×
Ad

ಫೆಲೆಸ್ತೀನ್ ಮನೆಗಳ ಧ್ವಂಸ ಖಂಡನೆ ನಿರ್ಣಯಕ್ಕೆ ಅಮೆರಿಕ ತಡೆ

Update: 2019-07-26 23:27 IST

ವಿಶ್ವಸಂಸ್ಥೆ, ಜು. 26: ಜೆರುಸಲೇಮ್‌ನ ಹೊರವಲಯದಲ್ಲಿರುವ ಫೆಲೆಸ್ತೀನಿಯರ ಮನೆಗಳನ್ನು ಇಸ್ರೇಲ್ ಧ್ವಂಸಗೊಳಿಸಿರುವುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಖಂಡಿಸುವಂತೆ ಮಾಡುವ ಕುವೈತ್, ಇಂಡೋನೇಶ್ಯ ಮತ್ತು ದಕ್ಷಿಣ ಆಫ್ರಿಕಗಳ ಪ್ರಯತ್ನವನ್ನು ಅಮೆರಿಕ ಬುಧವಾರ ತಡೆದಿದೆ.

ಸೋಮವಾರ ತಾನು ಧ್ವಂಸಗೊಳಿಸಿರುವ 10 ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಲಾಗಿತ್ತು ಹಾಗೂ ತಡೆಬೇಲಿಯುದ್ದಕ್ಕೂ ನಿಯೋಜನೆಗೊಂಡಿರುವ ಇಸ್ರೇಲಿ ಸೈನಿಕರ ಸುರಕ್ಷತೆಗೆ ಬೆದರಿಕೆಯಾಗಿತ್ತು ಎಂದು ಇಸ್ರೇಲ್ ಹೇಳಿದೆ. ಧ್ವಂಸಗೊಳಿಸಲಾದ ಕಟ್ಟಡಗಳ ಪೈಕಿ ಹೆಚ್ಚಿನವುಗಳು ನಿರ್ಮಾಣ ಹಂತದಲ್ಲಿದ್ದವು ಎಂದು ಅದು ಹೇಳಿದೆ.

 ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಅಧಿಕಾರಿಗಳು ಇಸ್ರೇಲ್‌ಗೆ ಕರೆ ನೀಡಿದ್ದಾರೆ ಹಾಗೂ 17 ಫೆಲೆಸ್ತೀನಿಯರು ನಿರಾಶ್ರಿತರಾಗಿದ್ದಾರೆ ಎಂದು ಹೇಳಿದ್ದಾರೆ.

 ಕುವೈತ್, ಇಂಡೋನೇಶ್ಯ ಮತ್ತು ದಕ್ಷಿಣ ಆಫ್ರಿಕಗಳು ಮಂಗಳವಾರ 15 ಸದಸ್ಯರ ಭದ್ರತಾ ಮಂಡಳಿಗೆ 5 ಪ್ಯಾರಾಗ್ರಾಫ್‌ಗಳ ಕರಡು ಹೇಳಿಕೆಯೊಂದನ್ನು ಕಳುಹಿಸಿವೆ. ಹೇಳಿಕೆಯು ಫೆಲೆಸ್ತೀನ್ ಮನೆಗಳ ಧ್ವಂಸದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸುತ್ತದೆ ಹಾಗೂ ಈ ಧ್ವಂಸ ಕಾರ್ಯಾಚರಣೆಯು ‘‘ಎರಡು-ದೇಶ ಪರಿಹಾರ ಮತ್ತು ನ್ಯಾಯೋಚಿತ ಹಾಗೂ ಶಾಶ್ವತ ಶಾಂತಿಯ ಸಂಭವನೀಯತೆಯನ್ನು ದುರ್ಬಲಗೊಳಿಸುತ್ತದೆ’’ ಎಂದು ಹೇಳುತ್ತದೆ.

ಈ ಬರಹಕ್ಕೆ ತಾನು ಬೆಂಬಲ ಸೂಚಿಸಲಾರೆ ಎಂಬುದಾಗಿ ಅಮೆರಿಕ ಬುಧವಾರ ಭದ್ರತಾ ಮಂಡಳಿಯ ಇತರ ಸದಸ್ಯರಿಗೆ ಹೇಳಿದೆ ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ.

ಬಳಿಕ, ಮೂರು ಪ್ಯಾರಾಗ್ರಾಫ್‌ಗಳನ್ನು ಹೊಂದಿದೆ ಪರಿಷ್ಕತ ಹೇಳಿಕೆಯೊಂದನ್ನು ಪೂರೈಸಲಾಯಿತು. ಆದರೆ, ಈ ಬರಹಕ್ಕೂ ತನ್ನ ಸಮ್ಮತಿಯಿಲ್ಲ ಎಂದು ಅಮೆರಿಕ ಹೇಳಿತು ಎಂದು ರಾಜತಾಂತ್ರಿಕರು ಹೇಳಿದ್ದಾರೆ.

ವಿಶ್ವಸಂಸ್ಥೆಯು ಇಸ್ರೇಲ್ ವಿರೋಧಿ ಧೋರಣೆಯನ್ನು ಹೊಂದಿಎ ಎಂಬುದಾಗಿ ಅಮೆರಿಕ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದೆ ಹಾಗೂ ಭದ್ರತಾ ಮಂಡಳಿಯ ಕ್ರಮಗಳಿಂದ ತನ್ನ ಮಿತ್ರ ದೇಶವನ್ನು ರಕ್ಷಿಸುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News