ತೈಲ ಟ್ಯಾಂಕರ್ ಸಿಬ್ಬಂದಿ ಸುರಕ್ಷಿತ: ಸ್ವೀಡಿಶ್ ಮಾಲೀಕ ಕಂಪೆನಿ ಹೇಳಿಕೆ

Update: 2019-07-25 17:20 GMT

ಸ್ಟಾಕ್‌ಹೋಮ್, ಜು. 25: ಇರಾನ್ ವಶಪಡಿಸಿಕೊಂಡಿರುವ ಬ್ರಿಟನ್ ಪತಾಕೆಯ ತೈಲ ಟ್ಯಾಂಕರ್‌ನ ಮಾಲೀಕತ್ವ ಹೊಂದಿರುವ ಸ್ವೀಡನ್‌ನ ಕಂಪೆನಿಯು, ಹಡಗಿನಲ್ಲಿರುವ ತನ್ನ ಸಿಬ್ಬಂದಿಯನ್ನು ಸಂಪರ್ಕಿಸಲು ಕೊನೆಗೂ ತನಗೆ ಸಾಧ್ಯವಾಗಿದ್ದು, ತಾವು ‘ಸುರಕ್ಷಿತರಾಗಿದ್ದೇವೆ’ ಎಂಬುದಾಗಿ ಅವರು ಘೋಷಿಸಿದ್ದಾರೆ ಎಂದು ಹೇಳಿದೆ.

‘‘ಪ್ರತಿಯೊಬ್ಬರೂ ಸುರಕ್ಷಿತರಾಗಿದ್ದೇವೆ ಹಾಗೂ ಹಡಗಿನಲ್ಲಿರುವ ಇರಾನ್ ಸಿಬ್ಬಂದಿಯಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂಬುದಾಗಿ ಹಡಗಿನ ಕ್ಯಾಪ್ಟನ್ ಹೇಳಿದ್ದಾರೆ’’ ಎಂದು ‘ಸ್ಟೆನಾ ಬಲ್ಕ್’ ಕಂಪೆನಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹೋರ್ಮುಝ್ ಜಲಸಂಧಿಯಲ್ಲಿರುವ ಅಂತರ್‌ರಾಷ್ಟ್ರೀಯ ಮಾರ್ಗದ ಮೂಲಕ ಹಾದು ಹೋಗುತ್ತಿದ್ದ ‘ಸ್ಟೆನಾ ಇಂಪೇರೊ’ ಎಂಬ ಹೆಸರಿನ ತೈಲ ಟ್ಯಾಂಕರನ್ನು ಕಳೆದ ಶುಕ್ರವಾರ ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ ವಶಪಡಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಈಗ ಆ ಹಡಗು ಇರಾನ್‌ನ ಬಂದರ್ ಅಬ್ಬಾಸ್ ಬಂದರಿನ ಸಮೀಪದಲ್ಲಿದೆ.

ಸ್ಟೆನಾ ಇಂಪೇರೊಗೆ ಭೇಟಿ ನೀಡಲು  ಹಾಗೂ ಬಂಧಿತರಾಗಿರುವ 23 ಸಿಬ್ಬಂದಿಯನ್ನು ನೋಡಲು ತನ್ನ ಪ್ರತಿನಿಧಿಗಳಿಗೆ ಅನುಮತಿ ದೊರಕಿಸುವುದಕ್ಕಾಗಿ ಕಂಪೆನಿ ಸ್ಟೆನಾ ಬಲ್ಕ್ ಹಲವು ದಿನಗಳಿಂದ ಪ್ರಯತ್ನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News