20 ವರ್ಷಗಳ ಬಳಿಕವೂ ಪಾಠ ಕಲಿಸುವ ಕಾರ್ಗಿಲ್ ಯುದ್ಧ

Update: 2019-07-27 18:34 GMT

ಎತ್ತರದ ಭೂಪ್ರದೇಶಗಳಲ್ಲಿ ಸಾಂಪ್ರದಾಯಿಕ ಸೇನಾ ಕಾರ್ಯಾಚರಣೆಯನ್ನು ನಡೆಸುವಲ್ಲಿ ನಾವು ಪಡೆದಿದ್ದ ತರಬೇತಿಯು ಉತ್ಕೃಷ್ಟ ಗುಣಮಟ್ಟದ್ದಾಗಿರಲಿಲ್ಲ ಹಾಗೂ ಸೇನೆಯ ವಿವಿಧ ಘಟಕಗಳ ನಡುವಿನ ಸಮನ್ವಯತೆಯನ್ನುಂಟು ಮಾಡಲು ಸ್ವಲ್ಪ ಕಾಲಾವಕಾಶ ಬೇಕಾಗಿತ್ತು. ತಂತ್ರಗಾರಿಕೆಯ ಹಾಗೂ ವ್ಯೆಹಾತ್ಮಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಪ್ರತ್ಯುತ್ತರ ನೀಡಲು ನಾವು ಹೊರಟಿದ್ದೆವು.

85 ದಿನಗಳ ಕಾರ್ಗಿಲ್ ಯುದ್ಧದ ಮೊದಲಾರ್ಧದಲ್ಲಿ ಭಾರತೀಯ ಸೇನೆಯು ಅತ್ಯಂತ ಘೋರವಾದ ಪರಿಸ್ಥಿತಿಯನ್ನು ಎದುರಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಶ್ರೇಷ್ಠವಾದ ಪರಾಕ್ರಮವನ್ನು ಪ್ರದರ್ಶಿಸಿತ್ತು.
 1999ರ ಮೇ 3ರಂದು ಹಾಗೂ ಆನಂತರದ ದಿನಗಳಲ್ಲಿ ನಡೆದ ಘಟನೆಗಳು ಭಾರತೀಯ ಸೇನೆಯನ್ನು ವ್ಯೆಹಾತ್ಮಕ ಹಾಗೂ ತಂತ್ರಗಾರಿಕೆಯ ವಿಷಯದಲ್ಲಿ ದಿಗ್ಭ್ರಮೆಗೊಳ್ಳುವಂತೆ ಮಾಡಿತ್ತು. ಯುದ್ಧದ ತುರ್ತು ಸನ್ನಿವೇಶ ನಿಭಾಯಿಸುವ ನಮ್ಮ ಯೋಜನೆಗಳು ಕಳಪೆಯಾಗಿದ್ದವು ಹಾಗೂ ಯಾವುದೇ ಯೋಜನೆಯನ್ನು ರೂಪಿಸದೆಯೇ ಪ್ರತಿದಾಳಿ ನಡೆಸಲು ಸೇನಾಪಡೆಗಳು ಧಾವಿಸಿದ್ದವು. ಎತ್ತರದ ಭೂಪ್ರದೇಶಗಳಲ್ಲಿ ಸಾಂಪ್ರದಾಯಿಕ ಸೇನಾ ಕಾರ್ಯಾಚರಣೆಯನ್ನು ನಡೆಸುವಲ್ಲಿ ನಾವು ಪಡೆದಿದ್ದ ತರಬೇತಿಯು ಉತ್ಕೃಷ್ಟ ಗುಣಮಟ್ಟದ್ದಾಗಿರಲಿಲ್ಲ ಹಾಗೂ ಸೇನೆಯ ವಿವಿಧ ಘಟಕಗಳ ನಡುವಿನ ಸಮನ್ವಯತೆಯನ್ನುಂಟು ಮಾಡಲು ಸ್ವಲ್ಪ ಕಾಲಾವಕಾಶ ಬೇಕಾಗಿತ್ತು. ತಂತ್ರಗಾರಿಕೆಯ ಹಾಗೂ ವ್ಯೆಹಾತ್ಮಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಪ್ರತ್ಯುತ್ತರ ನೀಡಲು ನಾವು ಹೊರಟಿದ್ದೆವು. ನಮ್ಮಲ್ಲಿ ಏನು ಇರಬೇಕಿತ್ತು ಎಂಬುದಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಇದ್ದುದನ್ನೇ ಬಳಸಿಕೊಂಡು ಯುದ್ಧ ಮಾಡುವಂತಹ ಸನ್ನಿವೇಶ ಉಂಟಾಗಿತ್ತು.
  ಆದರೆ ಕಾರ್ಗಿಲ್ ಯುದ್ಧದ ದ್ವಿತೀಯಾರ್ಧದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದವು. 1999ರ ಜುಲೈ 26ರ ವೇಳೆಗೆ ಯುದ್ಧವು ಕೊನೆಗೊಂಡ ಹೊತ್ತಿಗೆ ಭಾರತೀಯ ಪಡೆಗಳು ಅದ್ಭುತವಾದ ಶೌರ್ಯವನ್ನು ಪ್ರದರ್ಶಿಸಿದವು ಹಾಗೂ ಅವರ ಅಸಾಧಾರಣವಾದ ಸಾಧನೆಯು ಸೇನಾ ಇತಿಹಾಸದಲ್ಲೇ ಅಳಿಸಲಾಗದಂತಹ ಹೆಗ್ಗುರುತಾಗಿ ಬಿಟ್ಟಿದೆ. ಇಂತಹ ದೃಢ ನಿರ್ಧಾರ, ಧೈರ್ಯ, ತ್ಯಾಗದ ಭಾವನೆ ಹಾಗೂ ಕರ್ತವ್ಯ ನಿಷ್ಠೆಯನ್ನು ಪ್ರದರ್ಶಿಸಿದ ಇನ್ನೊಂದು ಉದಾಹರಣೆ ನನಗೆ ತಿಳಿದಿಲ್ಲ. ಕಾರ್ಗಿಲ್ ಯುದ್ಧದಿಂದಾಗಿ ರೆಜಿಮೆಂಟ್ ವ್ಯವಸ್ಥೆಯನ್ನು ಎತ್ತಿಹಿಡಿಯಲಾಯಿತು. ಫಿರಂಗಿ ಹಾಗೂ ವಾಯುಪಡೆ ಸಾಮರ್ಥ್ಯದ ಬಳಕೆಯ ಕುರಿತಾಗಿ ಹೊಸ ನಿಯಮಗಳನ್ನು ರಚಿಸಲಾಯಿತು. ಪರಾಕ್ರಮ, ಅಗಾಧವಾದ ಶಸ್ತ್ರಾಸ್ತ್ರ ಬಲ ಹಾಗೂ ನಿರಂತರವಾದ ಹೋರಾಟವು ಅಭೇದ್ಯವಾದಂತಹ ಎತ್ತರಪ್ರದೇಶಗಳಲ್ಲಿ ಕುಳಿತಿದ್ದ ಶತ್ರುವಿನ ಮಾನಸಿಕ ಸ್ಥೈರ್ಯವನ್ನೇ ಉಡುಗಿಸಿತು.
ಕಾರ್ಗಿಲ್ ಯುದ್ಧದಿಂದಾಗಿ ನಾವು ಕಲಿತ ಪಾಠಗಳನ್ನು ನಾನು ಪರಿಶೀಲಿಸಿದ್ದೇನೆ. ಅವು 20 ವರ್ಷಗಳ ಬಳಿಕವೂ ಹಾಗೂ ಭವಿಷ್ಯದ ಯುದ್ಧ ಸನ್ನಿವೇಶಗಳಿಗೆ ಪ್ರಸಕ್ತವಾಗಿಯೇ ಉಳಿದುಕೊಂಡಿವೆ.
ಅಚ್ಚರಿಯ ಅಂಶ
ವ್ಯೆಹಾತ್ಮಕ ಮಟ್ಟದಲ್ಲಿ ಕಾರ್ಗಿಲ್ ಯುದ್ಧವು ಒಂದು ಸಂಪೂರ್ಣವಾದ ಅಚ್ಚರಿಯಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಾಕಿಸ್ತಾನವು ಒಳನುಸುಳು ವಿಕೆಯನ್ನು ನಡೆಸುತ್ತದೆಯೆಂಬ ಯೋಚನೆಯೇ ನಮಗೆ ಹೊಳೆದಿರಲಿಲ್ಲ.
ಶತ್ರುಪಡೆಗಳ ಒಳನುಸುಳುವಿಕೆ ಪತ್ತೆಯಾದ ಬಳಿಕವೂ ಆಕ್ರಮಣಕಾರಿಯಾದ ಗಸ್ತು ತಿರುಗುವಿಕೆ ಹಾಗೂ ವೈಮಾನಿಕ ಕಣ್ಗಾವಲನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಶತ್ರುಪಡೆಗಳ ಒಳನುಸುಳುವಿಕೆಯ ವ್ಯಾಪ್ತಿ ಹಾಗೂ ತೀವ್ರತೆ ಹಾಗೂ ಅವುಗಳ ಬಲಾಬಲವನ್ನು ನಿರ್ಧರಿಸಲು ಸೇನೆಗೆ ಸುಮಾರು ಎರಡು ವಾರಗಳೇ ಹಿಡಿದವು.
ಸೀಮಿತವಾದ ಸಮರದಲ್ಲಿ ಇಂತಹ ನ್ಯೂನತೆಗಳು ಸೋಲಿಗೆ ಕಾರಣವಾಗಿಬಿಡುತ್ತವೆ. ಹೀಗಾಗಿ ನಮ್ಮ ತಂತ್ರಗಾರಿಕೆಯ ಕಣ್ಗಾವಲು ಹಾಗೂ ವಿಚಕ್ಷಣಾ ಸಾಮರ್ಥ್ಯವನ್ನು ಮತ್ತು ಸಮಗ್ರ ಯುದ್ಧಕ್ಷೇತ್ರ ನಿರ್ವಹಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ವಿಷಾದನೀಯವೆಂದರೆ, ನಮ್ಮ ಸೇನೆಯು ಅದರ ಯುದ್ಧಭೂಮಿ ನಿರ್ವಹಣಾ ವ್ಯವಸ್ಥೆ ಯೋಜನೆಯನ್ನು ಕಾರ್ಗಿಲ್ ಯುದ್ಧದ ಹಿಂದಿನ ವರ್ಷದ ಜುಲೈನಲ್ಲಿಯೇ ಕೈಬಿಟ್ಟಿತ್ತು.
ಕಳಪೆ ಯೋಜನೆ, ಅವಸರದ ಪ್ರತಿಕ್ರಿಯೆ
ಕಾರ್ಗಿಲ್ ಸೇರಿದಂತೆ ಸಮಗ್ರ ಲಡಾಕ್ ಪ್ರಾಂತದ ಭದ್ರತೆಯ ಹೊಣೆಹೊಂದಿರುವ 3 ಕಾಲ್ದಳ (ಇನ್‌ಫೆಂಟ್ರಿ) ವಿಭಾಗದ ಸೇನಾಪಡೆಯು ಆಗಲೇ ಅದರ ಸಾಮರ್ಥ್ಯವನ್ನು ಮೀರಿ ಇಡೀ ಪ್ರದೇಶಕ್ಕೆ ವ್ಯಾಪಿಸಿಕೊಂಡಿತ್ತು. ಅಷ್ಟು ಹೊತ್ತಿಗೆ ಮೀಸಲು ಪಡೆಗಳು ಕಣಿವೆಯಿಂದ ಆಗಮಿಸಿರಲಿಲ್ಲ ಹಾಗೂ ಇಲ್ಲಿನ ಪರಿಸರಕ್ಕೆ ಒಗ್ಗಿಕೊಂಡಿರಲಿಲ್ಲ. 9 ಸಾವಿರದಿಂದ 12 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಒಗ್ಗಿಕೊಳ್ಳಬೇಕಾದರೆ ಅವರಿಗೆ ಕನಿಷ್ಠ ಆರು ದಿನಗಳ ಅಗತ್ಯವಿದೆ. ಹಾಗೆಯೇ 12ಸಾವಿರದಿಂದ 15 ಸಾವಿರ ಅಡಿಗಳವರೆಗೆ ಮತ್ತು 15 ಸಾವಿರಕ್ಕಿಂತ ಅಧಿಕ ಅಡಿಗಳಿರುವ ಪ್ರದೇಶಗಳಲ್ಲಿ ಕಾರ್ಯಾಚರಿಸಲು ಕನಿಷ್ಠ 10ರಿಂದ 14 ದಿನಗಳ ಅಗತ್ಯವಿದೆ.
 ಕಳಪೆಮಟ್ಟದ ಕಣ್ಗಾವಲು ಹಾಗೂ ಸ್ಥಳ ಪರಿಶೀಲನೆಯ ಕಾರಣದಿಂದಾಗಿ, ಮೇ 3ನೇ ತಾರೀಕಿನಂದು ಶತ್ರುಪಡೆಗಳ ಒಳನುಸುಳುವಿಕೆಯ ಮೊದಲ ವರದಿಗಳ ನಂತರವೂ ಗುರುತಿಸಲು ಸಾಧ್ಯವಾಗಲಿಲ್ಲ. ಈ ವೈಫಲ್ಯವನ್ನು ಮರೆ ಮಾಚಲು ಪ್ರಯತ್ನಗಳು ಕೂಡಾ ನಡೆದಿದ್ದವು. ಆದಾಗ್ಯೂ ಸಣ್ಣ ಸಂಖ್ಯೆಯ ಉಗ್ರರಷ್ಟೇ ನುಸುಳಿದ್ದಾರೆಂದು ಸಂಬಂಧಪಟ್ಟ ಕಮಾಂಡರ್‌ಗಳು ಹೇಳಿಕೊಳ್ಳುತ್ತಲೇ ಬಂದಿದ್ದರು. ನುಸುಳುಕೋರರನ್ನು ಹೊರದಬ್ಬಲು ವಾತಾವರಣಕ್ಕೆ ಒಗ್ಗಿಕೊಳ್ಳದೆ ಇರುವ ಪಡೆಗಳನ್ನು ಯಾವುದೇ ಪೂರ್ವಸಿದ್ಧತೆಗಳಿಲ್ಲದೆ ರವಾನಿಸಲಾಯಿತು. ಇದರಿಂದಾಗಿ ಆರಂಭದಲ್ಲಿ ಭಾರೀ ಪ್ರಮಾಣದ ಸಾವುನೋವುಗಳನ್ನು ಅನುಭವಿಸಬೇಕಾಯಿತು. ಈ ಕಳಪೆಯಾದ ತುರ್ತು ಸನ್ನಿವೇಶ ನಿರ್ವಹಣೆ ಯೋಜನೆಗೆ ಕಾರ್ಪ್ಸ್ ಆ್ಯಂಡ್ ಕಮಾಂಡ್‌ನ ಮುಖ್ಯ ಕಾರ್ಯಾಲಯವು ಹೊಣೆ ಗಾರನಾಗಿದೆ. ಪೂರ್ವಸಿದ್ಧತೆಯಿಲ್ಲದೆ ಪಡೆಗಳನ್ನು ಯುದ್ಧರಂಗಕ್ಕೆ ಕಳುಹಿಸಿದ್ದುದು ಬ್ರಿಗೇಡ್ ಹಾಗೂ ವಿಭಾಗೀಯ ಕಮಾಂಡರ್ ನಡೆಸಿದ ಅತಿ ದೊಡ್ಡ ಸೇನಾ ಅಪರಾಧವಾಗಿದೆ.
ಕಳಪೆ ತರಬೇತಿ
ಸಾಂಪ್ರದಾಯಿಕವಾಗಿ ಸೇನಾಪಡೆಗಳಿಗೆ ತಮ್ಮ ಲೋಪಗಳನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟಕರವಾದುದಾಗಿದೆ. ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ದೀರ್ಘ ಸಮಯವನ್ನು ಕಳೆದ ಪರಿಣಾಮವಾಗಿ ಸಾಂಪ್ರದಾಯಿಕ ಸೇನಾ ಕಾರ್ಯಾಚರಣೆಗಳಲ್ಲಿ ನಮ್ಮ ಸೇನೆಯ ತರಬೇತಿಯ ಗುಣಮಟ್ಟ ಕುಸಿಯುವಂತೆ ಮಾಡಿದೆ. ಹಿಂದಿನ ಹತ್ತು ವರ್ಷಗಳವರೆಗೂ ನಮ್ಮ ಸೇನಾಪಡೆಗಳ ತರಬೇತಿ ವಿಧಾನದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲವೆಂಬುದು ಗಮನಾರ್ಹವಾಗಿದೆ.
 ಕಾರ್ಗಿಲ್ ಸಮರದ ಸಂದರ್ಭದಲ್ಲಿ ನಮ್ಮ ಕಾಲ್ದಳ (ಇನ್‌ಫೆಂಟ್ರಿ)ಗಳು ಎತ್ತರದ ಪ್ರದೇಶಗಳಲ್ಲಿ ದಾಳಿಗಳನ್ನು ಎದುರಿಸುವುದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ ಹಾಗೂ ಯುದ್ಧದ ಮೊದಲ ತಿಂಗಳಲ್ಲಿ ಈ ಕೆಲಸವನ್ನು ಕಲಿಯಲು ಇದಕ್ಕೆ ಅವರು ಒಂದು ದೊಡ್ಡ ಬೆಲೆಯನ್ನೇ ತೆರಬೇಕಾಯಿತು.
 ಉನ್ನತವಾದ ವ್ಯೆಹಾತ್ಮಕವಾದ ಗುರಿ
ಅಂತರ್‌ರಾಷ್ಟ್ರೀಯ ಅಭಿಪ್ರಾಯವನ್ನು ಗಮನದಲ್ಲಿರಿಸಿಕೊಂಡು ಗಡಿ ನಿಯಂತ್ರಣ ರೇಖೆಯನ್ನು ದಾಟದೆಯೇ ಕಾರ್ಗಿಲ್‌ನ ಪ್ರಾಂತೀಯ ಯಥಾಸ್ಥಿತಿಯನ್ನು ಮರುಸ್ಥಾಪಿಸುವ ನಮ್ಮ ರಾಜಕೀಯ ಉದ್ದೇಶವು ನಮಗೆ ಪ್ರಶಂಸೆಗಳನ್ನು ಗಳಿಸಿಕೊಟ್ಟಿದೆ. ಆದರೆ ನಮ್ಮ ವ್ಯೆಹಾತ್ಮಕ ನಿಷ್ಕಪಟತೆಯನ್ನು ತೋರಿಸಿಕೊಟ್ಟಿದೆ.
ಕಾರ್ಗಿಲ್ ಯುದ್ಧವು ನಮ್ಮ ತ್ರಿಸೇನಾಪಡೆಗಳ ಸಹಕಾರವು ಕಳಪೆಯಾಗಿರುವುದನ್ನು ಕೂಡಾ ಎತ್ತಿ ತೋರಿಸಿತ್ತು. ಆರಂಭದ ಹಂತಗಳಲ್ಲಿ ಭಾರತೀಯ ವಾಯುಪಡೆ (ಐಎಎಫ್)ಯು ಕಾರ್ಯಾಚರಣೆಗೆ ಸೇನಾಸಿಬ್ಬಂದಿ ಸಮಿತಿ ವರಿಷ್ಠರಿಂದ ನಿರ್ದೇಶನಗಳನ್ನು ಸ್ವೀಕರಿಸುವ ಬದಲಿಗೆ, ನೇರವಾಗಿ ಕೇಂದ್ರ ಸರಕಾರದಿಂದಲೇ ಪ್ರತ್ಯೇಕವಾದ ವ್ಯೆಹಾತ್ಮಕ ಅನುಮೋದನೆಯನ್ನು ಪಡೆಯಬಯಸಿತ್ತು.
ಶ್ರೇಷ್ಠವಾದ ಗೌರವಾರ್ಪಣೆ
ಕಾರ್ಗಿಲ್ ಯುದ್ಧದಲ್ಲಿ ನಮ್ಮ ಅಭೂತಪೂರ್ವ ಯಶಸ್ಸನ್ನು ಸಂಭ್ರಮಿಸಬೇಕಾದರೆ, ಯುದ್ಧದ ಆರಂಭದಲ್ಲಿ ಉಂಟಾಗಿದ್ದ ಸೋಲಿನಿಂದ ಪಾಠಗಳನ್ನು ಕಲಿಯುವುದು ಕೂಡಾ ಅಗತ್ಯವಾಗಿದೆ. ಭವಿಷ್ಯದಲ್ಲಿ ನಾವು ತೆರಳಬಹುದಾದ ಸಂಘರ್ಷಗಳು ಅಥವಾ ಯುದ್ಧಗಳಿಗೆ ಈ ಪಾಠಗಳು ಅತ್ಯಂತ ಪ್ರಸಕ್ತವಾಗಿರುತ್ತವೆ. ಭವಿಷ್ಯದಲ್ಲಿ ಸಮರಗಳು ಅಲ್ಪಾವಧಿಯದ್ದಾಗಿರುತ್ತ್ತವಾದರೂ ಅತ್ಯಂತ ತೀವ್ರತೆಯನ್ನು ಹೊಂದಿರುತ್ತವೆ.
 ಕಾರ್ಗಿಲ್ ಯುದ್ಧದ 20ನೇ ವರ್ಷಾಚರಣೆಯನ್ನು ಸಂಭ್ರಮಿಸುವ ಅತ್ಯುತ್ತಮ ಮಾರ್ಗವೆಂದರೆ ದೀರ್ಘಕಾಲದಿಂದ ನನೆಗುದಿಯಲ್ಲಿ ರಾಷ್ಟ್ರೀಯ ಭದ್ರತಾ ಸುಧಾರಣೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಗಿಲ್ ಪರಾಮರ್ಶನಾ ಸಮಿತಿ ಹಾಗೂ ಸಚಿವ ಸಮಿತಿಯ ವರದಿಗಳನ್ನು ಮರುಪರಿಶೀಲಿಸುವುದಾಗಿದೆ.
ಅಂತಿಮವಾಗಿ ಹೇಳುವುದಾದರೆ, ಮುಂದೇನಾದರೂ ನಾವು ಯುದ್ಧ ಮಾಡಬೇಕಿದ್ದರೆ, ಅದಕ್ಕೂ ಮುನ್ನ ನಮ್ಮ ಬಳಿ ಏನಿದೆ ಹಾಗೂ ನಮ್ಮ ಬಳಿ ಏನಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ.
ಕೃಪೆ: theprint.in

Writer - ಲೆ. ಜ. ಎಚ್. ಎಸ್. ಪನಾಗ್

contributor

Editor - ಲೆ. ಜ. ಎಚ್. ಎಸ್. ಪನಾಗ್

contributor

Similar News

ಜಗದಗಲ
ಜಗ ದಗಲ