ಸಂಜೋತಾ ಸ್ಫೋಟ ಪ್ರಕರಣ: ಸುಳ್ಳಿನ ಸರಮಾಲೆ ಹೆಣೆದ ಅಮಿತ್ ಶಾ?

Update: 2019-07-29 05:21 GMT

 ಮಾಲೆಗಾಂವ್ ಸೇರಿದಂತೆ ಬಾಂಬ್ ಸ್ಫೋಟಗಳ ಹಿಂದಿರುವ ಸೂತ್ರಧಾರಿಗಳೆನ್ನಲಾದ ಕೇಸರಿ ಕಾರ್ಯಕರ್ತರಾದ ರಾಮಚಂದ್ರ ಕಾಲ್‌ಸಂಗ್ರಾ, ಸಂದೀಪ್ ಡಾಂಗೆ ಹಾಗೂ ರಮೇಶ್ ಮಹಾಲ್ಕರ್ ಅವರ ಬಂಧನಕ್ಕೆ ಯಾವುದೇ ಗಂಭೀರವಾದ ಪ್ರಯತ್ನಗಳು ನಡೆಯಲಿಲ್ಲ. ಈ ತಲೆಮರೆಸಿಕೊಂಡ ಪಾತಕಿಗಳನ್ನು ಪತ್ತೆಹಚ್ಚಿಸಲು ತನ್ನ ಸರಕಾರ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಅಮಿತ್‌ಶಾ ಅವರು ಸಂಸತ್‌ನಲ್ಲಿ ಹೇಳಿಕೆಯನ್ನು ನೀಡಬೇಕಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ಆಡಳಿತಕ್ಕೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ಕುರಿತಾಗಿ ರಾಜ್ಯಸಭೆಯಲ್ಲಿ ಕಳೆದ ವಾರ ನಡೆದ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ಹಿಂದುತ್ವವಾದಿ ಕಾರ್ಯಕರ್ತರನ್ನು ಕಾನೂನಿನ ಕುಣಿಕೆಯಿಂದ ಪಾರು ಮಾಡಲು ಬಿಜೆಪಿಯು ಎನ್‌ಐಎಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಟೀಕೆಯನ್ನು ನಿರಾಕರಿಸಲು ತನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದರು.
ಅವರು ಸದನದಲ್ಲಿ ಹೇಳಿದ ವಿಷಯಗಳು ವಿವಾದಾತ್ಮಕ ವಾದುದಾಗಿತ್ತು, ಮಾತ್ರವಲ್ಲದೆ ಅತ್ಯಂತ ಅಪಾಯ ಕಾರಿಯೂ ಆಗಿತ್ತು. ಸಂಜೋತಾ, ಅಜ್ಮೀರ್ ಹಾಗೂ ಹೈದರಾಬಾದ್ ಸ್ಫೋಟ ಪ್ರಕರಣಗಳ ಆರೋಪಿಗಳ ದೋಷ ಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಗೋಜಿಗೆ ಎನ್‌ಐಎ ಯಾಕೆ ಹೋಗಲಿಲ್ಲ ಎಂಬ ಬಗ್ಗೆ ಅವರು ನೀಡಿದ ವಿವರಣೆಯಲ್ಲಿ ವಿಶ್ವಸನೀಯತೆ ಹಾಗೂ ಬದ್ಧತೆಯ ಕೊರತೆ ಎದ್ದುಕಾಣುತ್ತಿತ್ತು.
 ಇವೆಲ್ಲವುಗಳಿಗಿಂತಲೂ ಕೆಟ್ಟದೆಂದರೆ ಯಾವನೇ ಒಬ್ಬ ಹಿಂದೂ ವಿರುದ್ಧ ಭಯೋತ್ಪಾದನೆಯ ಆರೋಪವನ್ನು ಹೊರಿಸುವುದು, ಇಡೀ ಹಿಂದೂಗಳನ್ನೇ ಭಯೋತ್ಪಾದಕರೆಂಬಂತೆ ನಿಂದಿಸುವುದಕ್ಕೆ ಹಾಗೂ ಹಿಂದೂ ಧರ್ಮವನ್ನು ಅಪಮಾನಿಸುವುದಕ್ಕೆ ಸಮಾನವಾದುದಾಗಿದೆ ಎಂಬ ಅತಾರ್ಕಿಕ ಹೇಳಿಕೆಯನ್ನು ನೀಡಿದ್ದಾರೆ.
2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಎನ್‌ಐಎಯು ಆರೆಸ್ಸೆಸ್ ಸೇರಿದಂತೆ ಕೇಸರಿ ಸಂಘಟನೆಗಳೊಂದಿಗೆ ನಂಟು ಹೊಂದಿರುವಂತಹ ವ್ಯಕ್ತಿಗಳು ಮುಖ್ಯ ಆರೋಪಿಗಳಾಗಿರುವ ಹಲವಾರು ಭಯೋತ್ಪದನಾ ಪ್ರಕರಣಗಳ ತನಿಖೆ ನಡೆಸುತ್ತಿತ್ತು.
ಮೂವರು ಮೃತಪಟ್ಟು, ಡಜನ್‌ಗಟ್ಟಲೆ ಮಂದಿ ಗಾಯಗೊಂಡ 2007ರ ಅಜ್ಮೀರ್ ಶರೀಫ್ ಬಾಂಬ್ ಸ್ಫೋಟ ಪ್ರಕರಣ, 14 ಮಂದಿ ಬಲಿಯಾದ ಹೈದರಾಬಾದ್‌ನ ಮಕ್ಕಾ ಮಸೀದಿ ಬಾಂಬ್ ಸ್ಫೋಟ ಹಾಗೂ 2008ರಲ್ಲಿ ಬಹುತೇಕ ಪಾಕಿಸ್ತಾನಿಯರು ಸೇರಿದಂತೆ 68 ಮಂದಿಯನ್ನು ಬಲಿತೆಗೆದುಕೊಂಡ ದಿಲ್ಲಿ-ಲಾಹೋರ್ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಸ್ಫೋಟ ಪ್ರಕರಣಗಳು ಇದರಲ್ಲಿ ಒಳಗೊಂಡಿದ್ದವು.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಪರವಾಗಿ ವಾದಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಅವರು, ಆರೋಪಿಗಳಾದ ಹಿಂದೂ ತೀವ್ರವಾದಿಗಳ ವಿರುದ್ಧ ಮೃದುಧೋರಣೆ ತಳೆಯುವಂತೆ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದರು. ಪ್ರಾಸಂಗಿಕವಾಗಿ ಎಂಬಂತೆ, ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ಈಗ, ನಾಥೂರಾಮ್ ಗೋಡ್ಸೆಯ ಆರಾಧಕಿಯಾಗಿಬಿಟ್ಟಿದ್ದಾರೆ. ಹೀಗಿದ್ದರೂ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಆಕೆಯನ್ನು ಭೋಪಾಲ್ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದರು.
ರೋಹಿಣಿ ಸಾಲ್ಯಾನ್ ಅವರ ಆರೋಪವನ್ನು ಎನ್‌ಐಎ ನಿರಾಕರಿಸಿತ್ತು. ಇದಾದ ಒಂದು ವರ್ಷದ ಆನಂತರ ಪ್ರಜ್ಞಾಸಿಂಗ್ ಹಾಗೂ ಇತರ ಐವರ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಬೇಕೆಂದು ಎನ್‌ಐಎ ನ್ಯಾಯಾಲಯವನ್ನು ಕೋರಿದಾಗ ರೋಹಿಣಿ ಮಾಡಿದ ಆರೋಪ ದೃಢಪಟ್ಟಿತ್ತು. ಅದೃಷ್ಟವಶಾತ್ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಹಾಗೂ ಇತರ ಆರೋಪಿಗಳ ವಿರುದ್ಧ ಪುರಾವೆಗಳಿಲ್ಲ ಎಂಬ ಎನ್‌ಐಎ ವಾದವನ್ನು ನ್ಯಾಯಾಲಯ ಒಪ್ಪಿಕೊಳ್ಳಲಿಲ್ಲ ಹಾಗೂ ಪ್ರಕರಣದ ತನಿಖೆ ಮುಂದುವರಿಯುವಂತೆ ಅದು ಆದೇಶಿಸಿತ್ತು.
 ಇತರ ಪ್ರಕರಣಗಳಲ್ಲಿಯೂ, ಪ್ರಾಸಿಕ್ಯೂಶನ್ ವಾದವನ್ನು ದುರ್ಬಲಗೊಳಿಸಲು ಎನ್‌ಐಎ ತನ್ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ನಡೆಸಿತ್ತು. ಇದರಿಂದಾಗಿ ಹೈದರಾಬಾದ್ ಹಾಗೂ ಸಂಜೋತಾ ಸ್ಫೋಟ ಪ್ರಕರಣಗಳಲ್ಲಿ ಆರೋಪಿಗಳ ದೋಷ ಮುಕ್ತಿಯಾಯಿತು.ಆದರೆ ಅಜ್ಮೀರ್ ಶರೀಫ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾತ್ರ ಆರೆಸ್ಸೆಸ್ ಕಾರ್ಯಕರ್ತರಾದ ದೇವೇಂದ್ರ ಗುಪ್ತಾ ಹಾಗೂ ಭವೇಶ್ ಪಟೇಲ್ ಅವರಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಯಿತು. ಇನ್ನೋರ್ವ ಆರೋಪಿ, ಆರೆಸ್ಸೆಸ್ ನಾಯಕ ಸುನೀಲ್ ಜೋಶಿಗೆ ಮರಣೋತ್ತರವಾಗಿ ಅಪರಾಧಿಯೆಂದು ಘೋಷಿಸಲಾಯಿತು. ಪ್ರಕರಣದ ಹಲವು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿರುವುದನ್ನು ಆಜ್ಮೀರ್‌ನ ಎನ್‌ಐಎ ನ್ಯಾಯಾಲಯ ಗಮನಸೆಳೆದಿತ್ತು. ಇವರಲ್ಲಿ ಒಬ್ಬನಾದ ಸುರೇಶ್ ನಾಯರ್ ಪತ್ತೆಯಾಗಿದ್ದು, ಈಗ ಜೈಲು ಸೇರಿದ್ದಾನೆ.
ಎನ್‌ಐಎ ಮೂಲತಃ ಆರಂಭಿಸಿದ್ಧ ತನಿಖೆಯು ಸ್ವಾಮಿ ಅಸೀಮಾನಂದ ಹಾಗೂ ಪ್ರಜ್ಞಾಸಿಂಗ್ ಠಾಕೂರ್ ಸೇರಿದಂತೆ ವ್ಯಕ್ತಿಗಳ ಗುಂಪೊಂದು ಹಲವಾರು ಬಾಂಬ್ ಪ್ರಕರಣಗಳಲ್ಲಿ ಶಾಮೀಲಾಗಿರುವುದನ್ನು ಅನಾವರಣಗೊಳಿಸಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಮೂವರು ಆರೋಪಿಗಳಾದ ರಾಮಚಂದ್ರ ಕಾಲ್‌ಸಂಗ್ರಾ, ಸಂದೀಪ್ ಡಾಂಗೆ ಹಾಗೂ ರಮೇಶ್ ಮಹಾಲ್ಕರ್ ಅವರ ಪಾತ್ರವಿರುವುದು ಕೂಡಾ ಬೆಳಕಿಗೆ ಬಂದಿತ್ತು. ಆದರೆ ಈ ಮೂರು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಅತ್ಯಂತ ಹೇಯವೆನಿಸಿರುವ, 12 ವರ್ಷಗಳ ಹಿಂದೆ ಸಂಭವಿಸಿದ್ದ ಸಂಜೋತಾ ಸ್ಫೋಟ ಪ್ರಕರಣದಲ್ಲಿ ಇದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ.
ಆದಾಗ್ಯೂ, ಎನ್‌ಐಎನ ನಿರ್ಲಕ್ಷದಿಂದ ಕೂಡಿದ ತನಿಖೆ ಹಾಗೂ ಪ್ರಾಸಿಕ್ಯೂಶನ್ ಹಾಗೂ ಪ್ರಮುಖ ತಲೆಮರೆಸಿಕೊಂಡ ಆರೋಪಿಗಳಾದ ಕಾಲ್‌ಸಂಗ್ರಾ ಹಾಗೂ ಢಾಂಗೆ ಎಲ್ಲಿದ್ದಾರೆಂಬ ಕುರಿತಾದ ಪ್ರಮುಖ ಸುಳಿವುಗಳ ಬೆಂಬತ್ತಲು ನಿರಾಕರಿಸಿದ ಪರಿಣಾಮವಾಗಿ ಈ ವರ್ಷ ಆರೋಪಿಗಳ ದೋಷಮುಕ್ತಿಯೊಂದಿಗೆ ಸಂಜೋತಾ ಸ್ಫೋಟ ಪ್ರಕರಣ ಕೊನೆಗೊಂಡಿತು.

ತರುವಾಯ, ಸರಕಾರವು ಹಿಂದಿನ ಅಜ್ಮೀರ್ ಹಾಗೂ ಹೈದರಾಬಾದ್ ಸ್ಫೋಟ ಪ್ರಕರಣಗಳಲ್ಲಿ ಆಡಿದಂತೆ, ಆರೋಪಿಗಳ ದೋಷಮುಕ್ತಿಯ ವಿರುದ್ಧ ಮೇಲ್ಮನವಿ ಸಲ್ಲಿಸುವ ಗೋಜಿಗೇ ಹೋಗಲಿಲ್ಲ. ಸಂಜೋತಾ ಪ್ರಕರಣದ ಕುರಿತು ಅಮಿತ್ ಶಾ ಅವರು ಹೇಳಿದ ಮೂರು ನಿರ್ದಿಷ್ಟ ಅಂಶಗಳ ಬಗ್ಗೆ ಪ್ರತಿಪಕ್ಷ ಸಂಸದರು ವಿವರಣೆಯನ್ನು ಬಯಸಿದ್ದರು. ಶಾ ನೀಡಿದ ಮೂರು ನಿರ್ದಿಷ್ಟ ಅಂಶಗಳು ಇವಾಗಿದ್ದವು. ಮೊದಲನೆಯದಾಗಿ ಈ ಪ್ರಕರಣದಲ್ಲಿ ಪೊಲೀಸರು ಆರಂಭದಲ್ಲಿ ಏಳು ಮಂದಿ ನಿಜವಾದ ಅಪರಾಧಿಗಳನ್ನು ಬಂಧಿಸಿದ್ದರು. ಆದರೆ ಆನಂತರ ಅವರನ್ನು ಬಿಟ್ಟುಬಿಟ್ಟಿದ್ದರು. ಎರಡನೆಯದಾಗಿ ಯಾಕೆ ಹೀಗೆ ಮಾಡಲಾಗಿತ್ತೆಂದರೆ, ಅಂದು ನಿರ್ದಿಷ್ಟ ಧರ್ಮವನ್ನು ಅಂದರೆ ಹಿಂದೂಧರ್ಮಕ್ಕೆ ಭಯೋತ್ಪಾದನೆಯ ಜೊತೆ ನಂಟು ಕಲ್ಪಿಸುವ ರಾಜಕೀಯ ಷಡ್ಯಂತ್ರ ನಡೆಸಲಾಗಿತ್ತು ಮತ್ತು ಮೂರನೆಯದಾಗಿ ವಿಚಾರಣೆಗೊಳಗಾದ ವ್ಯಕ್ತಿಗಳ ವಿರುದ್ಧ ಯಾವುದೇ ಪುರಾವೆ ಗಳಿಲ್ಲದಿರುವುದರಿಂದ ಅವರಿಗೆ ಶಿಕ್ಷೆ ನೀಡುವುದು ಸಾಧ್ಯವಿಲ್ಲ.
ಅಮಿತ್ ಶಾ ಅವರ ಈ ದಾವೆಗಳನ್ನು ಒಂದೊಂದಾಗಿ ವಿಮರ್ಶಿಸೋಣ.
ಸಂಜೋತಾ ಸ್ಫೋಟ ಪ್ರಕರಣದಲ್ಲಿ ನಿಜವಾದ ಅಪರಾಧಿ ಗಳೆನ್ನಲಾದ ಏಳು ಮಂದಿಯನ್ನು ಬಂಧಿಸಿ ಆನಂತರ ಅವರನ್ನು ಬಿಡುಗಡೆಗೊಳಿಸಲಾಯಿತೆಂಬ ವಿಷಯವು ಸಾಮಾಜಿಕ ಜಾಲತಾಣದಲ್ಲಿ ಹುಡುಕಿದರೂ ಸಿಗುವುದಿಲ್ಲ. ಹೌದು. ಪಂಜಾಬ್ ಪೊಲೀಸರು ಸಂಜೋತಾ ಸ್ಫೋಟದ ಒಂದೆರಡು ವಾರಗಳ ಬಳಿಕ ಪಾಕ್ ಪ್ರಜೆಯೊಬ್ಬನನ್ನು ಬಂಧಿಸಿದ್ದರು. ಆದರೆ ಆತ ಶಾಮೀಲಾಗಿಲ್ಲವೆಂದು ಮನವರಿಕೆಯಾದಾಗ ಆತನನ್ನು ಬಿಟ್ಟುಬಿಟ್ಟಿದ್ದರು. ಹಿರಿಯ ಐಪಿಎಸ್ ಅಧಿಕಾರಿಯಾದ ಭಾರ್ತಿ ಆರೋರಾ ಅವರು, ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನವೊಂದಲ್ಲಿ, ‘‘ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಪಾಕ್ ಪ್ರಜೆ ಅಝ್ಮತ್ ಅಲಿಯನ್ನು ಸಮರ್ಪಕವಾಗಿ ವಿಚಾರಣೆಗೊಳಪಡಿಸಲಾಗಿತ್ತು ಹಾಗೂ ವಿಚಾರಣೆಯ ಬಳಿಕ ಆತನ ವಿರುದ್ಧ ಯಾವುದೇ ಪುರಾವೆಗಳೂ ದೊರೆಯದ ಕಾರಣ ಆತನನ್ನು ಬಿಡುಗಡೆಗೊಳಿಸಲಾಗಿತ್ತು’’ ಎಂದವರು ತಿಳಿಸಿದರು.
 ಒಂದು ವೇಳೆ ಶಾ ಅವರು ಹೇಳಿರುವುದು ಸರಿಯೇ ಆಗಿದ್ದರು ಕೂಡಾ, ‘ನೈಜ ಅಪರಾಧಿಗಳನ್ನು ಬಂಧಿಸಿ, ಆನಂತರ ಅವರನ್ನು ಪ್ರಮಾದವಶಾತ್ ಬಿಟ್ಟುಬಿಡಲಾಯಿತೆಂಬ ಬಗ್ಗೆ ಭಾರತದ ಮುಂಚೂಣಿಯ ಭಯೋತ್ಪಾದನಾ ನಿಗ್ರಹ ಏಜೆನ್ಸಿಯಾದ ಎನ್‌ಐಎ ಯಾಕೆ ಈತನಕ ಮಾತನಾಡಿಲ್ಲವೆಂಬ ಬಗ್ಗೆ ಅವರು ನಮಗೆ ವಿವರಣೆ ನೀಡಬೇಕಾದ ಅಗತ್ಯವಿದೆ. ಯಾಕೆ ಎನ್‌ಐಎ, ಪಾತಕಿಗಳ ಗುರುತುಗಳನ್ನು ಬಹಿರಂಗಪಡಿಸಲಿಲ್ಲ ಹಾಗೂ ಅವರ ಬಂಧನವನ್ನು ಯಾಕೆ ಕೋರಲಿಲ್ಲ?. ಒಂದು ವೇಳೆ ಎನ್‌ಐಎ ತಾನು ಬಂಧಿಸಿ, ಕಾನೂನುಕ್ರಮ ಜರುಗಿಸಿದ ವ್ಯಕ್ತಿಗಳು ನಿಜಕ್ಕೂ ನಿರಪರಾಧಿಗಳಾಗಿದ್ದು, ಅವರ ವಿರುದ್ಧ ಮನವಿ ಮಾಡದಿರಲು ಎನ್‌ಐಎ ಸ್ವತಂತ್ರವಾಗಿ ನಿರ್ಧರಿಸಿತ್ತಾರೆಂದು ಇಟ್ಟುಕೊಳ್ಳೋಣ. ಹಾಗಿದ್ದರೆ, ಅದು ನಿಜವಾದ ಅಪರಾಧಿಗಳನ್ನು ಗುರುತಿಸಲು ಹಾಗೂ ಅವರನ್ನು ಬಂಧಿಸಲು ಯಾಕೆ ಪ್ರಯತ್ನಿಸುತ್ತಿಲ್ಲ?. ನೂತನ ಕೇಂದ್ರ ಸರಕಾರಕ್ಕೆ ಅದು ಆದ್ಯತೆಯ ವಿಷಯವಾಗಬಾರದೇಕೇ?. ಎರಡನೆಯದಾಗಿ ಭಯೋತ್ಪಾದನೆಯ ಜೊತೆ ನಂಟು ಕಲ್ಪಿಸುವ ಮೂಲಕ ಹಿಂದೂಧರ್ಮವನ್ನು ಕಳಂಕಗೊಳಿಸುವ ಹುನ್ನಾರವನ್ನು ಹಿಂದಿನ ಯುಪಿಎ ಸರಕಾರ ನಡೆಸಿತ್ತೆಂದು ಶಾ ಅವರ ಆರೋಪಕ್ಕೆ ಏನೆಂದು ಹೇಳಬೇಕು?. ಈಗ ಶಾ ಒಬ್ಬ ಚಾಣಾಕ್ಷ ವ್ಯಕ್ತಿ. ವಿಜಯ ಮಲ್ಯ ಅಥವಾ ನೀರವ್ ಮೋದಿ ಅವರು ಬ್ಯಾಂಕ್‌ಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿರುವುದರಿಂದ ಹಿಂದೂಧರ್ಮಕ್ಕೆ ಕಳಂಕವುಂಟಾಗಿದೆ ಎಂದು ಯಾರಾದರೂ ಹೇಳಲು ಸಾಧ್ಯವೇ?. ದೇವೇಂದ್ರ ಗುಪ್ತಾ ಹಾಗೂ ಭವೇಶ್ ಪಟೇಲ್ ಅವರು ಭಯೋತ್ಪಾದನೆಯ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದರಿಂದ ಹಿಂದೂ ಧರ್ಮದ ವರ್ಚಸ್ಸಿಗೆ ಕುಂದುಂಟಾಗಿದೆಯೇ?. ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಬಾಬರಿ ಮಸೀದಿಯ ಧ್ವಂಸದಲ್ಲಿ ಭಾಗಿಯಾಗಿದ್ದರಿಂದ ಹಿಂದೂಧರ್ಮಕ್ಕೆ ಕಳಂಕವುಂಟಾಗಿದೆಯೇ?. ಭಯೋತ್ಪಾದನೆಯ ಶಂಕೆಯಲ್ಲಿ ಹಿಂದೂವೊಬ್ಬ ಬಂಧಿಸಲ್ಪಟ್ಟಾಗ ಹಾಗೂ ಕಾನೂನುಕ್ರಮವನ್ನು ಎದುರಿಸಿದಾಗ ಭಾರತದ ಗೃಹ ಸಚಿವರೊಬ್ಬರು ಇಂತಹ ಅಸಂಬದ್ಧ ಹೇಳಿಕೆ ನೀಡುವುದು ಭಯೋತ್ಪಾದನೆಯನ್ನು ಧರ್ಮದ ಇನ್ನೊಂದು ವಿಶೇಷತೆಯೆಂಬಂತೆ ಬಿಂಬಿಸುವ ಅವರ ಮನಸ್ಥಿತಿಯನ್ನು ತೋರಿಸುತ್ತದೆ.
ಯಾವುದೇ ರೀತಿಯಲ್ಲೂ, ಸಂಜೋತಾ ಪ್ರಕರಣವು ಹೇಗೆ ರೂಪುಗೊಂಡಿತೆಂಬ ಕುರಿತು ಯಾವುದೇ ನಿಗೂಢತೆ ಕಾಣುತ್ತಿಲ್ಲ. ಸಂಜೋತಾ ಸ್ಫೋಟ ಪ್ರಕರಣದ ತನಿಖೆಯನ್ನು ಮೊದಲ ಬಾರಿಗೆ ನಡೆಸಿದ ಹರ್ಯಾಣದ ವಿಶೇಷ ತನಿಖಾ ತಂಡದ ವರಿಷ್ಠ ವಿಕಾಸ್ ನಾರಾಯಣ್ ರಾಯ್ 2016ರಲ್ಲಿ ದಿ ವೈರ್ ಆನ್‌ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ,, ಪ್ರಕರಣಕ್ಕೆ ಹಿಂದುತ್ವದ ಕೋನವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದರೂ ಆ ಬಗ್ಗೆ ಮಾತನಾಡಲು ತಾನು ಹಾಗೂ ತಂಡವು ಒಪ್ಪುತ್ತಿರಲಿಲ್ಲವೆಂಬುದಾಗಿ ಬಹಿರಂಗಪಡಿಸಿದ್ದರು.

ಕಾನೂನು ಕ್ರಮಕ್ಕೊಳಗಾದ ವ್ಯಕ್ತಿಗಳ ವಿರುದ್ಧ ಯಾವುದೇ ಪುರಾವೆಗಳಿಲ್ಲವೆಂಬುದು ಅಮಿತ್ ಶಾ ಅವರ ಮೂರನೇ ವಾದವಾಗಿದೆ. ಚೆನ್ನಾಗಿದೆ.ಪ್ರಕರಣವನ್ನು ದುರ್ಬಲವಾಗಿ ನ್ಯಾಯಾಲಯದಲ್ಲಿ ಮಂಡಿಸಿದ್ದಕ್ಕಾಗಿ ಎನ್‌ಐಎಯನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದರು. ಮಾಲೆಗಾಂವ್ ಸ್ಫೋಟ ಪ್ರಕರಣದ ಕುರಿತ ತನ್ನ ಧೋರಣೆಯನ್ನು ರೋಹಿಣಿ ಸಾಲ್ಯಾನ್ ಬಹಿರಂಗಪಡಿಸಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಎನ್‌ಐಎ ಸಂಜೋತಾ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ನಿರ್ಣಾಯಕ ಪುರಾವೆಗಳನ್ನು ತಡೆಹಿಡಿಯುವ ಮೂಲಕ ಕಾನೂನುಕ್ರಮದ ಪ್ರಕ್ರಿಯೆಗೆ ಹಾನಿಯುಂಟು ಮಾಡಿದೆ.ಅಥವಾ ಪ್ರಾಯಶಃ ಅಸೀಮಾನಂದ ಅವರ ತಪ್ಪೊಪ್ಪಿಗೆಯನ್ನು ಸ್ವೀಕರಿಸಲು ಯೋಗ್ಯವಲ್ಲವೆಂದು ನ್ಯಾಯಾಧೀಶರು ತಿರಸ್ಕರಿಸಿದ ಬಳಿಕ ಪ್ರಕರಣಕ್ಕೆ ಬಲ ತುಂಬುವಂತಹ ದೃಢವಾದ ಸಾಕ್ಷವನ್ನು ಸಂಗ್ರಹಿಸಲು ಅದಕ್ಕೆ ಸಾಧ್ಯವಾಗದೆ ಹೋಗಿರಬೇಕು. ಮಾಲೆಗಾಂವ್ ಸೇರಿದಂತೆ ಬಾಂಬ್ ಸ್ಫೋಟಗಳ ಹಿಂದಿರುವ ಸೂತ್ರಧಾರಿಗಳೆನ್ನಲಾದ ಕೇಸರಿ ಕಾರ್ಯಕರ್ತರಾದ ರಾಮಚಂದ್ರ ಕಾಲ್‌ಸಂಗ್ರಾ, ಸಂದೀಪ್ ಡಾಂಗೆ ಹಾಗೂ ರಮೇಶ್ ಮಹಾಲ್ಕರ್ ಅವರ ಬಂಧನಕ್ಕೆ ಯಾವುದೇ ಗಂಭೀರವಾದ ಪ್ರಯತ್ನಗಳು ನಡೆಯಲಿಲ್ಲ. ಈ ತಲೆಮರೆಸಿಕೊಂಡ ಪಾತಕಿಗಳನ್ನು ಪತ್ತೆಹಚ್ಚಿಸಲು ತನ್ನ ಸರಕಾರ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಅಮಿತ್‌ಶಾ ಅವರು ಸಂಸತ್‌ನಲ್ಲಿ ಹೇಳಿಕೆಯೊಂದನ್ನು ನೀಡಬೇಕಾಗಿದೆ.
ಕೃಪೆ: thewire.in

Writer - ಸಿದ್ಧಾರ್ಥ್ ವರದರಾಜನ್

contributor

Editor - ಸಿದ್ಧಾರ್ಥ್ ವರದರಾಜನ್

contributor

Similar News

ಜಗದಗಲ
ಜಗ ದಗಲ