ಹೃದಯಾಘಾತ ಮತ್ತು ಹೃದಯ ಸ್ತಂಭನ ಹೆಚ್ಚಾಗಿ ಬಾತ್‌ರೂಮ್‌ಗಳಲ್ಲಿಯೇ ಸಂಭವಿಸುವುದು ಏಕೆ?

Update: 2019-07-30 19:02 GMT

ಸ್ನಾನ ಆಯಾಸವನ್ನು ಪರಿಹರಿ ಸಿ ನವಚೈತನ್ಯವನ್ನು ನೀಡುತ್ತದೆಯಾದರೂ ಅದು ಮಾರಣಾಂತಿಕವೂ ಆಗಬಹುದು. ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಹೃದಯ ವೈಫಲ್ಯವನ್ನುಂಟು ಮಾಡಬಹುದಾದ ಕೆಲವು ಕಾರಣಗಳಿವೆ.

 ಬೆಳಿಗ್ಗೆ ಸ್ನಾನ ಮಾಡುವುದು ದಿನವನ್ನು ಆರಂಭಿಸಲು ಒಳ್ಳೆಯ ಹೆಜ್ಜೆಯಾಗಿದೆ. ಬೆಳಗಿನ ವೇಳೆಯಲ್ಲಿ ಸ್ನಾನ ಮಾಡುವುದು ನಮ್ಮನ್ನು ತಾಜಾ ಆಗಿಸುತ್ತದೆ ಮತ್ತು ಶರೀರದಲ್ಲಿ ಉತ್ಸಾಹವನ್ನು ತುಂಬುತ್ತದೆ. ಆದರೆ ಸ್ನಾನ ಮಾಡುತ್ತಿರುವಾಗ ಹೃದಯ ಸ್ತಂಭನ ಅಥವಾ ಹೃದಯಾಘಾತದ ಹೆಚ್ಚುತ್ತಿರುವ ಪ್ರಕರಣಗಳು ಆತಂಕವನ್ನು ಸೃಷ್ಟಿಸಿವೆ. ಹಿರಿಯ ಬಾಲಿವುಡ್ ನಟಿ ಶ್ರೀದೇವಿ ಅವರೂ ದುಬೈ ಹೋಟೆಲ್‌ನ ಬಾತ್‌ರೂಮಿನಲ್ಲಿಯೇ ಹೃದಯ ಸ್ತಂಭನಕ್ಕೊಳಗಾಗಿ ಸಾವನ್ನಪ್ಪಿದ್ದರು. ಅವರ ಸಾವಿನ ನಂತರವೇ ಬಾತರೂಮ್ ಸಾವುಗಳ ವಿಷಯ ಮುನ್ನೆಲೆಗೆ ಬಂದಿದೆ. ಸ್ನಾನ ಮಾಡುತ್ತಿರುವಾಗ ಹೃದಯ ವೈಫಲ್ಯಕ್ಕೆ ಸಂಭಾವ್ಯ ಕಾರಣಗಳು ಮತ್ತು ಅದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿಗಳಿಲ್ಲಿವೆ.

ಹೃದಯಾಘಾತ,ಮಿದುಳಿಗೆ ಆಘಾತ ಮತ್ತು ಹೃದಯ ಸ್ತಂಭನ ಇವು ಬಾತ್‌ರೂಮ್ ಸಾವುಗಳಿಗೆ ಮೂರು ಸಾಮಾನ್ಯ ಕಾರಣಗಳಾಗಿವೆ. ರಕ್ತ ಪರಿಚಲನೆ ಸಮಸ್ಯೆಗಳಿಂದಾಗಿ ಹೃದಯಕ್ಕೆ ಸಾಕಷ್ಟು ರಕ್ತ ಪೂರೈಕೆಯಾಗದಿದ್ದಾಗ ಹೃದಯಾಘಾತ ಸಂಭವಿಸುತ್ತದೆ.ಮಿದುಳಿಗೆ ರಕ್ತ ಪೂರೈಕೆಯಲ್ಲಿ ತಡೆಯುಂಟಾದರೆ ಅದು ಮಿದುಳು ಆಘಾತವನ್ನುಂಟು ಮಾಡುತ್ತದೆ. ಮಿದುಳು ತನ್ನ ಉಳಿವಿಗೆ ಅಗತ್ಯವಾದ ಪ್ರಮಾಣದಲ್ಲಿ ಗ್ಲುಕೋಸ್ ಮತ್ತು ಆಮ್ಲಜನಕವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೃದಯವು ಕೆಲಸ ಮಾಡುವುದನ್ನು ದಿಢೀರ್ ಆಗಿ ನಿಲ್ಲಿಸಿದಾಗ ಹೃದಯ ಸ್ತಂಭನ ಸಂಭವಿಸುತ್ತದೆ.

ಬಾತ್‌ರೂಮಿನಲ್ಲಿ ಹೃದಯ ವೈಫಲ್ಯಕ್ಕೆ ಪ್ರಮುಖ ಕಾರಣಗಳು

►ಟಾಯ್ಲೆಟ್ ಒತ್ತಡ

ಮಲ ವಿಸರ್ಜನೆ ಸರಾಗವಾಗದಿದ್ದಾಗ ಹೆಚ್ಚಿನ ಒತ್ತಡವನ್ನು ಹಾಕುವುದು ಹೆಚ್ಚಿನ ಪ್ರಕರಣಗಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.ಯಾವುದೇ ವ್ಯಕ್ತಿ ಮಲವಿಸರ್ಜನೆಗಾಗಿ ಅನೈಸರ್ಗಿಕ ಭಂಗಿಯಲ್ಲಿ ಕುಳಿತುಕೊಳ್ಳುವುದು ಆತನ ಆರೋಗ್ಯಕ್ಕೆ ಮಾರಣಾಂತಿಕವಾಗಬಹುದು. ಅದು ನೇರವಾಗಿ ಹೃದಯನಾಳೀಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಹೃದಯಕ್ಕೆ ಸಾಕಷ್ಟು ರಕ್ತ ಪೂರೈಕೆಯಾಗದೆ ಪ್ರಜ್ಞಾಹೀನ ಸ್ಥಿತಿ ಅಥವಾ ಸಾವಿಗೂ ಕಾರಣವಾಗುತ್ತದೆ. ಮಲವಿಸರ್ಜನೆ ಸಂದರ್ಭ ಹೆಚ್ಚು ತಿಣುಕಿದಾಗ ಅದು ರಕ್ತದೊತ್ತಡವನ್ನು ತಗ್ಗಿಸುತ್ತದೆ ಮತ್ತು ರಕ್ತಪೂರೈಕೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಭಾರತೀಯ ಪದ್ಧತಿಯ ಟಾಯ್ಲೆಟ್‌ಗಿಂತ ವಿದೇಶಿ ಪದ್ಧತಿಯಾದ ಕಮೋಡ್‌ಗಳ ಬಳಕೆಯಲ್ಲಿ ಈ ಅಪಾಯವು ಹೆಚ್ಚಾಗಿದೆ.

►ಮೊದಲು ತಲೆ ತೊಳೆಯುವುದು

ಸ್ನಾನ ಮಾಡುವಾಗ ಕೂದಲು ಮತ್ತು ತಲೆಗೆ ಮೊದಲು ನೀರು ಹಾಕಿಕೊಳ್ಳಬಾರದು ಎನ್ನುವುದು ಆರೋಗ್ಯ ತಜ್ಞರ ಸ್ಪಷ್ಟವಾದ ಅಭಿಪ್ರಾಯವಾಗಿದೆ. ಹೀಗೆ ಮಾಡುವುದು ಶರೀರಕ್ಕೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಜನರು ಸ್ನಾನಕ್ಕ ನಿಂತಾಗ ಮೊದಲು ತಲೆಯ ಮೇಲೆ ನೀರು ಹಾಕಿಕೊಳ್ಳುತ್ತಾರೆ ಮತ್ತು ನಂತರ ಶರೀರದ ಉಳಿದ ಭಾಗಗಳಿಗೆ ನೀರು ಬೀಳುತ್ತದೆ. ಆದರೆ ಇದು ತಪ್ಪು ಕ್ರಮವಾಗಿದೆ. ಇದರಿಂದಾಗಿ ಶರೀರವು ಬಲವಂತದಿಂದ ತನ್ನ ಉಷ್ಣತೆಯನ್ನು ಹೊಂದಾಣಿಕೆ ಮಾಡಿಕೊಳ್ಳುವಂತಾಗುತ್ತದೆ. ಇದರಿಂದಾಗಿ ರಕ್ತದೊತ್ತಡವು ದಿಢೀರಾಗಿ ಹೆಚ್ಚಿ ರಕ್ತನಾಳಗಳು ಒಡೆಯುವ ಸಾಧ್ಯತೆಯಿರುತ್ತದೆ. ಹೀಗಾಗಿ ಸ್ನಾನಕ್ಕೆ ನಿಂತಾಗ ಮೊದಲು ಕಾಲುಗಳನ್ನು ಒದ್ದೆ ಮಾಡಿಕೊಳ್ಳಬೇಕು ಮತ್ತು ನಂತರ ಹಂತ ಹಂತವಾಗಿ ಮೇಲಕ್ಕೆ ನೀರು ಹಾಕಿಕೊಳ್ಳುತ್ತ ತಲೆಭಾಗವನ್ನು ತಲುಪುವುದು ಮುಖ್ಯವಾಗಿದೆ.

►ರಕ್ತದೊತ್ತಡದಲ್ಲಿ ಏಕಾಏಕಿ ಬದಲಾವಣೆ

ಹೆಚ್ಚಿನ ರಕ್ತದೊತ್ತಡವಿರುವ ರೋಗಿಗಳು ಸ್ನಾನ ಮಾಡುವಾಗ ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವಿದೆ,ಏಕೆಂದರೆ ಬಿಸಿ ನೀರಿನ ಸ್ನಾನವಾಗಲಿ ಅಥವಾ ತಣ್ಣೀರಿನ ಸ್ನಾನವಾಗಲಿ,ರಕ್ತದೊತ್ತಡದಲ್ಲಿ ಏರಿಳಿತಗಳನ್ನು ಉಂಟು ಮಾಡುತ್ತವೆ. ಸಣ್ಣ ಯಡವಟ್ಟು  ಕೂಡ ಅವರನ್ನು ಸಾವಿನ ದವಡೆಗೆ ನೂಕಬಹುದು. ವಯಸ್ಸಾದ ವ್ಯಕ್ತಿಗಳು ಮತ್ತು ರಕ್ತದೊತ್ತಡ ಸಮಸ್ಯೆಯಿರುವವರು ಬೆಳಿಗ್ಗೆ ಬೇಗನೆ ಸ್ನಾನ ಮಾಡಬಾರದು. ರಕ್ತದೊತ್ತಡದಲ್ಲಿ ದಿಢೀರ್ ಬದಲಾವಣೆಗಳು ಮಿದುಳಿನ ರಕ್ತನಾಳಗಳಲ್ಲಿ ರಕ್ತಹೀನತೆಗೆ ಕಾರಣವಾಗುತ್ತವೆ ಮತ್ತು ಬಾತರೂಮಿನಲ್ಲಿ ಅಥವಾ ಟಾಯ್ಲೆಟ್‌ನಲ್ಲಿ ಹೃದಯ ಸ್ತಂಭನ ಅಥವಾ ಮಿದುಳಿನ ಆಘಾತವನ್ನುಂಟು ಮಾಡುತ್ತವೆ. ಚಳಿಗಾಲದಲ್ಲಿ ಶರೀರದ ಉಷ್ಣತೆಯಲ್ಲಿ ಬದಲಾವಣೆೆಗಳ ಅಪಾಯ ಹೆಚ್ಚಿರುವುದರಿಂದ ಆ ಋತುವಿನಲ್ಲಿ ಹೃದಯಾಘಾತವಾಗುವುದು ಹೆಚ್ಚು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News