ರಾಜ್ಯಸಭೆಯಲ್ಲಿ ಪ್ರತಿಭಟನೆಗಳ ನಡುವೆಯೇ ಮಾನವ ಹಕ್ಕುಗಳ ಮಸೂದೆಗೆ ಅಂಗೀಕಾರ

Update: 2019-07-23 15:47 GMT

ಹೊಸದಿಲ್ಲಿ,ಜು.23: ಮಸೂದೆಯು ಕೇವಲ ಸರಕಾರದ ನಾಮನಿರ್ದೇಶಿತರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ಕ್ಕೆ ನೇಮಕಗೊಳಿಸಲು ಅವಕಾಶ ಕಲ್ಪಿಸುತ್ತದೆ ಎಂಬ ಪ್ರತಿಪಕ್ಷ ಟೀಕೆಗಳ ನಡುವೆಯೇ ಮಂಗಳವಾರ ರಾಜ್ಯಸಭೆಯು ಮಾನವ ಹಕ್ಕುಗಳ ರಕ್ಷಣೆ(ತಿದ್ದುಪಡಿ) ಮಸೂದೆ,2019ನ್ನು ಧ್ವನಿಮತದಿಂದ ಅಂಗೀಕರಿಸಿತು. ಮಸೂದೆಯು ಶುಕ್ರವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು.

ಚರ್ಚೆಯ ಅಂತ್ಯದಲ್ಲಿ ಟೀಕೆಗಳಿಗೆ ಉತ್ತರಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಇಂತಹ ಆತಂಕಕ್ಕೆ ಆಧಾರವಿಲ್ಲ. ಗೃಹಸಚಿವರ ಶಿಫಾರಸಿನ ಮೇರೆಗೆ ಪ್ರಧಾನಿಯವರು ಆಯೋಗದ ಅಧ್ಯಕ್ಷರನ್ನು ನೇಮಕಗೊಳಿಸುವುದಿಲ್ಲ. ಪ್ರಧಾನಿ ಮತ್ತು ಉಭಯ ಸದನಗಳ ಪ್ರತಿಪಕ್ಷ ನಾಯಕರನ್ನೊಳಗೊಂಡ ಸಮಿತಿಯು ಆ ಕೆಲಸವನ್ನು ಮಾಡುತ್ತದೆ. ಇಂತಹ ಸಮಿತಿಯಲ್ಲಿ ಸದನವು ವಿಶ್ವಾಸವನ್ನಿರಿಸಬೇಕು ಎಂದು ಹೇಳಿದರು.

  • ಅಧ್ಯಕ್ಷರ ಆಯ್ಕೆ

  1993ರ ಮಾನವ ಹಕ್ಕುಗಳ ಕಾಯ್ದೆಯಡಿ ಮಾಜಿ ಭಾರತದ ಮುಖ್ಯ ನ್ಯಾಯಾಧೀಶರನ್ನು ಮಾತ್ರ ಎನ್‌ಎಚ್‌ಆರ್‌ಸಿ ಅಧ್ಯಕ್ಷರನ್ನಾಗಿ ನೇಮಿಸಬೇಕಿತ್ತು. ನೂತನ ಮಸೂದೆಯಡಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರನ್ನೂ ಈ ಹುದ್ದೆಗೆ ನೇಮಕಗೊಳಿಸಬಹುದಾಗಿದೆ.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಸಂಸದ ವಿವೇಖ ತಂಖಾ ಅವರು,ಮಸೂದೆಯಲ್ಲಿನ ಹಲವಾರು ನಿಬಂಧನೆಗಳು ಎನ್‌ಎಚ್‌ಆರ್‌ಸಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಸರಕಾರಕ್ಕೆ ವಿವೇಚನಾಧಿಕಾರವನ್ನು ನೀಡಿವೆ ಎಂದು ಹೇಳಿದರೆ ಆರ್‌ಜೆಡಿ ಸಂಸದ ಮನೋಜ ಝಾ ಅವರು,ಮಸೂದೆಯು ‘ಹೌದಪ್ಪ ’ಗಳನ್ನು ಆಯೋಗಕ್ಕೆ ನೇಮಿಸಲು ಮಾರ್ಗವನ್ನು ಸುಗಮಗೊಳಿಸಿದೆ ಎಂದು ಟೀಕಿಸಿದರು.

  ಸೋನಭದ್ರಾ ಹತ್ಯಾಕಾಂಡ ಮತ್ತು ಕರ್ನಾಟಕದಲ್ಲಿಯ ರಾಜಕೀಯ ಬಿಕ್ಕಟ್ಟು ಕುರಿತು ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತ್ತಿದ್ದ ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆಯೇ ಮಸೂದೆಯ ಮೇಲೆ ಚರ್ಚೆ ಆರಂಭಗೊಂಡಿತ್ತು. ಮಧ್ಯಾಹ್ನ 2:20ಕ್ಕೆ ಮುಂದೂಡಲ್ಪಟ್ಟಿದ್ದ ಸದನವು ಮರುಸಮಾವೇಶಗೊಂಡಾಗ ತೃಣಮೂಲ ನಾಯಕ ಶೇಖರ್ ರೇ ಅವರು ತಿದ್ದುಪಡಿಗಳನ್ನು ಚರ್ಚಿಸಲು ಅಥವಾ ಮಂಡಿಸಲು ಸದನಕ್ಕೆ ಸಾಕಷ್ಟು ಸಮಯಾವಕಾಶ ದೊರಕಿರಲಿಲ್ಲ ಎಂದು ಪ್ರತಿಭಟನೆಯನ್ನು ದಾಖಲಿಸಿದರು. ಇದರ ಬೆನ್ನಲ್ಲೇ ತೃಣಮೂಲ ಸದಸ್ಯರು ಸಭಾತ್ಯಾಗ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News