ಸಿರಿಯ: ಐಸಿಸ್ ದಾಳಿಗೆ 6 ಯೋಧರ ಬಲಿ
ಬೈರೂತ್,ಜು.28: ಸಿರಿಯದಲ್ಲಿ ಐಸಿಸ್ ಉಗ್ರರು ಮತ್ತೆ ಅಟ್ಟಹಾಸಗೈದಿದ್ದಾರೆ. ಸಿರಿಯದ ದಕ್ಷಿಣ ಪ್ರಾಂತವಾದ ದಾರಾದಲ್ಲಿ ಶನಿವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ಆರು ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. ದಾರಾ ಪ್ರಾಂತವು 2011ರಲ್ಲಿ ಸಿರಿಯ ಸರಕಾರದ ವಿರುದ್ಧ ಭುಗಿಲೆದ್ದ ಬಂಡಾಯದ ಕೇಂದ್ರ ಬಿಂದುವಾಗಿತ್ತು.
ಮೋಟಾರ್‌ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ಆತ್ಮಹತ್ಯಾ ಬಾಂಬರ್ ಸೇನಾತಪಾಸಣಾ ಠಾಣೆಯ ಬಳಿಕ ಮೆಶಿನ್‌ಗನ್‌ನಿಂದ ಗುಂಡಿನ ದಾಳಿ ನಡೆಸಿದ ಹಾಗೂ ಆನಂತರ ತನ್ನನ್ನು ಸ್ಫೋಟಿಸಿಕೊಂಡನೆಂದು ಸಿರಿಯದ ಮಾನವಹಕ್ಕುಗಳ ವೀಕ್ಷಣಾಲಯ ಸಂಸ್ಥೆ ವರದಿ ಮಾಡಿದೆ.
ಈ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ. ತನ್ನ ಹೋರಾಟಗಾರರಲ್ಲೊಬ್ಬ ಮೆಶಿನ್‌ಗನ್‌ಗಳಿಂದ ಸಿರಿಯದ ಸೈನಿಕರ ಮೇಲೆ ಗುಂಡಿನ ಸುರಿಮಳೆಗೈದ ಬಳಿಕ, ಸೊಂಟಕ್ಕೆ ಕಟ್ಟಿದ್ದ ಸ್ಫೋಟಕದ ಬೆಲ್ಟ್ ಅನ್ನು ಸ್ಫೋಟಿಸಿದನೆಂದು ಅದು ಹೇಳಿದೆ.
ಕಳೆದ ಸೋಮವಾರ ಸಿರಿಯದ ರಾಜಧಾನಿ ಡಮಾಸ್ಕಸ್‌ನಲ್ಲಿ ನಡೆದ ಭೀಕರ ಕಾರ್ ಬಾಂಬ್ ದಾಳಿಯ ಹೊಣೆಯನ್ನು ಕೂಡಾ ಐಸಿಸ್ ವಹಿಸಿಕೊಂಡಿತ್ತು.