ಕೆಡಹುವುದು ಸುಲಭ- ರಚಿಸುವುದು ಕಷ್ಟ

Update: 2019-07-25 05:34 GMT

ಕೊನೆಗೂ ಮೈತ್ರಿ ಸರಕಾರ ಪತನವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ‘ಮೈತ್ರಿ ಸರಕಾರದ’ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಮಾಧ್ಯಮಗಳ ವಿಶ್ಲೇಷಣೆಗಳೂ ಈ ಮೂಲಕ ನಿಜವಾಗಿದೆ. ಆದರೆ ಇದು ಪಕ್ಷದ ನಾಯಕರಿಂದಾಗಿ ಮುರಿದ ಮೈತ್ರಿಯಲ್ಲ. ಬಿಜೆಪಿ ಈ ಸರಕಾರದ ಪತನಕ್ಕಾಗಿ ಕೋಟಿ ಕೋಟಿ ರೂಪಾಯಿಗಳನ್ನು ಸುರಿದಿದೆ. ಜನರ ಅಭಿವೃದ್ಧಿಗೆ ಸಂಬಂಧಪಟ್ಟು ಶಾಸಕರಲ್ಲಿ ಅತೃಪ್ತಿ ಹುಟ್ಟಿರುವುದಲ್ಲ. ಅದು ಹಣ ಮತ್ತು ಅಧಿಕಾರದ ಕಾರಣಕ್ಕಾಗಿ ಹುಟ್ಟಿರುವುದು. ಸರಕಾರದೊಳಗೆ ಇರುವುದಕ್ಕಿಂತ ಹೊರಗಿರುವುದರಿಂದಲೇ ಹೆಚ್ಚು ಲಾಭವಿದೆ ಎಂದು ಭಾವಿಸಿದ ಅತೃಪ್ತರಿಂದಾಗಿ ಮೈತ್ರಿ ಸರಕಾರ ಪತನವಾಗಿದೆ. ಒಂದು ಸರಕಾರದೊಳಗಿರುವುದಕ್ಕಿಂತ ಹೊರಗಿರುವುದೇ ಅಧಿಕ ಲಾಭ ಎಂದು ಶಾಸಕರು ಭಾವಿಸುವುದಿದ್ದರೆ, ಬಿಜೆಪಿ ಅವರಿಗೆ ಒಡ್ಡಿರುವ ಆಮಿಷ ಯಾವ ತರಹದ್ದು ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ನೋಟು ನಿಷೇಧದ ಬಳಿಕ ಎಲ್ಲ ಪಕ್ಷಗಳು ಹಣದ ಕೊರತೆಯನ್ನು ಎದುರಿಸುತ್ತಿರುವಾಗ, ಬಿಜೆಪಿ ಮಾತ್ರ ಕೋಟಿ ಕೋಟಿ ಸುರಿದು ಉಳಿದ ಪಕ್ಷಗಳ ಶಾಸಕರನ್ನು ಖರೀದಿಸಲ್ಲು ಶಕ್ತವಾಗಿದೆಯೆಂದರೆ, ಅದರ ಹಣದ ಮೂಲ ಯಾವುದು ಎಂದು ಕೇಳುವ ಅಧಿಕಾರ ಮತದಾರರಿಗೆ ಇದ್ದೇ ಇದೆ.

ವಿಪರ್ಯಾಸವೆಂದರೆ ಈ ದೇಶವನ್ನು 70 ವರ್ಷ ಆಳಿದ ಕಾಂಗ್ರೆಸ್ ಪಕ್ಷಕ್ಕಿಂತ ಹತ್ತು ವರ್ಷ ಆಳಿದ ಬಿಜೆಪಿ ಹೆಚ್ಚು ಶ್ರೀಮಂತ ಪಕ್ಷವಾಗಿದೆ. ಅಂದರೆ, ಕಾಂಗ್ರೆಸ್ 70 ವರ್ಷದಲ್ಲಿ ಮಾಡಿದ್ದನ್ನು ಬಿಜೆಪಿ ಬರೇ 10 ವರ್ಷಗಳಲ್ಲಿ ಮಾಡಿತು ಎಂದು ಊಹಿಸಬೇಕಾಗುತ್ತದೆ. ಸರಕಾರದ ಪತನವನ್ನು ಬಿಜೆಪಿ ‘ಪ್ರಜಾಪ್ರಭುತ್ವದ ಗೆಲುವು’ ಎಂದಿದೆ. ನಾಡಿನ ಅಭಿವೃದ್ಧಿ ನಡೆಸಲಿ ಎಂದು ಮತದಾರ ನಂಬಿ ಆರಿಸಿ ಕಳುಹಿಸಿದ ಶಾಸಕನೊಬ್ಬ, ಯಾವುದೇ ಸ್ಪಷ್ಟ ಕಾರಣಗಳಿಲ್ಲದೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅದು ಪ್ರಜಾಸತ್ತೆಯ ಸೋಲಾಗಿರುತ್ತದೆ. ಒಬ್ಬ ಶಾಸಕನನ್ನು ಹಣದಿಂದ ಕೊಂಡುಕೊಳ್ಳುವುದೆಂದರೆ, ಪರೋಕ್ಷವಾಗಿ ಮತದಾರರ ಮತಗಳನ್ನು ಒಟ್ಟು ‘ಗಂಟ’ಲ್ಲಿ ಬೆಲೆಕೊಟ್ಟು ಕೊಂಡು ಕೊಳ್ಳುವುದು ಎಂದು ಅರ್ಥ.

ಮತದಾರರಿಗೆ ಸೀರೆ, ಹಣಕೊಟ್ಟು ಮತಯಾಚಿಸುವುದರ ವಿರುದ್ಧ ಪ್ರಕರಣ ದಾಖಲಿಸಬಹುದಾದರೆ, ಮತದಾರ ಗೆಲ್ಲಿಸಿದ ಶಾಸಕನನ್ನು ಹಣಕೊಟ್ಟು ಕೊಂಡು ಕೊಳ್ಳುವುದು ಯಾಕೆ ಅಕ್ರಮವಲ್ಲ? ಅತೃಪ್ತ ಶಾಸಕರು ಒಂದು ಸರಕಾರದ ವಿರುದ್ಧ ಮತಚಲಾಯಿಸುವಾಗ, ಕನಿಷ್ಠ ತನ್ನ ಅತೃಪ್ತಿಯ ಕಾರಣವನ್ನಾದರೂ ಸದನದ ಮುಂದೆ ಅಂದರೆ ನಾಡಿನ ಜನರ ಮುಂದೆ ನೀಡಬೇಡವೇ? ಸರಕಾರ ಪತನ ‘ಪ್ರಜಾಸತ್ತೆಯ ಸೋಲು’ ಮತ್ತು ‘ಬಿಜೆಪಿಯ ಹಣದ ಗೆಲುವು’ ಎಂದು ಬಣ್ಣಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಸರಕಾರ ಪತನವಾಗುವುದು ಬಿಜೆಪಿ ಮತ್ತು ಆರೆಸ್ಸೆಸ್‌ನ ಅಗತ್ಯವಾಗಿತ್ತು. ಕಲಬುರ್ಗಿ-ಗೌರಿಲಂಕೇಶ್ ಹತ್ಯೆಯ ತನಿಖೆ ತಾರ್ಕಿಕ ಅಂತ್ಯ ಮುಟ್ಟುತ್ತಿರುವುದು, ಹಲವು ಸಂಘಪರಿವಾರದ ಉಗ್ರರ ಬಂಧನವಾಗುತ್ತಿರುವುದು ಆರೆಸ್ಸೆಸ್‌ನ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಆದರೆ ಸರಕಾರ ಪತನವಾಗುವುದಷ್ಟೇ ಅವುಗಳಿಗೆ ಬೇಕಾಗಿತ್ತೋ, ಹೊಸ ಸರಕಾರ ರಚನೆಯನ್ನೂ ಅದು ಬಯಸುತ್ತಿದೆಯೇ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಪರ್ಯಾಯ ಸರಕಾರ ರಚನೆಗೆ ಯಡಿಯೂರಪ್ಪ ನೇತೃತ್ವದ ತಂಡ ತುದಿಗಾಲಲ್ಲಿ ನಿಂತಿದೆ. ಆದರೆ ಕೇಂದ್ರ ವರಿಷ್ಠರು ಹೊಸ ಸರಕಾರ ರಚನೆಯ ಕುರಿತಂತೆ ಅಷ್ಟೇ ಆಸಕ್ತಿಯನ್ನು, ಆತುರವನ್ನು ಹೊಂದಿಲ್ಲ ಎನ್ನುವ ಅಭಿಪ್ರಾಯವಿದೆ.

ಆರೆಸ್ಸೆಸ್ ಮುಖಂಡರಿಗೂ ಸರಕಾರ ಪತನವಾಗುವುದು ಬೇಕಾಗಿತ್ತೇ ಹೊರತು, ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಅದರ ಅಗತ್ಯವಲ್ಲ. ‘ಪರ್ಯಾಯ ಸರಕಾರ ರಚಿಸಲು ಕೇಂದ್ರದ ಸೂಚನೆಗಾಗಿ ಕಾಯುತ್ತಿದ್ದೇವೆ’ ಎಂದು ಯಡಿಯೂರಪ್ಪ ಈಗಾಗಲೇ ಹೇಳಿಕೆ ನೀಡಿದ್ದಾರೆ. ಅಂದರೆ ಕೇಂದ್ರ ವರಿಷ್ಠರು ಇನ್ನೂ ಈ ಬಗ್ಗೆ ಸ್ಪಷ್ಟವಾದ ನಿಲುವನ್ನು ತಳೆದಿಲ್ಲ ಎನ್ನುವುದನ್ನು ಹೇಳುತ್ತದೆ. ಅಧಿಕಾರದಿಂದ ಕೆಳಗಿಳಿಯುವಾಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ‘‘ಇವತ್ತು ಈ ಸರಕಾರವನ್ನು ಪತನಗೊಳಿಸಲು ಪ್ರಯತ್ನಿಸಲಾಗಿದೆ. ಬಿಜೆಪಿಯವರು ಮಂತ್ರಿಮಂಡಲ ರಚನೆ ಮಾಡಲಿ. ಒಂದು ವಾರದಲ್ಲೇ ಆ ಭಾಗದಿಂದ ಈ ಕಡೆಗೆ ಶಾಸಕರು ಬರುವ ಕಾಲ ಬರಬಹುದು. ಸರಕಾರವನ್ನು ಯಾವ ರೀತಿಯಲ್ಲಿ ಉಳಿಸಿಕೊಳ್ಳುತ್ತೀರೋ, ಉಳಿಸಿಕೊಳ್ಳಿ....’’ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿಯೊಳಗೆ ಎದ್ದ ಬಂಡಾಯವನ್ನು ನೆನಪಿಸಿಕೊಂಡರೆ, ಕುಮಾರಸ್ವಾಮಿಯವರು ನುಡಿದ ಭವಿಷ್ಯ ನಿಜವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಣ, ಅಧಿಕಾರವನ್ನು ನಂಬಿ ಬಂದವರು, ಹಣ, ಅಧಿಕಾರದ ಕಾರಣಕ್ಕಾಗಿಯೇ ಮರಳಿ ಹೋಗುತ್ತಾರೆ.

ಹೊರಗಿನಿಂದ ಬಂದ ಶಾಸಕರು ಮತ್ತು ಒಳಗಿನ ಶಾಸಕರ ನಡುವೆ ಅಧಿಕಾರಕ್ಕಾಗಿ ತಿಕ್ಕಾಟ ನಡೆದರೆ, ಪ್ರಮಾಣವಚನ ನಡೆದ ಬೆನ್ನಿಗೇ ಸರಕಾರ ಬೀಳುವ ಸಾಧ್ಯತೆಗಳಿವೆ. ಸರಕಾರ ಪತನಕ್ಕೆ ಮುನ್ನವೇ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಈ ಪೈಪೋಟಿಯ ಭಾಗವಾಗಿಯೇ ಅರವಿಂದ ಲಿಂಬಾವಳಿ ಅವರ ‘ಸೆಕ್ಸ್ ಹಗರಣ’ ವೀಡಿಯೊವನ್ನು ಬಿಜೆಪಿ ನಾಯಕರೇ ಬಹಿರಂಗ ಪಡಿಸಿದ್ದಾರೆ ಎನ್ನುವ ಆರೋಪಗಳಿವೆ. ಸರಕಾರ ರಚನೆಗೆ ಮುನ್ನವೇ ಭಿನ್ನಮತಗಳು ಸದ್ದು ಮಾಡುತ್ತಿರುವಾಗ, ಬಳಿಕ ಗತಿಯೇನಾಗಬಹುದು? ಅಲ್ಪ ಬಹುಮತದ ತೇಪೆ ಸರಕಾರ ಅತಿ ಹೆಚ್ಚು ಬ್ಲಾಕ್‌ಮೇಲ್‌ಗೆ ಒಳಗಾಗುತ್ತದೆ. ನಾಡಿನ ಅಭಿವೃದ್ಧಿಯ ಕಡೆಗೆ ಗಮನ ಹರಿಸಲು ಮುಖ್ಯಮಂತ್ರಿಗೆ ಅವಕಾಶಗಳೇ ಇಲ್ಲದಂತಾಗಬಹುದು. ಪರಸ್ಪರ ಕಾಲೆಳೆದುಕೊಂಡು ಪತನಗೊಳ್ಳುವುದಕ್ಕಾಗಿಯೇ ಸರಕಾರ ರಚನೆ ಮಾಡಿ ಕಳಂಕವನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ, ನೇರವಾಗಿ ಚುನಾವಣೆ ಎದುರಿಸುವುದನ್ನೇ ಕೇಂದ್ರ ವರಿಷ್ಠರು ಆಯ್ಕೆ ಮಾಡಿದರೆ ಅಚ್ಚರಿಯಿಲ್ಲ.

ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದರೂ, ರಾಜ್ಯದ ಅಧಿಕಾರ ಕೇಂದ್ರ ಬಿಜೆಪಿಯ ನಿಯಂತ್ರಣದಲ್ಲಿರುತ್ತದೆ. ವರಿಷ್ಠರು ಈ ತೀರ್ಮಾನಕ್ಕೇನಾದರೂ ಬಂದರೆ, ಯಡಿಯೂರಪ್ಪರಿಗೆ ನಿರಾಸೆ ಕಾದಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವ ಭರವಸೆ ಸ್ವತಃ ಯಡಿಯೂರಪ್ಪರಿಗೇ ಇಲ್ಲವಾದುದರಿಂದ, ಅವರು ಶತಾಯಗತಾಯ ಸರಕಾರ ರಚನೆಗೆ ಯತ್ನಿಸಬಹುದು. ಕೇಂದ್ರ ವರಿಷ್ಠರು ಅವಕಾಶ ನೀಡದೆ ಇದ್ದರೆ ಬಿಜೆಪಿಯನ್ನು ಒಡೆದು ಜೆಡಿಎಸ್ ಜೊತೆಗೆ ಹೊಸದಾಗಿ ಮೈತ್ರಿ ಸಾಧಿಸುವ ಕಟ್ಟ ಕಡೆಯ ಪ್ರಯತ್ನಕ್ಕಿಳಿಯಬಹುದು. ಆ ಭಯ ಕೇಂದ್ರ ವರಿಷ್ಠರಿಗೂ ಇದೆ. ಆದುದರಿಂದಲೇ, ‘ಹಾವು ಸಾಯಬಾರದು, ಕೋಲು ಮುರಿಯಬಾರದು’ ಎನ್ನುವ ರೀತಿಯ ರಾಜಕೀಯ ನೀತಿಯನ್ನು ಆರೆಸ್ಸೆಸ್ ಮತ್ತು ಕೇಂದ್ರ ವರಿಷ್ಠರು ಅನುಸರಿಸುತ್ತಿದ್ದಾರೆ. ಸರಕಾರ ರಚಿಸುವುದು ಸರಕಾರ ಕೆಡವಿದಷ್ಟು ಸುಲಭವಿಲ್ಲ ಎನ್ನುವುದು ಯಡಿಯೂರಪ್ಪರಿಗೆ ಶೀಘ್ರದಲ್ಲೇ ಅರ್ಥವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News