ಸುಪ್ರೀಂ ಕೋರ್ಟ್‌ನಿಂದ ಆಮ್ರಪಾಲಿ ಸಮೂಹದ ನೋಂದಣಿ ರದ್ದು

Update: 2019-07-23 17:59 GMT

ಹೊಸದಿಲ್ಲಿ, ಜು. 23: ಆಮ್ರಪಾಲಿ ಸಮೂಹದ ನೋಂದಣಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ ಹಾಗೂ ಅದರ ಉಳಿದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸ್ವಾಮಿತ್ವದ ನ್ಯಾಷನಲ್ ಬಿಲ್ಡಿಂಗ್ ಕನ್‌ಸ್ಟ್ರಕ್ಷನ್ ಕಾರ್ಪೊರೇಶನ್ (ಎನ್‌ಬಿಸಿಸಿ)ನನ್ನು ನಿಯೋಜಿಸಿದೆ. ಇದರಿಂದ ಮನೆ ಖರೀದಿಗಾಗಿ ತಮ್ಮ ಹಣವನ್ನು ಆಮ್ರಪಾಲಿ ಸಮೂಹದಲ್ಲಿ ಹೂಡಿಕೆ ಮಾಡಿದ ಸಾವಿರಾರು ಜನರು ನಿಟ್ಟುಸಿರು ಬಿಡುವಂತಾಗಿದೆ.

ನೋಯ್ಡ ಹಾಗೂ ಗ್ರೇಟರ್ ನೋಯ್ಡ ಅಧಿಕಾರಿಗಳು ಆಮ್ರಪಾಲಿ ಸಮೂಹಕ್ಕೆ ಭೋಗ್ಯಕ್ಕೆ ನೀಡಿದ ಭೂಮಿಯನ್ನು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠ ರದ್ದುಗೊಳಿಸಿದೆ. ಅಲ್ಲದೆ, ಸಮೂಹದ ಸಿಎಂಡಿ ಅನಿಲ್ ಶರ್ಮಾ, ಇತರ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳನ್ನು ಹಣ ವಂಚನೆ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.

ಪೀಠ ಹಿರಿಯ ನ್ಯಾಯವಾದಿ ಆರ್. ವೆಂಕಟರಮಣಿ ಅವರನ್ನು ಕೋರ್ಟ್ ರಿಸೀವರನ್ನಾಗಿ ನೇಮಕ ಮಾಡಿದೆ. ಭೋಗ್ಯ ರದ್ದುಗೊಂಡ ಬಳಿಕ ಆಮ್ರಪಾಲಿಯ ಎಲ್ಲ ಹಕ್ಕುಗಳು ಅವರಲ್ಲಿ ಇರಲಿದೆ. ಬಾಕಿ ಸಂಗ್ರಹಿಸಲು ಸಮೂಹದ ಸೊತ್ತುಗಳನ್ನು ಮಾರಾಟ ಮಾಡಲು ಯಾವುದೇ ಮೂರನೇ ವ್ಯಕ್ತಿಯ ಒಪ್ಪಂದದಲ್ಲಿ ಪ್ರವೇಶಿಸುವ ಅಧಿಕಾರವನ್ನು ವೆಂಕಟರಮಣಿ ಅವರಿಗೆ ಪೀಠ ನೀಡಿದೆ.

ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ ಅಡಿಯಲ್ಲಿ ಸಮೂಹದ ನೋಂದಣಿ ರದ್ದುಗೊಳಿಸಿರುವ ಪೀಠ, ಮನೆ ಖರೀದಿಗಾರರ ಹಣವನ್ನು ಇತರ ಉದ್ದೇಶಗಳಿಗೆ ಬಳಸುವ ಮೂಲಕ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಹಾಗೂ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಸಮೂಹ ಉಲ್ಲಂಘಿಸಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News