ಮನಸ್ಸಿನಲ್ಲೇನಿದೆಯೋ ಅದನ್ನೇ ಟೈಪ್ ಮಾಡುತ್ತೆ ಈ ಸಾಧನ!

Update: 2019-07-31 17:59 GMT

ಲಾಸ್ ಏಂಜಲಿಸ್, ಜು. 31: ಮನಸಿನಲ್ಲಿ ನೆನೆದದ್ದನ್ನು ಬರೆಯಲು ಸಾಧ್ಯವಾಗುವಂತೆ, ಮೆದುಳು ಮತ್ತು ಕಂಪ್ಯೂಟರನ್ನು ಸಂಪರ್ಕಿಸುವ ಆಗ್ಮೆಂಟಡ್ ರಿಯಾಲಿಟಿ (ಎಆರ್) ಅಂತರ್‌ಸಂಪರ್ಕ ಸಾಧನ (ಇಂಟರ್‌ಫೇಸ್)ವೊಂದನ್ನು ಫೇಸ್‌ಬುಕ್ ಅಭಿವೃದ್ಧಿಪಡಿಸುತ್ತಿದೆ.

2017ರಲ್ಲಿ ನಡೆದ ಎಫ್8 ಡೆವೆಲಪರ್ಸ್ ಸಮ್ಮೇಳನದಲ್ಲಿ, ಫೇಸ್‌ಬುಕ್ ತನ್ನ ಮೆದುಳು-ಕಂಪ್ಯೂಟರ್ ಇಂಟರ್‌ಫೇಸ್ ಕಾರ್ಯಕ್ರಮವನ್ನು ಘೋಷಿಸಿತ್ತು. ಮನಸ್ಸಿನಲ್ಲೇ ಮಾತನಾಡುವುದನ್ನು ನೇರವಾಗಿ ಟೈಪ್ ಮಾಡುವ, ಅತಿಕ್ರಮಣಕಾರಿಯಲ್ಲದ ಹಾಗೂ ಧರಿಸಬಹುದಾದ ಉಪಕರಣವೊಂದನ್ನು ನಿರ್ಮಿಸುವುದು ತನ್ನ ಗುರಿ ಎಂದು ಅದು ಹೇಳಿತ್ತು.

ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ, ಸ್ಯಾನ್‌ಫ್ರಾನ್ಸಿಸ್ಕೊ (ಯುಸಿಎಸ್‌ಎಫ್)ದ ಸಂಶೋಧಕರ ತಂಡವೊಂದಕ್ಕೆ ಫೇಸ್‌ಬುಕ್ ಬೆಂಬಲ ನೀಡುತ್ತಿದೆ. ನರ ದೌರ್ಬಲ್ಯದಿಂದ ಬಳಲುತ್ತಿರುವ ರೋಗಿಗಳ ಮೆದುಳಿನ ಚಟುವಟಿಕೆಗಳಿಂದ ಅವರ ಉದ್ದೇಶಿತ ಮಾತುಗಳನ್ನು ಸರಿಯಾದ ಸಮಯದಲ್ಲೇ ಪತ್ತೆಹಚ್ಚುವ ಕಾರ್ಯದಲ್ಲಿ ಈ ಸಂಶೋಧಕರು ತೊಡಗಿಕೊಂಡಿದ್ದಾರೆ.

 ಸಂಪೂರ್ಣ ಅನತಿಕ್ರಮಣಕಾರಿ ಮೆದುಳು-ಕಂಪ್ಯೂಟರ್ ಇಂಟರ್‌ಫೇಸ್‌ನ್ನು ಎಆರ್ ಗ್ಲಾಸ್‌ಗಳಿಗೆ ಸಂಭಾವ್ಯ ಇನ್‌ಪುಟ್ ಮಾದರಿಯಾಗಿಸಲು ‘ನಾವು ಇನ್ನೂ ಎಷ್ಟು ದೂರ ಹೋಗಬೇಕಾಗಿದೆ’ ಎಂಬುದನ್ನು ‘ನೇಚರ್ ಕಮ್ಯುನಿಕೇಶನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಬಂಧವೊಂದರಲ್ಲಿ ಯುಸಿಎಸ್‌ಫ್ ತಂಡ ವಿವರಿಸಿದೆ ಎಂದು ಫೇಸ್‌ಬುಕ್ ಮಂಗಳವಾರ ಬ್ಲಾಗ್ ಪೋಸ್ಟ್ ಒಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News