ಅಫ್ಘಾನ್ ಸರಕಾರದ ಜೊತೆ ಶಾಂತಿ ಮಾತುಕತೆಯ ಪ್ರಸ್ತಾಪ ನಿರಾಕರಿಸಿದ ತಾಲಿಬಾನ್

Update: 2019-07-28 17:44 GMT

ಕಾಬೂಲ್,ಜು.28: ಅಫ್ಘಾನ್ ಸರಕಾರವು ಇದೇ ಮೊದಲ ಬಾರಿಗೆ ತಾಲಿಬಾನ್ ಬಂಡುಕೋರರ ಜೊತೆ ಮುಂದಿನ ಎರಡು ವಾರಗಳೊಳಗೆ , ಶಾಂತಿ ಮಾತುಕತೆ ನಡೆಸಲಿದೆಯೆಂದು ಅಫ್ಘಾನಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ತಾಲಿಬಾನ್, ಅಂತಹ ಯಾವುದೇ ಮಾತುಕತೆಯನ್ನು ಆಯೋಜಿಸಲಾಗಿಲ್ಲವೆಂದು ಹೇಳಿದೆೆ ಹಾಗೂ ಅಫ್ಘಾನ್ ಸರಕಾರದ ಅಧಿಕಾರಿಗಳ ಜೊತೆಗೆ ನೇರವಾಗಿ ಮಾತುಕತೆ ಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದೆ.

 ಸುಮಾರು ಒಂದು ವರ್ಷದಿಂದ ತಾಲಿಬಾನ್ ಬಂಡುಕೋರರ ಪ್ರತಿನಿಧಿಗಳು ಕತರ್‌ನಲ್ಲಿ ಅಮೆರಿಕದ ಜೊತೆಗೆ ಶಾಂತಿ ಮಾತುಕತೆಯನ್ನು ನಡೆಸುತ್ತಿದ್ದಾರೆ. ಆದರೆ ಅಫ್ಘಾನ್ ಸರಕಾರವು ಅಮೆರಿಕದ ಕೈಗೊಂಬೆಯಾಗಿರುವುದರಿಂದ ಅದಕ್ಕೆ ತಾನು ಮಾನ್ಯತೆ ನೀಡುವುದಿಲ್ಲವೆಂದು ತಾಲಿಬಾನ್ ಹೇಳಿದೆ.

 ಅಫ್ಘಾನಿಸ್ತಾನ ಶಾಂತಿ ಪ್ರಕ್ರಿಯೆ ಕುರಿತ ಸಹಾಯಕ ಸಚಿವ ಅಬ್ದುಲ್ ಸಲಾಂ ರಾಹಿಮಿ ಅವರು ಇಂದು ಹೇಳಿಕೆಯೊಂದನ್ನು ನೀಡಿ, 15 ಸದಸ್ಯ ಬಲದ ಅಫ್ಘಾನಿಸ್ತಾನ ಸರಕಾರದ ನಿಯೋಗವು ಯುರೋಪ್‌ನಲ್ಲಿ ತಾಲಿಬಾನ್ ಪ್ರತಿನಿಧಿಗಳ ಜೊತೆ ಮಾತುಕತೆಯನ್ನು ನಡೆಸಲಿದೆಯೆಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.

 ಆದರೆ ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿದ್ ಅಂತಹ ಯಾವುದೇ ಮಾತುಕತೆಯನ್ನು ನಡೆಸುವ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ ಹೇಳಿದ್ದಾನೆ.

 ಒಮ್ಮೆ ಬಂಡುಕೋರರು ಅಮೆರಿಕದ ಜೊತೆ ಒಪ್ಪಂದವನ್ನು ಏರ್ಪಡಿಸಿಕೊಂಡಲ್ಲಿ ಆನಂತರ ಅವರು ಅಫ್ಘಾನ್‌ನಲ್ಲಿ ಅಂತರಿಕ ಮಟ್ಟದ ಮಾತುಕತೆಗೆ ಸಿದ್ಧರಿದ್ದಾರೆ. ಆದರೆ ಸರಕಾರದ ಪ್ರತಿನಿಧಿಗಳು ವೈಯಕ್ಚಿಕ ನೆಲೆಯಲ್ಲಿ ಮಾತ್ರವೇ ಮಾತುಕತೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಆತ ತಿಳಿಸಿದ್ದಾನೆ.

ಪ್ರಸ್ತುತ ಕಾಬೂಲ್ ಪ್ರವಾಸದಲ್ಲಿರುವ ಅಮೆರಿಕದ ಶಾಂತಿ ಪ್ರತಿನಿಧಿ ಝಲ್ಮೆಯಿ ಖಲೀಲ್‌ಝಾದ್ ಕೂಡಾ ಈ ನಿಲುವಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಅಮೆರಿಕ ಹಾಗೂ ತಾಲಿಬಾನ್ ಬಂಡುಕೋರರ ನಡವೆ ಒಪ್ಪಂದವು ಪೂರ್ಣಗೊಂಡ ಬಳಿಕ, ಅಫ್ಘಾನ್‌ನಲ್ಲಿ ಅಂತರಿಕ ಮಟ್ಟದ ಮಾತುಕತೆಗಳು ನಡೆಯಲಿದೆಯೆಂದು ಅವರು ಟ್ವೀಟಿಸಿದ್ದಾರೆ.

 ಅಫ್ಘಾನ್‌ನಲ್ಲಿ ನಡೆಯುವ ಅಂತರಿಕ ಮಟ್ಟದ ಮಾತುಕತೆಯಲ್ಲಿ ತಾಲಿಬಾನ್ ಹಾಗೂ ಹಿರಿಯ ಸರಕಾರಿ ಅಧಿಕಾರಿಗಳನ್ನು ಒಳಗೊಂಡ ನಿಯೋಗ, ರಾಜಕೀಯ ಪಕ್ಷಗಳ ಪ್ರಮುಖ ಪ್ರತಿನಿಧಿಗಳು, ನಾಗರಿಕ ಸಮಾಜ ಹಾಗೂ ಮಹಿಳಾ ಪ್ರತಿನಿಧಿಗಳನ್ನು ಒಳಗೊಂಡಿರುವುದು ಎಂದು ಅವರು ಹೇಳಿದರು.

ಈ ಮಧ್ಯೆ ಸೆಪ್ಟೆಂಬರ್ 28ರಂದು ನಡೆಯಲಿರುವ ಅಫ್ಘಾನಿಸ್ತಾನ ಅಧ್ಯಕ್ಷೀಯ ಚುನಾವಣೆಯ ಚುನಾವಣಾ ಪ್ರಚಾರವು ರವಿವಾರ ಆರಂಭಗೊಂಡಿದೆ. ಹಾಲಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ 18 ವರ್ಷಗಳ ಸುದೀರ್ಘ ಅಫ್ಘಾನ್ ಯುದ್ದಕ್ಕೆ ಅಂತ್ಯಹಾಡುವ ಭರವಸೆಯೊಂದಿಗೆ. ಎರಡನೆ ಅವಧಿಗೆ ಪುನರಾಯ್ಕೆ ಕೋರುತ್ತಿದ್ದಾರೆ.

ಆದರೆ ಕಳೆದ ಒಂದು ವರ್ಷದಿಂದ ಅಮೆರಿಕವು ಅಫ್ಘಾನ್ ಸರಕಾರವನ್ನು ಹೊರಗಿಟ್ಟು, ತಾಲಿಬಾನ್ ಜೊತೆ ನೇರ ಮಾತುಕತೆ ನಡೆಸುತ್ತಿದೆ.

 ಅಂತಾರಾಷ್ಟ್ರೀಯ ಭಯೋತ್ಪಾದಕ ದಾಳಿಗಳಿಗೆ ಅಫ್ಘಾನಿಸ್ತಾನವು ಕಾರಸ್ಥಾನವಾಗುವುದಿಲ್ಲವೆಂದು ತಾಲಿಬಾನ್ ಖಾತರಿ ನೀಡಿದಲ್ಲಿ ಅಮೆರಿಕ ಪಡೆಗಳು ಹಿಂದಕ್ಕೆ ಕರೆಸಿಕೊಳ್ಳುವ ಒಪ್ಪಂದವನ್ನು ಏರ್ಪಡಿಸಿಕೊಳ್ಳುವ ಉದ್ದೇಶದೊಂದಿಗೆ ಉಭಯ ತಂಡಗಳು ಮಾತುಕತೆಯನ್ನು ನಡೆಸುತ್ತಿವೆ.

 ಆದಾಗ್ಯೂ ದೇಶದ ಅರ್ಧದಷ್ಟು ಭಾಗದ ಮೇಲೆ ನಿಯಂತ್ರಣ ಹೊಂದಿರುವ ತಾಲಿಬಾನ್ ಅಫ್ಘಾನಿಸ್ತಾನದ ಭದ್ರತಾ ಪಡೆಗಳ ವಿರುದ್ಧ ದಾಳಿಗಳನ್ನು ನಡೆಸುವುದನ್ನು ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News