಇರುತ್ತದೆ. ವಸಡಿನಲ್ಲಿ ಕ್ಯಾನ್ಸರ್ ಬಂದಾಗಲೂ ಈ ರೀತಿ ದುರ್ಮಾಂಸ ಬರುತ್ತದೆ. ಬಯಾಪ್ಸಿ ಪರೀಕ್ಷೆ ಮುಖಾಂತರ ಯಾವ ರೀತಿಯ ದುರ್ಮಾಂಸ ಎಂಬುದನ್ನು ತಿಳಿದು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.

ಕೊನೆಮಾತು

ಮನುಷ್ಯನ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಹಲ್ಲಿಗೆ ಇರುವಷ್ಟೇ ಪ್ರಾಮುಖ್ಯತೆ ವಸಡಿಗೂ ಇದೆ. ಹಲ್ಲು ಎಷ್ಟೇ ಬೆಳ್ಳಗಾಗಿದ್ದರೂ ವಸಡಿನ ಆರೋಗ್ಯ ಹದಗೆಟ್ಟು ಉರಿಯೂತದಿಂದ ಕೆಂಪಾದಾಗ ಮುಖದ ಅಂದ ಕೆಡುತ್ತದೆ. ಈ ನಿಟ್ಟಿನಲ್ಲಿ ಹಲ್ಲಿನ ಆರೋಗ್ಯದ ಜೊತೆಗೆ ಒಸಡಿನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯಕ. ವಸಡಿನ ಆರೋಗ್ಯ ಹದಗೆಟ್ಟಾಗ ರಕ್ತ ಒಸರಿಕೊಂಡು ಬಾಯಿ ವಾಸನೆ ಉಂಟಾಗಿ, ಮನುಷ್ಯನ ಆತ್ಮ ವಿಶ್ವಾಸವೇ ಉಡುಗಿ ಹೋಗುತ್ತದೆ. ವಸಡಿನ ಆರೋಗ್ಯ ಸರಿ ಇಲ್ಲದವರಿಗೆ ಹೃದಯ ಸಂಬಂಧಿ ಕಾಯಿಲೆ ಮತ್ತು ಅಲ್‌ಝೈಮರ್ ಕಾಯಿಲೆ ಸಾಧ್ಯತೆ ಹೆಚ್ಚು ಎಂದೂ ಸಂಶೋಧನೆಗಳಿಂದ ಸಾಬೀತಾಗಿದೆ. ಈ ಕಾರಣದಿಂದಲೂ ನಾವೆಲ್ಲ ಎಚ್ಚೆತ್ತುಕೊಂಡು ವಸಡಿನ ಆರೋಗ್ಯವನ್ನು ಕಾಪಾಡಿಕೊಂಡರೆ ನೂರುಕಾಲ ನಗುನಗುತ್ತಾ ಬದುಕಲು ಸಾಧ್ಯವಿದೆ.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News