‘ಹಿಂದೂ ಫುಡ್ ಡೆಲಿವರಿ ಬಾಯ್’ ಬೇಕು ಎಂದ ಗ್ರಾಹಕನಿಗೆ ತಿರುಗೇಟು ನೀಡಿದ ‘ಝೊಮ್ಯಾಟೋ’!

Update: 2019-07-31 07:49 GMT
Photo: TechCircle

ಹೊಸದಿಲ್ಲಿ, ಜು.31: ಝೊಮ್ಯಾಟೋ ಫುಡ್ ಡೆಲಿವರಿ ಆ್ಯಪ್ ಮೂಲಕ ಆಹಾರ ಆರ್ಡರ್ ಮಾಡಿದ್ದ ಮಧ್ಯ ಪ್ರದೇಶದ ಜಬಲ್ಪುರ್ ನಗರದ ಗ್ರಾಹಕನೊಬ್ಬ ತಾನು ಆರ್ಡರ್ ಮಾಡಿದ ಆಹಾರವನ್ನು ಡೆಲಿವರಿ ಮಾಡುವಾತ ಹಿಂದೂ ಆಗಿರಬೇಕೆಂದು ಮಾಡಿದ ಮನವಿಯನ್ನು ಝೊಮ್ಯಾಟೋ ತಿರಸ್ಕರಿಸಿದೆ.

ಇದಕ್ಕೂ ಮೊದಲು ಈ ಗ್ರಾಹಕನಿಗೆ ಫಯಾಝ್ ಎನ್ನುವವರು ಫುಡ್ ಡೆಲಿವರಿ ಮಾಡಲಿದ್ದರು. ಆದರೆ ಅವರು ಹಿಂದೂ ಅಲ್ಲ ಎನ್ನುವ ಕಾರಣಕ್ಕಾಗಿ ಆತ ಆರ್ಡರ್ ಕ್ಯಾನ್ಸಲ್ ಮಾಡಿದ್ದ. ಗ್ರಾಹಕ ತನ್ನ ಆರ್ಡರ್ ರದ್ದುಪಡಿಸಿ ರಿಫಂಡ್ ಕೇಳಿದ್ದ. ಟ್ವಿಟರ್ ನಲ್ಲಿ ಈ ಬಗ್ಗೆ ಹೇಳಿಕೊಂಡ ಗ್ರಾಹಕ ತಾನು ಆರ್ಡರ್ ರದ್ದುಗೊಳಿಸಿದ್ದರೂ ಪಾವತಿಸಿದ ಹಣ ರೀಫಂಡ್ ಆಗಿಲ್ಲ ಎಂದು ದೂರಿದ್ದ.

ಈ ಗ್ರಾಹಕನ ಟ್ವೀಟ್ ಉಲ್ಲೇಖಿಸಿ ಝೊಮ್ಯಾಟೋ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್  ಟ್ವೀಟ್ ಮಾಡಿ, “ಆಹಾರಕ್ಕೆ ಯಾವುದೇ ಧರ್ಮವಲ್ಲ, ಆಹಾರವೇ ಧರ್ಮ'' ಎಂದು ಹೇಳಿದೆ. ಈ ಸಂವಾದದಲ್ಲಿ ಝೊಮ್ಯಾಟೋ ಸ್ಥಾಪಕ ದೀಪಿಂದರ್ ಗೋಯಲ್ ಕೂಡ ಸೇರಿ “ಇಂತಹ  ಧಾರ್ಮಿಕ ತಾರತಮ್ಯಕ್ಕೆ ಝೊಮ್ಯಾಟೋದಲ್ಲಿ ಆಸ್ಪದವಿಲ್ಲ”  ಎಂದು ಹೇಳುವ ಮೂಲಕ ಆತನಿಗೆ ತಿರುಗೇಟು ನೀಡಿದ್ದಾರೆ.

``ಭಾರತದ  ಹಾಗೂ ನಮ್ಮ ಗೌರವಾನ್ವಿತ ಗ್ರಾಹಕರ ಹಾಗೂ ಪಾಲುದಾರರ ವೈವಿಧ್ಯತೆಯ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮ ಮೌಲ್ಯಗಳ ಹಾದಿಗೆ ಅಡ್ಡ ಬರುವ ವ್ಯಾಪಾರ ಕಳೆದುಕೊಳ್ಳಲು ನಮಗೆ ವಿಷಾದವಿಲ್ಲ'' ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಉತ್ತರ ಪ್ರದೇಶದ ವಿಹಿಂಪ ಮಾಧ್ಯಮ ಸಲಹೆಗಾರರೊಬ್ಬರು ಟ್ವೀಟ್ ಮಾಡಿ ಓಲಾದ ಮುಸ್ಲಿಂ ಚಾಲಕನ ಜತೆ ಪ್ರಯಾಣಿಸಲು ತಾನು ಬಯಸುವುದಿಲ್ಲ ಎಂದು ಹೇಳಿದ್ದು ಭಾರೀ ವಿವಾದಕ್ಕೀಡಾಗಿತ್ತು. ಆದರೆ ‘ಓಲಾ’ ಕೂಡ ಈ ಗ್ರಾಹಕನ ಮನವಿ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News