ಕೇರಳದ ಪೊಲೀಸ್ ಪೇದೆ ಸಾವು ಪ್ರಕರಣ: ಸಶಸ್ತ್ರ ಮೀಸಲು ಕ್ಯಾಂಪ್‌ನಲ್ಲಿ ಜಾತಿ ತಾರತಮ್ಯ: ಪತ್ನಿ ಆರೋಪ

Update: 2019-07-28 18:53 GMT

ತಿರುವನಂತಪುರ, ಜು. 28: ಪೊಲೀಸ್ ಪೇದೆ ಕುಮಾರ್ ಸಾವು ಇನ್ನು ಕೂಡ ನಿಗೂಢವಾಗಿಯೇ ಉಳಿದಿದೆ. ಆದರೆ, ಈ ನಡುವೆ ಕುಮಾರ್ ಅವರ ಪತ್ನಿ, ತನ್ನ ಪತಿ ಸಶಸ್ತ್ರ ಮೀಸಲು ಕ್ಯಾಂಪ್‌ನಲ್ಲಿ ಜಾತಿ ತಾರತಮ್ಯ ಎದುರಿಸಿದ್ದರು ಎಂದು ಆರೋಪಿಸಿದ್ದಾರೆ. ಅಟ್ಟೆಪ್ಪಾಡಿ ನಿವಾಸಿ ಕುಮಾರ್ ಅವರು ಪಾಲಕ್ಕಾಡ್ ಜಿಲ್ಲೆಯ ಕಾಲೆಕ್ಕಾಡು ಶಶಸ್ತ್ರ ಮೀಸಲು ಕ್ಯಾಂಪ್‌ನಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಅವರ ಮೃತದಹೇಹ ರೈಲು ಢಿಕ್ಕಿಯಾದ ಸ್ಥಿತಿಯಲ್ಲಿ ಲಕ್ಕಿಡಿ ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಕುಮಾರ್ ಅವರದ್ದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ.

ಈ ನಡುವೆ ಅವರ ಪತ್ನಿ ಸಜಿನಿ ಹಾಗೂ ಸಹೋದರ ರಾಘವನ್ ಅವರು ಕುಮಾರ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಈ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಕಾರಣಕ್ಕೆ ಹಿರಿಯ ಅಧಿಕಾರಿಗಳು ಕಮಾರ್ ಅವರಲ್ಲಿ ಹೆಚ್ಚು ಕೆಲಸ ಮಾಡಿಸುತ್ತಿದ್ದರು ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಕುಮಾರ್ ಅವರ ಪತ್ನಿ ಸಜಿನಿ ಹಾಗೂ ಸಹೋದರ ರಂಗನ್ ಆರೋಪಿಸಿದ್ದಾರೆ. ಜಾತಿಯ ಕಾರಣಕ್ಕೆ ಸಹೋದ್ಯೋಗಿಗಳು ಅವರನ್ನು ನಿಂದಿಸುತ್ತಿದ್ದರು ಹಾಗೂ ‘ಮೂರ್ಖ’ ಎಂದು ಕರೆಯುತ್ತಿದ್ದರು. ಇದರಿಂದ ಹತಾಶರಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಅವರ ಕುಟುಂಬ ಹೇಳಿದೆ. ಕರ್ತವ್ಯಕ್ಕೆ ಸಂಬಂಧಿಸಿದ ಒತ್ತಡ ಹೊರತುಪಡಿಸಿ ಕುಮಾರ್ ಅವರಿಗೆ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ. ಈ ಅಸಹಜ ಸಾವು ಯೋಜಿತ ಕೊಲೆಯಾಗಿರುವ ಸಾಧ್ಯತೆ ಕೂಡ ಇಲ್ಲದಿಲ್ಲ ಎಂದು ಕುಮಾರ್ ಅವರ ಕುಟುಂಬ ಹೇಳಿದೆ.

ಸಾವಿನ ಮೊದಲು ಅವರನ್ನು ನಗ್ನಗೊಳಿಸಲಾಗಿದೆ ಹಾಗೂ ಹಿಂಸಿಸಲಾಗಿದೆ. ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡ ಬಳಿಕ ಅವರು ಕುಟುಂಬವನ್ನು ಸಂಪರ್ಕಿಸಿಲ್ಲ ಎಂದು ಸಜಿನಿ ತಿಳಿಸಿದ್ದಾರೆ. ಕುಮಾರ್ ಅವರು ಕೆಲಸದಿಂದ ದೂರ ಉಳಿದ ನಂತರ ಎದುರಿಸಿದ ಕಿರುಕುಳವನ್ನು ಬಹಿರಂಗಪಡಿಸಿದ್ದರು. ಅವರು ಜಿಲ್ಲಾ ಪೊಲೀಸ್ ವರಿಷ್ಠರನ್ನು ಭೇಟಿಯಾಗಿದ್ದರು. ಕರ್ತವ್ಯಕ್ಕೆ ಮರು ಹಾಜರಾದ ಸಂದರ್ಭ ಕಿರುಕುಳ ನೀಡಿದ ಪೊಲೀಸರ ಹೆಸರನ್ನು ಬಹಿರಂಗಪಡಿಸಿದ್ದರು ಎಂದು ರಂಜನ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧೀಕ್ಷಕ ಜಿ. ಶಿವವಿಕ್ರಮ್ ಅವರು, ಕುಮಾರ್ ಪೊಲೀಸ್ ಕ್ವಾರ್ಟರ್ಸ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ, ಜಾತಿ ತಾರತಮ್ಯದ ಬಗ್ಗೆ ಏನನ್ನೂ ಹೇಳಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News