ಮಹಾಮಳೆಗೆ ಮುಂಬೈ ತತ್ತರ: ಜನಜೀವನ ಅಸ್ತವ್ಯಸ್ತ

Update: 2019-07-27 16:40 GMT

ಮುಂಬೈ, ಜು.27: ಬಲಗೊಳ್ಳುತ್ತಿರುವ ಮುಂಗಾರು ಮತ್ತು ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಒತ್ತಡ ಕುಸಿದ ಪರಿಣಾಮ ಮುಂಬೈ ನಗರ ಹಾಗೂ ಸುತ್ತಮುತ್ತಲ ಪ್ರದೇಶ ಹಿಂದೆಂದೂ ಕಾಣದ ರೀತಿಯ ಮಳೆ ಕಾಣುತ್ತಿದ್ದು ಇಡೀ ಮುಂಬೈ ನಗರಿ ಸಾಗರವಾಗಿ ಬದಲಾಗಿದೆ. ಕಳೆದ 24 ಗಂಟೆಗಳಿಂದ ಎಡೆಬಿಡದೆ ಸುರಿಯುತ್ತಿರುವ ತೀವ್ರ ಮಳೆಯಿಂದ ವಿಮಾನ ಯಾನ ರದ್ದುಗೊಂಡಿದ್ದರೆ ರೈಲುಗಳು ಎಲ್ಲೆಂದರಲ್ಲಿ ನಿಂತಿವೆ. ಬಸ್ ಸೇವೆ ಕೂಡಾ ಅತೀಹೆಚ್ಚು ಸಮಸ್ಯೆಗೆ ಒಳಗಾಗಿದ್ದು ಜನರು ಅತಂತ್ರರಾಗಿದ್ದಾರೆ.

ಶುಕ್ರವಾರ ತಮ್ಮ ಮನೆಗಳಿಂದ ತೆರಳಿದ ಜನರು ವಾಪಸಾಗಲು ಸಾಧ್ಯವಾಗದೆ ಹೋಟೆಲ್‌ಗಳು, ರೆಸಾರ್ಟ್‌ಗಳು, ಮಂದಿರ, ಮಸೀದಿ ಹೀಗೆ ತಾವು ಹೋದ ಕಡೆಗಳಲ್ಲೇ ಉಳಿದು ರಕ್ಷಣೆಗೆ ಕಾಯುತ್ತಿದ್ದಾರೆ. ನೌಕಾಪಡೆ ಮತ್ತು ವಾಯುಪಡೆ ರಕ್ಷಣೆಗಾಗಿ ಕಳುಹಿಸಿರುವ ಹೆಲಿಕಾಪ್ಟರ್‌ಗಳು ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ವಾಪಾಸಾಗಿರುವುದು ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಮತ್ತೊಂದೆಡೆ ಮುಂದಿನ 48 ಗಂಟೆಗಳಲ್ಲಿ ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಕೆ ಎಚ್ಚರಿಕೆ ನೀಡಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತೀಯ ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಹಾಗೂ ಇತರ ಹಲವು ರಕ್ಷಣಾ ತಂಡಗಳು ನೆರೆಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ.

ಬದ್ಲಾಪುರ್‌ನಲ್ಲಿ ಪೆಟ್ರೋಲ್ ಪಂಪ್‌ನ ಛಾವಣಿ ಮೇಲೆ ನಿಂತು ರಕ್ಷಣೆಗಾಗಿ ಕಾಯುತ್ತಿದ್ದ 70 ಜನರನ್ನು ಮತ್ತು ರಿವರ್ ವಿಂಡ್ ರೆಸಾರ್ಟ್‌ನಲ್ಲಿ ಬಾಕಿಯಾಗಿದ್ದ 45 ಜನರನ್ನು ರಕ್ಷಣಾ ತಂಡ ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ಮಧ್ಯೆಯೇ ಶಾಲೆಯ ಛಾವಣಿಗೆ ಪ್ಲಾಸ್ಟಿಕ್ ಶೀಟ್ ಹಾಕುತ್ತಿದ್ದ ಕಾರ್ಮಿಕ ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 30ರ ಹರೆಯದ ಶಿವನಾರಾಯಣ ಗುಪ್ತಾ ಎಂದು ಗುರುತಿಸಲಾಗಿದೆ. ಇವರು ಶನಿವಾರ ಶಾಲೆಯ ಛಾವಣಿಗೆ ಪ್ಲಾಸ್ಟಿಕ್ ಶೀಟ್ ಹಾಕುವ ವೇಳೆ ಮೇಲಿಂದ ಸಾಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಮುಟ್ಟಿದ ಪರಿಣಾಮ ವಿದ್ಯುತ್‌ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News