ಶೌಚಕ್ಕೆ ತೆರಳುವುದಾಗಿ ತಿಳಿಸಿ ಪರಾರಿಯಾದ ಮ.ಪ್ರ. ಸಿಎಂ ಸೋದರಳಿಯ

Update: 2019-07-27 17:28 GMT

ಹೊಸದಿಲ್ಲಿ, ಜು. 27: ವಿವಿಐಪಿ ಕಾಪ್ಟರ್ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸಲು ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಸೋದರಳಿಯ ರತುಲ್ ಪುರಿ ತನಿಖಾಧಿಕಾರಿಗಳಲ್ಲಿ ಶೌಚಕ್ಕೆ ತೆರಳಯವುದಾಗಿ ತಿಳಿಸಿ ಪರಾರಿಯಾದ ಘಟನೆ ಶುಕ್ರವಾರ ಇಲ್ಲಿ ನಡೆದಿದೆ. ಇಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭ ಉದ್ಯಮಿ ಪುರಿ ಕೆಲವು ಪುರಾವೆಗಳಿಗೆ ವಿರೋಧ ವ್ಯಕ್ತಪಡಿಸಿದರು. ವಿಚಾರಣೆ ನಡುವೆ ವಿರಾಮ ನೀಡುವಂತೆ ತನಿಖಾಧಿಕಾರಿಗಳಲ್ಲಿ ಕೋರಿದರು. ವಿರಾಮ ನೀಡಿದಾಗ ಶೌಚಾಲಯಕ್ಕೆ ತೆರಳಿರುವ ಅವರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

 ಅನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮೊಬೈಲ್‌ಗೆ ಕರೆ ಮಾಡಿದರು. ಆದರೆ, ಅದು ಸ್ವಿಚ್ ಆಫ್ ಆಗಿತ್ತು. ಈಗ ಜಾರಿ ನಿರ್ದೇಶನಾಲಯ ಪುರಿಗೆ ಮತ್ತೊಮ್ಮೆ ಸಮನ್ಸ್ ನೀಡಲು ಚಿಂತಿಸುತ್ತಿದೆ.

ಪುರಿ ಅವರಿಗೆ ನ್ಯಾಯಾಲಯ ಜುಲೈ 29ರಂದು ಅಪರಾಹ್ನ 2 ಗಂಟೆ ವರೆಗೆ ಬಂಧನದಿಂದ ರಕ್ಷಣೆ ನೀಡಿದೆ. ಹಿಂದೂಸ್ತಾನ್ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾಗಿರುವ ಪುರಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ಕೂಡ ವಿಚಾರಣೆ ನಡೆಸಿದ್ದರು. ಮೋಸಸ್ ಬೇರ್ ಕಂಪೆನಿಯ ಮುಖ್ಯ ಆಡಳಿತ ನಿರ್ದೇಶಕರಾಗಿರುವ ನೀತಾ ಹಾಗೂ ದೀಪಕ್ ಪುರಿ ಅವರ ಪುತ್ರ ರತುಲ್ ಪುರಿ. ನೀತಾ ಕಮಲ್‌ನಾಥ್ ಅವರ ಸಹೋದರಿ.

ವಿವಿಐವಿಗಳಿಗೆ 3,600 ಕೋಟಿ ರೂಪಾಯಿಯ ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಒಪ್ಪಂದ ರದ್ದುಗೊಳಿಸಲಾಗಿತ್ತು.

ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವು ಆರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News