ಭಾರತದ ವಿದೇಶಾಂಗ ನೀತಿಗೆ ಎಚ್ಚರಿಕೆ ಗಂಟೆಯಾಗಿರುವ ಟ್ರಂಪ್ ಹೇಳಿಕೆ

Update: 2019-07-24 18:36 GMT

‘‘ಎರಡು ವಾರಗಳ ಹಿಂದೆ ನಾನು ಪ್ರಧಾನಿ ಮೋದಿ ಅವರೊಂದಿಗಿದ್ದೆ ಮತ್ತು ನಾವು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ವಾಸ್ತವದಲ್ಲಿ ಮೋದಿ, ನೀವು ಸಂಧಾನಕಾರ ಅಥವಾ ಮಧ್ಯಸ್ಥಿಕೆದಾರನಾಗಲು ನಿಜಕ್ಕೂ ಬಯಸುತ್ತೀರಾ ಎಂದು ನನ್ನನ್ನು ಕೇಳಿದ್ದರು. ಯಾವುದರಲ್ಲಿ ಎಂದು ನಾನು ಪ್ರಶ್ನಿಸಿದಾಗ ಅವರು ‘ಕಾಶ್ಮೀರ’ ಎಂದು ಉತ್ತರಿಸಿದ್ದರು’’ ಎಂದು ಟ್ರಂಪ್ ಹೇಳಿದ್ದರು.

ಒಮ್ಮೆ ಇಡೀ ವಿಶ್ವದ ಗಮನ ಸೆಳೆದಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಿನ ಕುಚಿಕು ದೋಸ್ತಿ ಈ ಹಿಂದೆಯೇ ಮಸುಕಾಗುತ್ತ ಬಂದಿತ್ತು, ಆದರೆ ಇವರಿಬ್ಬರ ನಡುವಿನ ಸ್ನೇಹ ಸಂಬಂಧ ಈಗ ಖಂಡಿತವಾಗಿಯೂ ನಿರ್ಣಾಯಕ ಹಂತವನ್ನು ತಲುಪಿದೆ.
ಮೋದಿ ಅವರು ಪಾಕಿಸ್ತಾನದೊಂದಿಗಿನ ಕಾಶ್ಮೀರ ಬಿಕ್ಕಟ್ಟನ್ನು ಬಗೆಹರಿಸಲು ಮಧ್ಯಸ್ಥಿಕೆದಾರನಾಗಿ ತನ್ನ ನೆರವನ್ನು ಕೋರಿದ್ದರು ಎಂಬ ಟ್ರಂಪ್ ಅವರ ಸೋಮವಾರದ ಹೇಳಿಕೆಯು ಭಾರತದ ವಿದೇಶಾಂಗ ನೀತಿಯ ದೃಷ್ಟಿಯಿಂದ ಹೆಚ್ಚುಕಡಿಮೆ ಬೆನ್ನಿಗೆ ಇರಿದಂತಿದೆ. ಟ್ರಂಪ್ ನಿಜವನ್ನು ಹೇಳಿದ್ದಾರೋ, ಕಥೆ ಕಟ್ಟುತ್ತಿದ್ದಾರೋ ಅಥವಾ ಗೊಂದಲಗೊಂಡು ಈ ಮಾತನ್ನು ಹೇಳಿದ್ದಾರೋ ಎನ್ನುವುದು ಪ್ರಮುಖವಲ್ಲ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾತನ್ನು ಹೇಳಿರುವುದು ಗಾಯವನ್ನು ಇನ್ನಷ್ಟು ಹದಗೆಡಿಸಿದೆ. ನಿರೀಕ್ಷಿಸಿದಂತೆ ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಭಾರತವು ಅದನ್ನು ಅಧಿಕೃತವಾಗಿ ನಿರಾಕರಿಸಿರುವುದು ಬಿಜೆಪಿಗೆ ಉಂಟಾಗಲಿದ್ದ ರಾಜಕೀಯ ಹಾನಿಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿದೆ. ಆದರೆ ಟ್ರಂಪ್ ಅವರನ್ನು ಅತಿಯಾಗಿ ನಂಬಿದ್ದಕ್ಕೆ ಮೋದಿ ಮತ್ತು ಅವರ ಸಲಹೆಗಾರರು ಪಡಲೇಬೇಕಾದ ಕಳವಳಗಳಿಗೆ ತಕ್ಷಣದ ಪರಿಹಾರವಿಲ್ಲ.
‘ಅಮೆರಿಕ ಮೊದಲು’ ಎಂಬ ತನ್ನ ಅಜೆಂಡಾವನ್ನು ಟ್ರಂಪ್ ಎಂದೂ ಮುಚ್ಚಿಟ್ಟಿರಲಿಲ್ಲ.‘ಭಾರತ ಮೊದಲು’ ಎನ್ನುವುದು ತಮ್ಮ ನಂಬಿಕೆಯಾಗಿದೆ ಎಂದು ಹೇಳಿಕೊಂಡಿದ್ದವರು ಟ್ರಂಪ್ ಅಜೆಂಡಾದಲ್ಲಿ ಭಾರತದ ಹಿತಾಸಕ್ತಿಗಳು ಹೇಗೋ ಈಡೇರಿಸಲ್ಪಡುತ್ತವೆ ಎಂದು ನಿಷ್ಕಪಟ ನಿರ್ಧಾರಕ್ಕೆ ಅಷ್ಟೊಂದು ತ್ವರಿತವಾಗಿ ಬಂದಿದ್ದು ಅಚ್ಚರಿದಾಯಕವಾಗಿದೆ.
ಈಗ ಇತ್ತೀಚಿನ ಕೆಲವು ಘಟನಾವಳಿಗಳನ್ನೊಮ್ಮೆ ಚುರುಕಾಗಿ ಮೆಲುಕು ಹಾಕೋಣ ಮತ್ತು ಮೋದಿ ಆಡಳಿತದಡಿ ಭಾರತ-ಅಮೆರಿಕ ಸಂಬಂಧದ ಬಗ್ಗೆ ಅದೇನನ್ನು ನಮಗೆ ಹೇಳುತ್ತದೆ ಮತ್ತು ಅದು ಎಲ್ಲಿಗೆ ಹೋಗಿ ತಲುಪಬಹುದು ಎನ್ನುವುದನ್ನು ವಿಶ್ಲೇಷಿಸೋಣ.
ವಾಶಿಂಗ್ಟನ್‌ನಲ್ಲಿ ಟ್ರಂಪ್ ಅವರು ಈ ತಿಂಗಳ ಉತ್ತರಾರ್ಧದಲ್ಲಿ ಒಸಾಕಾದಲ್ಲಿ ನಡೆದಿದ್ದ ಜಿ-20 ಸಭೆಯ ನೇಪಥ್ಯದಲ್ಲಿ ಮೋದಿಯವರೊಂದಿಗೆ ತನ್ನ ಇತ್ತೀಚಿನ ಭೇಟಿಯ ಕುರಿತು ಅಚ್ಚರಿ ಮೂಡಿಸುವ ಹೇಳಿಕೆಯನ್ನು ನೀಡಿದ್ದರು.
‘‘ಎರಡು ವಾರಗಳ ಹಿಂದೆ ನಾನು ಪ್ರಧಾನಿ ಮೋದಿ ಅವರೊಂದಿಗಿದ್ದೆ ಮತ್ತು ನಾವು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ವಾಸ್ತವದಲ್ಲಿ ಮೋದಿ, ನೀವು ಸಂಧಾನಕಾರ ಅಥವಾ ಮಧ್ಯಸ್ಥಿಕೆದಾರನಾಗಲು ನಿಜಕ್ಕೂ ಬಯಸುತ್ತೀರಾ ಎಂದು ನನ್ನನ್ನು ಕೇಳಿದ್ದರು. ಯಾವುದರಲ್ಲಿ ಎಂದು ನಾನು ಪ್ರಶ್ನಿಸಿದಾಗ ಅವರು ‘ಕಾಶ್ಮೀರ’ ಎಂದು ಉತ್ತರಿಸಿದ್ದರು’’ ಎಂದು ಟ್ರಂಪ್ ಹೇಳಿದ್ದರು. ಸುದ್ದಿಗೋಷ್ಠಿಯಲ್ಲಿದ್ದ ಇಮ್ರಾನ್ ಖಾನ್, ಮಧ್ಯಸ್ಥಿಕೆ ವಹಿಸುವಂತೆ ಮತ್ತು ಬಿಕ್ಕಟ್ಟನ್ನು ಬಗೆಹರಿಸುವಂತೆ ಆಗ್ರಹಿಸಿದಾಗ ಟ್ರಂಪ್, ‘‘ನಾನು ಮೋದಿಯವರೊಂದಿಗೆ ಮಾತನಾಡುತ್ತೇನೆ ಮತ್ತು ಏನು ಮಾಡಬಹುದು ಎನ್ನುವುದನ್ನು ನಾವು ಯೋಚಿಸುತ್ತೇವೆ’’ ಎಂದು ಹೇಳಿದ್ದರು.
ಟ್ರಂಪ್ ಅವರ ಮುಖ್ಯ ಹೇಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರಾಕರಿಸಿದೆ. ‘‘ಮೋದಿಯವರು ಟ್ರಂಪ್ ಅವರಲ್ಲಿ ಇಂತಹ ವಿನಂತಿಯನ್ನು ಮಾಡಿಕೊಂಡಿರಲಿಲ್ಲ’’ ಎಂದು ಅದರ ವಕ್ತಾರರು ಟ್ವೀಟಿಸಿದ್ದಾರೆ. ಆದರೆ ಇದು ಕೇವಲ ನಾಲ್ಕು ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಮೊದಲನೆಯದು ಟ್ರಂಪ್ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿದ್ದಾರೆ. ಟ್ರಂಪ್ ಮೋದಿ ಜೊತೆ ತನ್ನ ಕಪೋಲಕಲ್ಪಿತ ಸಂಭಾಷಣೆಯನ್ನು ಹರಿಬಿಟ್ಟಿರುವ ಕಲ್ಪನಾ ವಿಹಾರಿಯಾಗಿದ್ದಾರೆ ಎನ್ನುವುದು ಎರಡನೇ ಸಾಧ್ಯತೆ. ಒಸಾಕಾದಲ್ಲಿ ಟ್ರಂಪ್ ಮತ್ತು ಮೋದಿ ನಡುವೆ ಸಂವಹನದಲ್ಲಿ ಕೆಲವು ತಪ್ಪ್ಪುಗ್ರಹಿಕೆಗಳಾಗಿದ್ದವು ಎನುವುದು ಮೂರನೇ ಸಾಧ್ಯತೆ. ನಾಲ್ಕನೆಯ ಸಾಧ್ಯತೆ ಭಾರತವು ಸತ್ಯವನ್ನು ಹೇಳುತ್ತಿಲ್ಲ ಎನ್ನುವುದು.
ಈ ಸಾಧ್ಯತೆಗಳ ಪೈಕಿ ನಾಲ್ಕನೆಯದನ್ನು ತಳ್ಳಿಹಾಕಲು ನಾನು ಸಿದ್ಧನಿದ್ದೇನೆ, ಏಕೆಂದರೆ ಅಮೆರಿಕದ ಮಧ್ಯಸ್ಥಿಕೆಗೆ ವಿರೋಧವು ಭಾರತ ಸರಕಾರಕ್ಕೆ ಕೇವಲ ನಂಬಿಕೆಯ ವಿಷಯವಲ್ಲ, ಅದು ಸ್ವದೇಶಹಿತ ನೀತಿಯ ವಾಸ್ತವಿಕ ಅಗತ್ಯವೂ ಆಗಿದೆ. ಕಾಶ್ಮೀರದ ಕುರಿತು ದೀರ್ಘಕಾಲದ ನಿಲುವನ್ನು ತೊರೆದು ಟ್ರಂಪ್ ಅವರನ್ನು ಭಾಗಿ ಮಾಡಿಕೊಳ್ಳುವುದರಿಂದ ಒಳ್ಳೆಯದು ಆಗುತ್ತದೆ ಎಂದು ಮೋದಿ ಮತ್ತು ಅವರ ಸಲಹೆಗಾರರು ನಂಬುತ್ತಾರೆ ಎನ್ನುವುದನ್ನು ಊಹಿಸುವುದೂ ಕಷ್ಟ.
ಇಷ್ಟಾದರೂ ಇನ್ನೂ ಮೂರು ಸಾಧ್ಯತೆಗಳು ಉಳಿದುಕೊಂಡಿವೆ ‘ತಪ್ಪುಗ್ರಹಿಕೆ’ಯ ಸಾಧ್ಯತೆಯನ್ನು ಒಪ್ಪಿಕೊಂಡರೆ ಏನೇನೂ ಹಾನಿಯಿಲ್ಲ, ಆದರೆ ಅದು ವಿಶ್ವವೇದಿಕೆಗಳಲ್ಲಿ ಮೋದಿಯವರ ಅಪ್ಪುಗೆಗಳ ಪರಿಣಾಮಕಾರತ್ವ ಮತ್ತು ವಿವೇಚನೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತದೆ.
ಅಮೆರಿಕವೀಗ ತನ್ನ ಸಹಾಯಕ ವಿದೇಶಾಂಗ ಸಚಿವೆ ಆಲಿಸ್ ವೆಲ್ಸ್ ಅವರ ಮೂಲಕ ‘ಕಾಶ್ಮೀರವು ಉಭಯ ದೇಶಗಳು ಚರ್ಚಿಸಬೇಕಾದ ದ್ವಿಪಕ್ಷೀಯ ವಿಷಯವಾಗಿದೆ ಹಾಗೂ ಭಾರತ ಮತ್ತು ಪಾಕಿಸ್ತಾನ ಈ ಕುರಿತು ಮಾತುಕತೆ ನಡೆಸುವುದನ್ನು ಟ್ರಂಪ್ ಆಡಳಿತವು ಸ್ವಾಗತಿಸುತ್ತದೆ ಮತ್ತು ಈ ಮಾತುಕತೆಯಲ್ಲಿ ನೆರವಾಗಲು ಅಮೆರಿಕವು ಸಿದ್ಧವಾಗಿರುತ್ತದೆ’ ಎಂಬ ಸಂಕ್ಷಿಪ್ತ ಹೇಳಿಕೆಯನ್ನು ಹೊರಡಿಸಿದೆ. ಇದರೊಂದಿಗೆ ಟ್ರಂಪ್ ಹೇಳಿಕೆಯ ಪರಿಣಾಮವನ್ನು ಹತ್ತಿಕ್ಕಲು ಸಾಧ್ಯವಾದೀತು ಎನ್ನುವುದು ಅಮೆರಿಕ ಮತ್ತು ಭಾರತಗಳ ವಿದೇಶಾಂಗ ಸಚಿವಾಲಯಗಳ ಆಶಯವಾಗಿದೆ,ಆದರೆ ವಿಷಯವು ಇಷ್ಟು ಸರಳವಾಗಿಲ್ಲ. ಇಡೀ ಪ್ರಕರಣವು ಭಾರತದ ಕಡೆಯ ಮೂಲಭೂತ ಸಮಸ್ಯೆಯನ್ನು ಪ್ರಮುಖವಾಗಿ ಬಿಂಬಿಸಿದೆ: ಟ್ರಂಪ್ ನೇತೃತ್ವದಡಿಯ ಅಮೆರಿಕವು ವಿಶ್ವಾಸಾರ್ಹ ಪಾಲುದಾರನಾಗಿ ಉಳಿದಿಲ್ಲ ಎಂದು ಇಡೀ ವಿಶ್ವವು ಈಗಾಗಲೇ ಅರ್ಥ ಮಾಡಿಕೊಂಡಿದ್ದರೆ, ಮೋದಿ ಅವರು ಭಾರತವು ಅಮೆರಿಕದಿಂದ ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಇದು ಅಂತಿಮವಾಗಿ ಭಾರತಕ್ಕೆ ಎಷ್ಟೊಂದು ದುಬಾರಿಯಾಗಲಿದೆ ಎನ್ನುವುದನ್ನು ಯಾರೂ ಹೇಳುತ್ತಿಲ್ಲ.
ಮೋದಿ ಅವರು ಅಷ್ಟೊಂದು ನಿಸ್ಸಂಶಯವಾಗಿ ತುಷ್ಟೀಕರಿಸಿದ್ದ ವಿಶ್ವನಾಯಕರೋರ್ವರು ಕಾಶ್ಮೀರ ಕುರಿತಂತೆ ಭಾರತದ ಚಿರಪರಿಚಿತ ನಿಲುವಿನ ಬಗ್ಗೆ ಅಷ್ಟೊಂದು ವಿಭಿನ್ನವಾಗಿ ವರ್ತಿಸಿರುವಾಗ ಅದು ಮೋದಿಯವರ ನಿರ್ಧಾರದ ವಿವೇಕದ ಬಗ್ಗೆ ಏನು ಹೇಳುತ್ತದೆ?
ನ್ಯಾಯವಾಗಿ ಹೇಳಬೇಕೆಂದರೆ ಬರಾಕ್ ಒಬಾಮಾ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮೋದಿ ತಾನು ಪ್ರಧಾನಿಯಾದ ಬೆನ್ನಿಗೇ ವ್ಯೆಹಾತ್ಮಕ ಪಾಲುದಾರಿಕೆಯನ್ನು ಹೆಚ್ಚಿಸುವ ಪ್ರಕ್ರಿಯೆಯನ್ನಾರಂಭಿಸಿದ್ದರು. 2016, ಆಗಸ್ಟ್‌ನಲ್ಲಿ ಲಾಜಿಸ್ಟಿಕ್ಸ್ ಎಕ್ಸ್ ಚೇಂಜ್ ಮೆಮರಾಂಡಮ್ ಆಫ್ ಅಗ್ರಿಮೆಂಟ್‌ಗೆ ಸಹಿ ಹಾಕುವ ಮೂಲಕ ವಾಸ್ತವದಲ್ಲಿ ಅವರು ಈ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಶಕ್ತಿಗೆ ಭಾರತವನ್ನು ಚಿಮ್ಮುಹಲಗೆಯನ್ನಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದ್ದರು. ಚೀನಾದೊಂದಿಗೆ ಅಮೆರಿಕದ ಶೀತಲ ಯುದ್ಧಕ್ಕೆ ಆರಂಭಿಕ ರೂಪ ದೊರೆಯತೊಡಗಿದ್ದ, ಏಶ್ಯಾ ಚರ್ಚೆಯಲ್ಲಿದ್ದ ಆ ದಿನಗಳಲ್ಲಿ ಅಮೆರಿಕದೊಂದಿಗೆ ಕೈಜೋಡಿಸುವುದರಿಂದ ಭಾರತಕ್ಕೆ ಭದ್ರತೆ ದೊರೆಯುತ್ತದೆ ಎನ್ನುವುದು ಮೋದಿ ಮತ್ತು ಅವರ ಸಲಹೆಗಾರರ ಅಮಾಯಕ ನಂಬುಗೆಯಾಗಿತ್ತು.
 ಕಳೆದ ಎರಡೂವರೆ ವರ್ಷಗಳಲ್ಲಿ ಅಮೆರಿಕದ ಆಡಳಿತವು ಇರಾನ್, ಹವಾಮಾನ ಬದಲಾವಣೆ ಮತ್ತು ವ್ಯಾಪಾರ ಕುರಿತು ತನ್ನ ಪ್ರಮುಖ ನೀತಿಗಳನ್ನು ಕಠೋರಗೊಳಿಸಿರುವುದು ಅದರ ನಿಕಟ ಮಿತ್ರರನ್ನು ಜಾಗರೂಕರಾಗಿರುವಂತೆ ಮಾಡಿದೆ. ಬಹುಶಃ ಮೋದಿ ಮತ್ತು ಜಪಾನಿನ ಶಿಂಜೊ ಅಬೆ ಅವರು ಮಾತ್ರ ಟ್ರಂಪ್ ವಿಷಯದಲ್ಲಿ ಜೂಜಾಡಲು ಸಿದ್ಧರಿರುವ ಪ್ರಮುಖ ವಿಶ್ವ ನಾಯಕರಾಗಿದ್ದಾರೆ. ಹೀಗಿದ್ದರೂ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ತಗ್ಗಿಸಲು ಜಪಾನ್ ಸಕ್ರಿಯವಾಗಿ ಬಯಸಿದ್ದರೆ ಭಾರತವು ನೇಪಥ್ಯದಲ್ಲಿದ್ದುಕೊಂಡೇ ಸಂಘರ್ಷವು ನಿಧಾನವಾಗಿ ರೂಪುಗೊಳ್ಳುತ್ತಿರುವುದನ್ನು ಕಾದು ನೋಡುವಲ್ಲಿ ತೃಪ್ತಿಪಟ್ಟುಕೊಂಡಿದೆ. ಟ್ರಂಪ್ ನೇತೃತ್ವದಡಿ ಅಮೆರಿಕವು ಪಶ್ಚಿಮ ಏಷ್ಯಾದಲ್ಲಿ ಅಸ್ಥಿರತೆಯನ್ನು ಉಂಟು ಮಾಡುವ ಪಾತ್ರ ವಹಿಸುತ್ತಿದೆ ಎನ್ನುವುದಕ್ಕೆ ಪ್ರಬಲ ಸಾಕ್ಷಾಧಾರಗಳಿದ್ದರೂ ಅದರಿಂದ ವಿಚಲಿತರಾಗದ ಮೋದಿ ಇನ್ನಷ್ಟು ಮುಂದುವರಿದು ಅದರೊಂದಿಗೆ ಕಮ್ಯುನಿಕೇಷನ್ಸ್ ಕಂಪ್ಯಾಟಿಬಿಲಿಟಿ ಆ್ಯಂಡ್ ಸೆಕ್ಯುರಿಟಿ ಅಗ್ರಿಮೆಂಟ್ ಮಾಡಿಕೊಳ್ಳುವ ಮೂಲಕ ಭಾರತದ ಮಿಲಿಟರಿಯನ್ನು ಅಮೆರಿಕದೊಂದಿಗೆ ಇನ್ನಷ್ಟು ನಿಕಟ ಸಂಬಂಧಕ್ಕೆ ಬದ್ಧವಾಗಿಸಿದ್ದಾರೆ.
 ಟ್ರಂಪ್ ಜೊತೆ ವೈಯಕ್ತಿಕ ಸ್ನೇಹವು ಅದು ಹೇಗೋ ಭಾರತದ ಪಾಲಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂದು ವಾಸ್ತವಕ್ಕೆ ವಿರುದ್ಧವಾಗಿ ಭಾವಿಸುವ ಮೂಲಕ ಮೋದಿ ಮತ್ತು ಅವರ ಸಲಹೆಗಾರರು ಮೂಲಭೂತ ತಪ್ಪನ್ನೆಸಗಿದ್ದಾರೆ. ಅಲ್ಲದೆ ಗುರಿ ಸಾಧನೆಗಾಗಿ ಬೆಂಬತ್ತುವಿಕೆಯನ್ನು ಆಗಾಗ್ಗೆ ತಪ್ಪಾಗಿ ನಿರ್ವಹಿಸುತ್ತಿರು ವುದು ಇನ್ನಷ್ಟು ಕೆಟ್ಟದ್ದಾಗಿದೆ. ಮೋದಿ ಸರಕಾರದ ಮೊದಲ ಅಧಿಕಾರಾವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎಸ್.ಜೈಶಂಕರ್ ಅವರು ವಿಶ್ವ ಪರಮಾಣು ಪೂರೈಕೆದಾರರ ಗುಂಪಿ(ಎನ್‌ಎಸ್‌ಜಿ)ನ ಸದಸ್ಯನಾಗುವ ಭಾರತದ ಪ್ರಯತ್ನವನ್ನು ಚೀನಾ ಬೆಂಬಲಿಸುತ್ತದೆ ಎಂಬ ಆಶಯದೊಂದಿಗೆ ಮೋದಿ ಮತ್ತು ಅದರ ಅಧ್ಯಕ್ಷ ಕ್ಸಿ ಪಿಂಗ್ ನಡುವೆ ನೇರ ಮಾತುಕತೆಯನ್ನು ಸಂಘಟಿಸಿದ್ದರು ಮತ್ತು ಮಾತುಕತೆ ದಯನೀಯವಾಗಿ ವಿಫಲಗೊಂಡಿತ್ತು. ಆ ಸಮಯದಲ್ಲಿ ಎನ್‌ಎಸ್‌ಜಿ ಸದಸ್ಯತ್ವದಿಂದ ಭಾರತಕ್ಕೆ ಹೇಳಿಕೊಳ್ಳುವಂತಹ ಲಾಭವೇನೂ ಆಗುತ್ತಿರಲಿಲ್ಲ, ಆದರೂ ಅದನ್ನು ಬಹುಶಃ ದೇಶಿಯ ರಾಜಕಾರಣದ ಮೇಲೆ ಕಣ್ಣಿಟ್ಟು ಆದ್ಯತೆಯ ವಿಷಯವನ್ನಾಗಿ ಮಾಡಲಾಗಿತ್ತು. ಆದರೆ ಅಂತಿಮವಾಗಿ ಆಗಿದ್ದೇನು? ಭಾರತದಂತೆ ಪಾಕಿಸ್ತಾನಕ್ಕೂ ಸಮಾನತೆ ದೊರೆಯಬೇಕು ಎಂದು ಪ್ರತಿಪಾದಿಸುವ ಮೂಲಕ ಇದನ್ನು ವಿಫಲಗೊಳಿಸಲು ಚೀನಾ ಯಶಸ್ವಿಯಾಗಿತ್ತು ಮತ್ತು ಭಾರತವು ಹೊಣೆಗಾರ ರಾಷ್ಟ್ರ ಎಂದು ಬಿಂಬಿಸುವ ವರ್ಷಗಳ ಪರಮಾಣು ರಾಜತಾಂತ್ರಿಕತೆ ನೀರಿನಲ್ಲಿ ಮಾಡಿದ ಹೋಮದಂತಾಗಿತ್ತು. ವಿಶ್ವಸಂಸ್ಥೆ ಪಟ್ಟಿಯಲ್ಲಿ ಮಸೂದ್ ಅಝರ್‌ನನ್ನು ಭಯೋತ್ಪಾದಕನೆಂದು ಸೇರಿಸಲು ಭಾರತದ ಪ್ರಯತ್ನಗಳಿಗೂ ಇದೇ ಗತಿಯಾಗಿತ್ತು ಮತ್ತು ತನ್ನ ಉದ್ದೇಶಸಾಧನೆಗಾಗಿ ಭಾರತವು ಬಹಳಷ್ಟು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುವಂತಾಗಿತ್ತು.
ಇದೀಗ ಟ್ರಂಪ್ ಮೋದಿಯವರು ಮಧ್ಯಸ್ಥಿಕೆಗೆ ಕೋರಿಕೊಂಡಿದ್ದರು ಎಂಬ ಅರ್ಥಹೀನ ಹೇಳಿಕೆಯನ್ನು ನೀಡಿದ್ದಾರೆ, ಆದರೆ ಇದರ ಮೂಲಕ ಮಧ್ಯಸ್ಥಿಕೆ ಕಾರ್ಡ್ ಅನ್ನು ಮುಂದೊತ್ತಲು ತಾನು ಮಾರ್ಗವನ್ನು ಮಾಡಿಕೊಂಡಿದ್ದೇನೆ ಎಂದು ನಂಬಿಕೊಂಡಿದ್ದಾರೆ. ಇದರ ಮೊದಲ ಸೂಚನೆಯು ಚುನಾವಣಾ ಪ್ರಚಾರದ ಸಂದರ್ಭಲ್ಲಿಯೇ ಲಭಿಸಿತ್ತು. ಆಗ ಟ್ರಂಪ್ ಅವರು ಪಾಕಿಸ್ತಾನವು ಸೆರೆ ಹಿಡಿದಿದ್ದ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಅವರು ತಕ್ಷಣ ಬಿಡುಗಡೆಗೊಂಡಿದ್ದರ ಕುರಿತು ಮಾತನಾಡಿದ್ದರು.
ಇರಾನ್ ಮೇಲಿನ ಒತ್ತಡ, ರಶ್ಯಾದೊಂದಿಗೆ ಹೆಚ್ಚಿದ ಉದ್ವಿಗ್ನತೆ ಮತ್ತು ಚೀನಾದೊಂದಿಗೆ ಶೀತಲ ಯುದ್ಧ, ಹೀಗೆ ಟ್ರಂಪ್ ಕಾರ್ಯತಂತ್ರದ ಇತರ ಎಲ್ಲ ಭಾಗಗಳಿಗೆ ತಾನು ಜೀ ಹುಜೂರ್ ಎಂದಿದ್ದು ಅಂತಿಮವಾಗಿ ಪ್ರದೇಶದಲ್ಲಿ ಪಾಕಿಸ್ತಾನದ ಕೈಗಳನ್ನು ಬಲಗೊಳಿಸಿದೆ ಎನ್ನುವುದನ್ನು ತಿಳಿದುಕೊಳ್ಳದಿರುವುದು ಮೋದಿ ಸರಕಾರವು ಮಾಡುತ್ತಿರುವ ಎರಡನೆಯ ತಪ್ಪಾಗಿದೆ.
 ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಕುರಿತು ಬೇರೆಯೇ ರಾಗವನ್ನು ಹಾಡುತ್ತಿದ್ದ ಟ್ರಂಪ್ ಇರಾನ್ ಮತ್ತು ಅಫ್ಘಾನಿಸ್ತಾನ ಕುರಿತು ತನ್ನ ಯೋಜನೆಗಳಿಗೆ ವಾಶಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವಿನ ಸಂಬಂಧದಲ್ಲಿ ಸ್ಥಿರತೆ ಅಗತ್ಯ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಇದು ಶ್ವೇತಭವನಕ್ಕೆ ಇಮ್ರಾನ್ ಖಾನ್ ಭೇಟಿಯಲ್ಲಿ ನಿಚ್ಚಳವಾಗಿ ಹೊರಹೊಮ್ಮಿದೆ ಮತ್ತು ಭಾರತದೊಂದಿಗೆ ಮಧ್ಯಸ್ಥಿಕೆಯ ಕುರಿತು ಟ್ರಂಪ್ ಹೇಳಿಕೆಯು ಈ ಪ್ರಕ್ರಿಯೆಯ ಕೂಸು ಆಗಿದೆ ಎನ್ನುವುದು ಸ್ಪಷ್ಟವಾಗಿದೆ.
ಈಗಿನ ವಿವಾದ ತಣ್ಣಗಾದ ಬಳಿಕ ಮೋದಿ ಮತ್ತು ಅವರ ಸಲಹೆಗಾರರು ಕುಳಿತು ಪುನರ್‌ಪರಿಶೀಲಿಸುವ ಅಗತ್ಯವಿದೆ. ಅಮೆರಿಕದೊಂದಿಗೆ ಸಂಬಂಧವನ್ನು ಹೆಚ್ಚಿಸಿಕೊಳ್ಳುವ ಆತುರದಲ್ಲಿ ರಶ್ಯಾ, ಚೀನಾ ಮತ್ತು ಇರಾನ್‌ನೊಂದಿಗಿನ ಮಹತ್ವದ ಸಂಬಂಧಗಳನ್ನು ಕಡೆಗಣಿಸಿದ್ದು ಮೂಲಭೂತ ತಪ್ಪಾಗಿತ್ತು. ಇವೆಲ್ಲವುಕ್ಕಿಂತ ಮಿಗಿಲಾಗಿ ಪಾಕಿಸ್ತಾನ ಕುರಿತು ಸುಸಂಬಂದ್ಧ ಮತ್ತು ತರ್ಕಬದ್ಧ ನೀತಿಯ ಅನುಪಸ್ಥಿತಿಯು ಒಂದು ನಿರ್ವಾತವನ್ನು ಸೃಷ್ಟಿಸಿದ್ದು, ಇದು ಭಾರತದ ಹಿತಾಸಕ್ತಿಗೆ ಪೂರಕವಲ್ಲ. ತನ್ನ ಎರಡನೇ ಅಧಿಕಾರಾವಧಿಯಲ್ಲಿ ಇಷ್ಟು ಬೇಗನೇ ವಿದೇಶಾಂಗ ನೀತಿಯಲ್ಲಿ ಎಚ್ಚರಿಕೆಯ ಗಂಟೆಯು ಬಾರಿಸಿರುವುದು ಮೋದಿಯವರ ಅದೃಷ್ಟವಾಗಿದೆ. ಇದನ್ನು ಅವರು ಗಂಭೀರವಾಗಿ ಪರಿಗಣಿಸಲೇಬೇಕಿದೆ.
ಕೃಪೆ: thewire.in

Writer - ಸಿದ್ಧಾರ್ಥ ವರದರಾಜನ್

contributor

Editor - ಸಿದ್ಧಾರ್ಥ ವರದರಾಜನ್

contributor

Similar News

ಜಗದಗಲ
ಜಗ ದಗಲ