×
Ad

ಮಾಸ್ಕೋದಲ್ಲಿ ಭಾರೀ ಪ್ರತಿಭಟನೆ; 1 ಸಾವಿರಕ್ಕೂ ಅಧಿಕ ಮಂದಿ ಬಂಧನ

Update: 2019-07-28 23:27 IST

ಮಾಸ್ಕೊ,ಜು.28: ಮಾಸ್ಕೊ ನಗರಾಡಳಿತ ಮಂಡಳಿಯ ಚುನಾವಣೆಗೆ ಪ್ರತಿಪಕ್ಷಗಳ ಹಲವು ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ ಕೂಡಾ ನಡೆಸಿರುವುದಾಗಿ ವರದಿಯಾಗಿದೆ. ಪ್ರತಿಭಟನೆಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಟಿವಿ ನಿಲಯದ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಮೇಯರ್ ಕಚೇರಿಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಕಾರರೊಂದಿಗೆ ಪೊಲೀಸರು ಹೊಕೈ ನಡೆಸಿದರು ಹಾಗೂ ಅವರನ್ನು ಚದುರಿಸಲು ಲಾಠಿ ಪ್ರಹಾರವನ್ನು ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 1070 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆಂದು ಸರಕಾರಿ ಸುದ್ದಿ ಸಂಸ್ಥೆಗಳಾದ ತಾಸ್ ಹಾಗೂ ಆರ್‌ಐಎ-ನೊವೊಸ್ತಿ ವರದಿ ಮಾಡಿದೆ.

  ಬಂಧಿತರಲ್ಲಿ ಬಹುತೇಕ ಮಂದಿ ಯುವಜನರೆಂಬುದಾಗಿ ತಿಳಿದುಬಂದಿದೆ. ನಗರಾಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಹಲವಾರು ಪ್ರತಿಪಕ್ಷ ಕಾರ್ಯಕರ್ತರನ್ನು ಪ್ರತಿಭಟನೆಗೆ ಮೊದಲೇ ನಗರದ ವಿವಿಧೆಡೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅನಧಿಕೃತವಾಗಿ ಪ್ರತಿಭಟನೆಗೆ ಕರೆ ನೀಡಿದ್ದಾರೆಂಬ ಆರೋಪದಲ್ಲಿ ರಶ್ಯದ ಪ್ರಮುಖ ಪ್ರತಿಪಕ್ಷ ನಾಯಕರಲ್ಲೊಬ್ಬರಾದ ಅಲೆಕ್ಸೆಯಿ ನವಾಲ್ನಿ ಅವರಿಗೆ ಬುಧವಾರ ಸ್ಥಳೀಯ ನ್ಯಾಯಾಲಯ 30 ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

  

ಪ್ರತಿಭಟನೆಯ ದೃಶ್ಯಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡುತ್ತಿದ್ದ ನವಾಲ್ನಿ ಒಡೆತದ ವಿಡಿಯೋ ಸ್ಟುಡಿಯೋ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದರು ಹಾಗೂ ಕಾರ್ಯಕ್ರಮದ ಮುಖ್ಯಸ್ಥ ವ್ಲಾದಿಮಿರ್ ಮಿಲೊನೊವ್ ಅವರನ್ನು ವಶಕ್ಕೆ ತೆಗೆದುಕೊಂಡರು. ಪ್ರತಿಭಟನೆಯ ನೇರ ಪ್ರಸಾರ ಮಾಡುತ್ತಿದ್ದ ಇಂಟರ್‌ನೆಟ್ ಟಿವಿ ವಾಹಿನಿಯ ಮೇಲೂ ಪೊಲೀಸರುದಾಳಿ ನಡೆಸಿದರು ಹಾಗೂ ಅದರ ಮುಖ್ಯಸಂಪಾದಕ ಅಲೆಕ್ಸಾಂಡ್ರಾ ಪೆರೆಪೆಲೊವಾ ಅವರನ್ನು ಬಂಧಿಸಿದ್ದಾರೆ. ನಾಮಪತ್ರಗಳು ಪಮರ್ಪಕವಾಗಿಲ್ಲವೆಂಬ ನೆಪದಲ್ಲಿ ಪ್ರತಿಪಕ್ಷಗಳ ಹಲವಾರು ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಲಾಗಿತ್ತು.

45 ಸ್ಥಾನಗಳನ್ನು ಹೊಂದಿರುವ ಮಾಸ್ಕೊ ಪೌರಾಡಳಿತ ಮಂಡಳಿಯನ್ನು ಪ್ರಸಕ್ತ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಪರವಾಗಿರುವ ಯುನೈಟೆಡ್ ರಶ್ಯ ಪಾರ್ಟಿ ನಿಯಂತ್ರಿಸುತ್ತಿದೆ. ಐದು ವರ್ಷಗಳ ಅವಧಿಯ ಮಾಸ್ಕೊ ಪೌರಾಡಳಿತ ಮಂಡಳಿಯ ಎಲ್ಲಾ ಸ್ಥಾನಗಳಿಗೆ ಸೆಪ್ಟೆಂಬರ್ 8ರಂದು ಚುನಾಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News