ಜಪಾನ್ ಓಪನ್: ಸ್ಪರ್ಧೆಯಿಂದ ಹಿಂದೆ ಸರಿದ ಸೈನಾ

Update: 2019-07-23 17:44 GMT

ಟೋಕಿಯೊ, ಜು.23: ಎಂಟನೇ ಶ್ರೇಯಾಂಕದ ಸೈನಾ ನೆಹ್ವಾಲ್ ಜಪಾನ್ ಓಪನ್ ಬಿಡಬ್ಲುಎಫ್ ಸೂಪರ್-750 ಟೂರ್ನಮೆಂಟ್‌ನ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಅನಾರೋಗ್ಯ ಕಾರಣದಿಂದ ಸೈನಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಟೂರ್ನಿಯಲ್ಲಿ ಐದನೇ ಶ್ರೇಯಾಂಕದ ಪಿ.ವಿ. ಸಿಂಧು ಭಾರತದ ಸವಾಲು ಮುನ್ನಡೆಸಲಿದ್ದಾರೆ.

ನೆಹ್ವಾಲ್ ಕೊನೆಯ ಕ್ಷಣದಲ್ಲಿ ಟೂರ್ನಮೆಂಟ್‌ನಿಂದ ಹೊರ ನಡೆದಿದ್ದಾರೆ. 29ರ ಹರೆಯದ ನೆಹ್ವಾಲ್ ಹಲವು ರೀತಿಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಫಿಟ್ನೆಸ್ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಲಿದ್ದಾರೆ.

 ಗಾಯದ ಸಮಸ್ಯೆಯು ಅಗ್ರ ಶಟ್ಲರ್‌ಗಳಾದ ಸೈನಾ ಹಾಗೂ ಸಮೀರ್ ವರ್ಮಾ ಅವರ ಯೋಜನೆ ಮೇಲೆ ಪರಿಣಾಮಬೀರಲಿದೆ. ಈ ಇಬ್ಬರು ಇಂಡೋನೇಶ್ಯ ಓಪನ್‌ನಿಂದ ಹೊರಗುಳಿದಿದ್ದಾರೆ.

 ಸೈನಾ ಈ ವರ್ಷ ಪ್ರಶಸ್ತಿ ಜಯಿಸಿರುವ ಭಾರತದ ಏಕೈಕ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ. ಸಾಯಿ ಪ್ರಣೀತ್ ಹಾಗೂ ಕಿಡಂಬಿ ಶ್ರೀಕಾಂತ್ ಕ್ರಮವಾಗಿ ಸ್ವಿಸ್ ಓಪನ್ ಹಾಗೂ ಇಂಡಿಯಾ ಓಪನ್ ಫೈನಲ್‌ತಲುಪಿ ಪ್ರಶಸ್ತಿ ಹೊಸ್ತಿಲಲ್ಲಿ ಎಡವಿದ್ದರು. ಸಿಂಧು ಕೂಡ ಇಂಡೋನೇಶ್ಯ ಓಪನ್ ಫೈನಲ್‌ನಲ್ಲಿ ಸೋತಿದ್ದರು.

ನೆಹ್ವಾಲ್ ಗಾಯದ ಸಮಸ್ಯೆಯು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಪ್ರದರ್ಶನದ ಮೇಲೆ ಪರಿಣಾಮಬೀರಿತ್ತು.

ಎಪ್ರಿಲ್‌ನಲ್ಲಿ ಕೆಲವು ಟೂರ್ನಿಗಳಲ್ಲಿ ಆಡಲು ಸರಿಯಾದ ಸಮಯಕ್ಕೆ ಚೇತರಿಸಿಕೊಂಡಿದ್ದರು. ಮೂರು ಬಾರಿ ಪ್ರಶಸ್ತಿ ಜಯಿಸಿರುವ ಇಂಡೋನೇಶ್ಯ ಓಪನ್ ಟೂರ್ನಮೆಂಟ್‌ಗೆ ಮೊದಲು ಸೈನಾಗೆ ಮತ್ತೊಮ್ಮೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News