ಇಮ್ರಾನ್ ಖಾನ್ ‘ಸುಳ್ಳುಗಾರ’, ಭಯೋತ್ಪಾದಕರ ಸಮರ್ಥಕ: ಪಾಕ್ ಪ್ರತಿಪಕ್ಷಗಳು

Update: 2019-07-25 17:26 GMT

ಲಾಹೋರ್, ಜು. 25: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಓರ್ವ ‘ಸುಳ್ಳುಗಾರ’ ಹಾಗೂ ಭಯೋತ್ಪಾದಕರ  ಸಮರ್ಥಕ ಎಂದು ಆ ದೇಶದ ಪ್ರತಿಪಕ್ಷಗಳು ಬುಧವಾರ ಹೇಳಿವೆ. ತನ್ನ ಅಮೆರಿಕ ಭೇಟಿಯ ವೇಳೆ ಅವರು ಅಂತರ್‌ರಾಷ್ಟ್ರೀಯ ಸಮುದಾಯವನ್ನು ತಪ್ಪುದಾರಿಗೆಳೆಯಲು ತನ್ನಿಂದ ಸಾಧ್ಯವಿರುವಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ ಎಂದಿವೆ.

 ಅಮೆರಿಕದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಮಾರಂಭಗಳಲ್ಲಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಪ್ರಧಾನ ಕಾರ್ಯದರ್ಶಿ ನಫೀಸಾ ಶಾ, ಇಮ್ರಾನ್ ಖಾನ್‌ರನ್ನು ಭಯೋತ್ಪಾದನೆ ಕೃತ್ಯಗಳ ಸಂತ್ರಸ್ತರು, ‘ಗಡ್ಡವಿಲ್ಲದ ತಾಲಿಬಾನ್ ಖಾನ್’ ಎಂಬುದಾಗಿ ಪರಿಗಣಿಸುತ್ತಾರೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಇಮ್ರಾನ್ ಖಾನ್ ಭ್ರಷ್ಟ ಮಾತ್ರವಲ್ಲ, ಭಯೋತ್ಪಾದಕರ ಸಮರ್ಥಕ’’ ಎಂಬುದಾಗಿ ಅವರು ಬಣ್ಣಿಸಿದ್ದಾರೆ.

‘‘ಆತ್ಮವಿಶ್ವಾಸದಿಂದ ಹೇಳಿರುವ ಸುಳ್ಳುಗಳಿಗಾಗಿ ಇಮ್ರಾನ್ ಖಾನ್‌ಗೆ ಗೋಬೆಲ್ಸ್ ಪ್ರಶಸ್ತಿ ನೀಡಬೇಕು. ಆತ್ವವಿಶ್ವಾಸದಿಂದ ಸುಳ್ಳು ಹೇಳಲು ಅಭ್ಯಾಸ ಮಾಡಬೇಕಾಗುತ್ತದೆ. ಅವರು ದಶಕಗಳಿಂದ ಇದರ ಅಭ್ಯಾಸ ಮಾಡುತ್ತಾ ಬಂದಿದ್ದಾರೆ’’ ಎಂದಿದ್ದಾರೆ.

ಇಮ್ರಾನ್ ಅಂತರ್‌ರಾಷ್ಟ್ರೀಯ ಸಮುದಾಯವನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಿರುವ ಶಾ, ಕಳೆದ 20 ವರ್ಷಗಳ ಅವಧಿಯಲ್ಲಿ ಪ್ರಜಾಪ್ರಭುತ್ವದ ವಿರುದ್ಧ ನಡೆಸಲಾಗಿರುವ ಪಿತೂರಿಗಳಲ್ಲಿ ಅವರು ದಾಳವಾಗಿದ್ದಾರೆ ಎಂದಿದ್ದಾರೆ.

 ‘‘ಇಮ್ರಾನ್ ಖಾನ್ ಯಾವತ್ತೂ ಪ್ರಜಾಸತ್ತಾತ್ಮಕವಾಗಿರಲಿಲ್ಲ. ಯಾಕೆಂದರೆ, ಅವರು ಪ್ರತಿಪಕ್ಷದಲ್ಲಿದ್ದಾಗ ಸಂಸತ್ ಮೇಲೆ ದಾಳಿ ನಡೆಸಿದ್ದರು. ಈಗ ಅವರು ಸರಕಾರದಲ್ಲಿರುವಾಗಿ ಒಳಗಿನಿಂದ ದಾಳಿ ನಡೆಸುತ್ತಿದ್ದಾರೆ. ಇಮ್ರಾನ್ ಖಾನ್ ತಾಲಿಬಾನ್‌ನಂತೆ ಸಹಿಷ್ಣುತೆ ಕಳೆದುಕೊಂಡಿದ್ದಾರೆ. ಅವರು ತಾಲಿಬಾನ್‌ನಂತೆ ಯಾವುದೇ ಭಿನ್ನಮತದ ಧ್ವನಿಯನ್ನು ಸಹಿಸಲಾರರು. ತನ್ನ ಅಸಾಮರ್ಥ್ಯವನ್ನು ಮರೆಮಾಚಲು ಅವರು ಪ್ರತಿಪಕ್ಷಗಳನ್ನು ಬಲಿಪಶುಮಾಡುತ್ತಿದ್ದಾರೆ’’ ಎಂದು ನಫೀಸಾ ಶಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News