ಭಾರತವೆಂದರೆ ಕಾಶ್ಮೀರವಷ್ಟೇ ಅಲ್ಲ

Update: 2019-07-30 06:15 GMT

ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಪಾಕಿಸ್ತಾನ-ಭಾರತ ಎರಡೂ ದೇಶಗಳೂ ಎಡವಿವೆ ಎಂದು ಇತ್ತೀಚೆಗಷ್ಟೇ ವಿಶ್ವಸಂಸ್ಥೆ ಹೇಳಿಕೆ ನೀಡಿತ್ತು. ಕಳೆದ ಹತ್ತು ವರ್ಷಗಳಲ್ಲಿ ಕಾಶ್ಮೀರದಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದೂ ಅದು ಆತಂಕ ವ್ಯಕ್ತಪಡಿಸಿತ್ತು. ಎಂದಿನಂತೆಯೇ ಭಾರತ, ವಿಶ್ವಸಂಸ್ಥೆಯ ವರದಿಯನ್ನು ನಿರಾಕರಿಸಿದೆ. ಗಡಿಯಾಚೆಗಿನ ಭಯೋತ್ಪಾದನೆಯ ಕೇಂದ್ರವಾಗಿರುವ ಪಾಕಿಸ್ತಾನದೊಂದಿಗೆ ಭಾರತವನ್ನು ಸರಿಸಮವಾಗಿ ನೋಡಬಾರದು ಎಂದೂ ಅದು ವಿಶ್ವಸಂಸ್ಥೆಗೆ ಸಲಹೆ ನೀಡಿದೆ. ಇದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಭಾರತದ ಹೇಳಿಕೆಗೆ ವ್ಯತಿರಿಕ್ತವಾಗಿದೆ ಎನ್ನುವುದನ್ನೂ ಗಮನಿಸಬೇಕು. ಜಮ್ಮುಕಾಶ್ಮೀರದಲ್ಲಿ ಉಗ್ರವಾದಿಗಳು ಮತ್ತು ನಾಗರಿಕರ ನಡುವಿನ ಅಂತರವನ್ನು ಸ್ಪಷ್ಟ ಪಡಿಸಿಕೊಳ್ಳುವ ದಾರಿಯಲ್ಲಿ ಸರಕಾರ ಮತ್ತೆ ಮತ್ತೆ ವಿಫಲವಾಗುತ್ತಿದೆೆ ಎನ್ನುವ ಆರೋಪಗಳಿಗೆ ಪುಷ್ಟಿ ನೀಡುವಂತೆ, ಜನಸಾಮಾನ್ಯರ ವಿರೋಧಗಳ ನಡುವೆಯೂ ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಲು ಮುಂದಾಗಿದೆ. ಸರಕಾರ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಲ್ಲಿ ಎರಡು ಮಾತೇ ಇಲ್ಲ. ಇದೇ ಸಂದರ್ಭದಲ್ಲಿ ಅಲ್ಲಿನ ನಾಗರಿಕರಲ್ಲಿ ಯಾವ ಕಾರಣಕ್ಕೂ ಭಾರತ ವಿರೋಧಿ ಚಿಂತನೆಗಳು ಬೆಳೆಯುವಂತಾಗಬಾರದು. ಕಾಶ್ಮೀರಿಗಳನ್ನು ನಮ್ಮವರನ್ನಾಗಿಸಿಕೊಳ್ಳದೆ ಕಾಶ್ಮೀರವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕಾಶ್ಮೀರದ ಸೇನಾ ಕಾರ್ಯಾಚರಣೆ ಮುಂದುವರಿಯಬೇಕು. ಸೇನೆಯಾಗಲಿ, ಪೊಲೀಸರಾಗಲಿ ಅಲ್ಲಿನ ನಾಗರಿಕರನ್ನು ಶತ್ರುಗಳಾಗಿ ಭಾವಿಸಿದರೆ ಅದರ ಸಂಪೂರ್ಣ ಲಾಭವನ್ನು ಉಗ್ರರು ತನ್ನದಾಗಿಸಿಕೊಳ್ಳುತ್ತಾರೆ. ಸ್ಥಳೀಯ ನಾಗರಿಕರು ಸೇನೆಯ ವಿರುದ್ಧ ದಂಗೆಯೇಳಬೇಕು ಎನ್ನುವುದು ಉಗ್ರರ ಬಯಕೆಯೂ ಆಗಿದೆ. ನಾಗರಿಕರ ಮೇಲೆ ಸೇನೆ ದೌರ್ಜನ್ಯಗಳನ್ನು ಎಸಗಿದಷ್ಟು, ಕಾಶ್ಮೀರದ ಉಗ್ರವಾದಿಗಳಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ಸಿಗುತ್ತದೆ. ಮುಖ್ಯವಾಗಿ ಕಾಶ್ಮೀರದ ಜನರ ಮನದಲ್ಲಿ ಭರವಸೆಯನ್ನು ಬಿತ್ತುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಒಂದೆಡೆ ಅವರಲ್ಲಿ ಅಭದ್ರತೆ, ಅನುಮಾನಗಳನ್ನು ಬಿತ್ತುತ್ತಾ ಮಗದೊಂದೆಡೆ ಶಾಂತಿಮಂತ್ರವನ್ನು ಪಠಿಸಿದರೆ ಅದು ಪ್ರಯೋಜನವಾಗದು. ಈ ನಿಟ್ಟಿನಲ್ಲಿ ನಾಗರಿಕರೊಂದಿಗೆ ಸೇನೆ ಇನ್ನಷ್ಟು ಸಂಯಮದಿಂದ ವರ್ತಿಸಬೇಕು ಮಾತ್ರವಲ್ಲ, ಕಾಶ್ಮೀರದ ಕುರಿತಂತೆ ರಾಜಕೀಯ ಕಾರಣಗಳಿಗಾಗಿ ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡುವ ಪರಿಪಾಠವನ್ನು ಬಿಜೆಪಿ ನಾಯಕರು ಕೈ ಬಿಡಬೇಕು. ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ಕುರಿತಂತೆ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಅಲ್ಲಿನ ಜನರು ಭಾರತ ಸರಕಾರದ ಕುರಿತಂತೆ ಪದೇ ಪದೇ ಅನುಮಾನಿಸುವಂತೆ ಮಾಡಿದೆ.

ಬಿಜೆಪಿ ನಾಯಕರ ಇಂತಹ ಹೇಳಿಕೆಗಳನ್ನು ಅಲ್ಲಿನ ರಾಜಕೀಯ ಪಕ್ಷಗಳು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಿವೆ. ಜೊತೆಗೆ ಆರೆಸ್ಸೆಸ್ ಮತ್ತು ಸಂಘಪರಿವಾರ ಸಂಘಟನೆಗಳು ಕಾಶ್ಮೀರದ ಭಾವನೆಗಳ ಮೇಲೆ ನಡೆಸುತ್ತಿರುವ ದಾಳಿ, ಪಾಕಿಸ್ತಾನ ಮತ್ತು ಕಾಶ್ಮೀರದ ಉಗ್ರವಾದಿಗಳಿಗೆ ಪೂರಕವಾಗಿದೆ. ಇವೆಲ್ಲದರಿಂದಾಗಿ ಕಾಶ್ಮೀರ ಭಾರತದ ಪಾಲಿಗೆ ದಿನೇ ದಿನೇ ಬಹುದೊಡ್ಡ ಹೊರೆಯಾಗಿ ಮಾರ್ಪಡುತ್ತಿದೆ. ಇಂತಹ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ತಮ್ಮ ‘ಮನ್ ಕಿ ಬಾತ್’ನಲ್ಲಿ ಕಾಶ್ಮೀರದಲ್ಲಿ ‘ದ್ವೇಷ ಬಿತ್ತು’ವವರನ್ನು ಅಭಿವೃದ್ಧಿಯ ಮೂಲಕ ಸೋಲಿಸುತ್ತೇವೆ ಎಂಬಂತಹ ಮಾತುಗಳನ್ನು ಆಡಿದ್ದಾರೆ. ‘ಕಾಶ್ಮೀರದ ಜನರು ಅಭಿವೃದ್ಧಿಯ ಮುಖ್ಯ ವಾಹಿನಿಯನ್ನು ಸೇರಲು ಕಾತುರರಾಗಿದ್ದಾರೆ. ಅಲ್ಲಿನ ಜನರು ಅಭಿವೃದ್ಧಿ ವಿಷಯಗಳ ಚರ್ಚೆಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ. ‘ದ್ವೇಷ ಹರಡುವವರು ಯಾವತ್ತೂ ಯಶಸ್ವಿಯಾಗಲು ಸಾಧ್ಯವಿಲ್ಲ’ ಎನ್ನುವ ಎಚ್ಚರಿಕೆಯ ಮಾತುಗಳನ್ನು ಪಕ್ಕದ ಪಾಕಿಸ್ತಾನಕ್ಕೆ ಪರೋಕ್ಷವಾಗಿ ನೀಡಿದ್ದಾರೆ. ಕಾಶ್ಮೀರದ ಕುರಿತಂತೆ ಒಬ್ಬ ನಾಯಕ ಆಡಲೇ ಬೇಕಾದಂತಹ ಮಾತುಗಳು ಇವು. ಇಂದು ಕಾಶ್ಮೀರಕ್ಕೆ ಬೇಕಾಗಿರುವುದು ದ್ವೇಷವಲ್ಲ, ಅಭಿವೃದ್ಧಿ ಮತ್ತು ನೆಮ್ಮದಿ. ಇಂದು ಕಾಶ್ಮೀರದಲ್ಲಿ ದ್ವೇಷವನ್ನು ಬಿತ್ತುವವರು ಪಾಕಿಸ್ತಾನೀಯರಿರಲಿ, ನಮ್ಮದೇ ರಾಜಕೀಯ ನಾಯಕರಿರಲಿ ಅಥವಾ ಸೇನೆಯೇ ಆಗಿರಲಿ. ಅವುಗಳನ್ನು ನಾವು ಮಟ್ಟಹಾಕಲೇ ಬೇಕಾಗುತ್ತದೆ.

ಭಾರತದ ಕುರಿತಂತೆ ತಪ್ಪು ಕಲ್ಪನೆಗಳನ್ನು ಬಿತ್ತುವವರು ಹೊರಗಿನ ಶಕ್ತಿಗಳಾಗಲಿ, ಒಳಗಿನ ಶಕ್ತಿಗಳಾಗಲಿ ಅವರನ್ನು ವಿಫಲಗೊಳಿಸುವುದು ಅಗತ್ಯವಾಗಿದೆ. ಇವುಗಳ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಕಾಶ್ಮೀರಿಗಳನ್ನು ಇನ್ನಷ್ಟು ಹತ್ತಿರವಾಗಿಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಭಾರತವೆಂದರೆ ಕಾಶ್ಮೀರ ಮಾತ್ರವಲ್ಲ ಎನ್ನುವುದನ್ನೂ ಪ್ರಧಾನಿ ನರೇಂದ್ರ ಮೋದಿ ಸ್ಮರಣೆಯಲ್ಲಿಟ್ಟುಕೊಳ್ಳಬೇಕಾಗಿದೆ. ನರೇಂದ್ರ ಮೋದಿ ಆಡಿರುವ ಮಾತುಗಳು ಕೇವಲ ಕಾಶ್ಮೀರಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಅನ್ವಯವಾಗಬೇಕಾಗಿದೆ. ಯಾಕೆಂದರೆ ದ್ವೇಷದ ಉತ್ಪಾದನೆ ಬರೇ ಕಾಶ್ಮೀರದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಬೇರೆ ಬೇರೆ ರೂಪಗಳಲ್ಲಿ ಶುರುವಾಗಿದೆ ಮತ್ತು ಅದರ ನೇತೃತ್ವವನ್ನು ಅವರದ್ದೇ ಪಕ್ಷದ ನಾಯಕರು ವಹಿಸಿಕೊಂಡಿದ್ದಾರೆ ಎನ್ನುವುದು ಇನ್ನೊಂದು ವಿಪರ್ಯಾಸ. ಕಾಶ್ಮೀರದಲ್ಲಿ ಉತ್ಪಾದನೆಯಾಗುತ್ತಿರುವ ಹಿಂಸೆ, ದ್ವೇಷಗಳನ್ನು ಪಾಕಿಸ್ತಾನದ ತಲೆಗೆ ಕಟ್ಟುವ ಅವಕಾಶ ನಮಗಿದೆ. ಆದರೆ, ದೇಶದ ಇತರೆಡೆಗಳಲ್ಲಿ ಉದ್ಭವಿಸಿರುವ ದ್ವೇಷ, ಹಿಂಸೆಗಳನ್ನು ಯಾರ ತಲೆಗೆ ಕಟ್ಟಬೇಕು? ಪಾಕಿಸ್ತಾನ ಸೃಷ್ಟಿಸುತ್ತಿರುವ ಉಗ್ರವಾದಿ ನೆಲೆಗಳ ಕುರಿತಂತೆ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ದೇಶದೊಳಗೇ ಹರಡುತ್ತಿರುವ ಕೇಸರಿ ಉಗ್ರವಾದಿ ಸಂಘಟನೆಗಳ ಕುರಿತಂತೆ ಯಾರು ಮಾತನಾಡಬೇಕು? ಬಾಂಬ್ ಸ್ಫೋಟ ಆರೋಪದಲ್ಲಿ ಸಿಲುಕಿಕೊಂಡ ಶಂಕಿತ ಭಯೋತ್ಪಾದಕಿಗೆ ಬಿಜೆಪಿ ಟಿಕೆಟ್ ನೀಡಿ, ಆಕೆಯನ್ನು ಸಂಸತ್‌ನೊಳಗೆ ಪ್ರವೇಶಿಸುವಂತೆ ಮಾಡಿದೆ. ದೇಶದ ಗೃಹ ಸಚಿವ ಅಮಿತ್ ಶಾ, ಮಾಲೆಗಾಂವ್ ಸಹಿತ ವಿವಿಧ ಸ್ಫೋಟಗಳಲ್ಲಿ ಭಾಗವಹಿಸಿದ ಕೇಸರಿ ಉಗ್ರರನ್ನು ಬೆಂಬಲಿಸಿ ಮಾತನಾಡುತ್ತಾರೆ. ಪಾಕಿಸ್ತಾನದ ಉಗ್ರವಾದಿಗಳನ್ನು ಖಂಡಿಸುವ ಸಂದರ್ಭದಲ್ಲಿ ಭಾರತಕ್ಕೆ ಇದೊಂದು ಹಿನ್ನಡೆಯಲ್ಲವೇ? ವಿದೇಶಿ ಉಗ್ರರನ್ನು ಖಂಡಿಸುತ್ತಾ ಸ್ವದೇಶಿ ಉಗ್ರವಾದಕ್ಕೆ ಹಾಲೆರೆಯುವುದು ದೇಶದ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಪೂರಕವಾಗುತ್ತದೆ? ಕಾಶ್ಮೀರದಲ್ಲಿ ದ್ವೇಷವನ್ನು ಸೋಲಿಸುತ್ತೇವೆ ಎನ್ನುವ ಕೇಂದ್ರ ಸರಕಾರ, ಅಸ್ಸಾಮಿನಲ್ಲಿ ಎನ್‌ಆರ್‌ಸಿ ಹೆಸರಲ್ಲಿ ನಮ್ಮದೇ ಜನರನ್ನು ಒಡೆದು ಅಲ್ಲಿ ದ್ವೇಷವನ್ನು ಬಿತ್ತಲು ಹೊರಟಿದೆ. ಸರಕಾರದ ಈ ಕ್ರಮ ಮುಂದೊಂದು ದಿನ, ಅಸ್ಸಾಮನ್ನು ಇನ್ನೊಂದು ರೋಹಿಂಗ್ಯಾ ಮಾಡುವ ಅಪಾಯವಿದೆ. ಈ ದ್ವೇಷವನ್ನು ಗೆಲ್ಲುವ ಮಾರ್ಗ ಯಾವುದು? ಮೋದಿಯವರು ಮುಂದಿನ ಮನ್ ಕಿ ಬಾತ್‌ನಲ್ಲಿ ಇವುಗಳ ಕುರಿತಂತೆ ದೇಶದ ಜನರಿಗೆ ಸ್ಪಷ್ಟನೆಯನ್ನು ನೀಡಿಯಾರೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News