ಸಿದ್ಧಾರ್ಥ ಅವರನ್ನು ಹತಾಶೆಗೆ ತಳ್ಳಿ ಅವರ ಸಾವಿಗೆ ಕಾರಣವಾದ ಆ ಸಂಸ್ಥೆ ಯಾವುದು ?

Update: 2019-08-01 07:08 GMT

ಖಾಸಗಿ ಈಕ್ವಿಟಿ ಸಂಸ್ಥೆಗಳು ಹಾಗೂ ಬ್ಯಾಂಕರುಗಳು ಭಾರತೀಯ ಉದ್ಯಮಿಗಳ ಮೇಲೆ ಹೇರುತ್ತಿರುವ ಒತ್ತಡ ತಂತ್ರಗಾರಿಕೆಯೇ 'ಕೆಫೆ ಕಾಫಿ ಡೇ' ಸಂಸ್ಥೆ ಅನುಭವಿಸುತ್ತಿರುವ ಭಾರೀ ನಷ್ಟಕ್ಕೆ ಕಾರಣವಾಗಿ ಅದರ ಸ್ಥಾಪಕ ವಿ ಜಿ ಸಿದ್ಧಾರ್ಥ  ಅವರ ಸಾವಿಗೆ ಕಾರಣವಾಗಿರುವ  ಸಾಧ್ಯತೆಯಿದೆ.

ಕಾಫಿ ಡೇ ಸಂಸ್ಥೆಯಲ್ಲಿ ಕೆಲ ಖಾಸಗಿ ಈಕ್ವಿಟಿ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕೆಲ ಸ್ವತಂತ್ರ ನಿರ್ದೇಶಕರುಗಳ ಪಾತ್ರದ ಕುರಿತಂತೆ ಈಗಾಗಲೇ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ನಿಗಾ ಇಟ್ಟಿದೆ. ಜುಲೈ 29ರಂದು ಸಂಜೆ  ಸಿದ್ಧಾರ್ಥ ಅವರು ನೇತ್ರಾವತಿ ಸೇತುವೆಯಲ್ಲಿ ನಿಗೂಢವಾಗಿ ಕಣ್ಮರೆಯಾಗುವುದಕ್ಕಿಂತ ಎರಡು ದಿನಗಳ ಹಿಂದೆ ಅವರು  ಕಂಪೆನಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ  ಬರೆದ ಪತ್ರದಲ್ಲಿ  ಷೇರುಗಳನ್ನು ವಾಪಸ್ ಖರೀದಿಸುವಂತೆ  ತಮಗೆ ಖಾಸಗಿ ಈಕ್ವಿಟಿ ಪಾಲುದಾರರೊಬ್ಬರಿಂದ ಭಾರೀ ಒತ್ತಡವಿತ್ತು ಎಂದು ಹೇಳಿದ್ದಾರೆ.

“ಸಿದ್ಧಾರ್ಥ ಅವರ ಸಾವಿಗೆ ಪ್ರೇರೇಪಣೆ ನೀಡಿದ್ದಕ್ಕಾಗಿ ಖಾಸಗಿ ಈಕ್ವಿಟಿ ಸಂಸ್ಥೆಗಳು ಹಾಗೂ ಸಾಲ ನೀಡಿದವರರ ವಿರುದ್ಧ ಕ್ರಮ ಕೈಗೊಳ್ಳುವುದು ಬೇಡವೇ ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇ 8ಕ್ಕೆ ಸಾಲ ಪಡೆದ ಕೆಕೆಆರ್, ಸಿದ್ಧಾರ್ಥ ಅವರಿಂದ ಶೇ 25ರಷ್ಟು ಬಡ್ಡಿಯ ಬೇಡಿಕೆಯಿರಿಸಿ ಅವರ ಜೀವ ತೆಗೆದಿದೆ.  ಸಿದ್ಧಾರ್ಥ ಅವರ ಸಾವಿಗೆ ಕೆಕೆಆರ್ ಕಾರಣವೇ ಅಥವಾ ಎಸ್‍ಬಿಐ ಕಾರಣವೇ?'' ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಕೆಫೆ ಕಾಫಿ ಡೇ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಡಿಎನ್‍ಎ ವರದಿ ಮಾಡಿದೆ.

ಆದರೆ ಸಿದ್ಧಾರ್ಥ ಅವರ ಪತ್ರದಲ್ಲಿ ಉಲ್ಲೇಖಿಸಲಾದ `ಒತ್ತಡ' ಕುರಿತಂತೆ ಕೆಫೆ ಕಾಫಿ ಡೇ ಆಡಳಿತ ಇಲ್ಲಿಯ ತನಕ ಮೌನದಿಂದಿದ್ದು ಉದ್ಯಮದಲ್ಲಿ ಸ್ಥಿರತೆ ಕಾಯುವುದಾಗಿ ಹೇಳಿದೆ.

ಕೆಫೆ ಕಾಫಿ ಡೇ ಸಂಸ್ಥೆಯಲ್ಲಿ ನಾಲ್ಕು ವಿದೇಶಿ ಕಾರ್ಪೊರೇಟ್ ಸಂಸ್ಥೆಗಳು ಸುಮಾರು ಶೇ 22.35 ಪಾಲುದಾರಿಕೆ ಹೊಂದಿವೆ. ಎನ್‍ಎಲ್‍ಎಸ್ ಮಾರಿಷಸ್ ಎಲ್‍ಎಲ್‍ಸಿ ಶೇ 10.61 ಪಾಲುದಾರಿಕೆ ಹೊಂದಿದ್ದರೆ, ಕೆಕೆಆರ್ ಮಾರಿಷಸ್ ಪಿಇ ಇನ್ವೆಸ್ಟ್‍ಮೆಂಟ್ಸ್ ಶೇ 6.07 ಪಾಲುದಾರಿಕೆ ಹೊಂದಿದೆ (1.28 ಲಕ್ಷ ಷೇರುಗಳು).

ವಿದೇಶಿ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಭಾರತೀಯ ಬ್ಯಾಂಕುಗಳಿಂದ ಶೇ8-9ರಷ್ಟು ಬಡ್ಡಿಗೆ ಸಾಲ ಪಡೆದು ನಂತರ ಅದನ್ನು ಭಾರತೀಯ ಉದ್ಯಮಿಗಳಿಗೆ ಶೇ. 22ರಿಂದ ಶೇ 25ರಷ್ಟು ಬಡ್ಡಿಗೆ ಒದಗಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಈ  ಹೆಚ್ಚು ಬಡ್ಡಿದರ ಭಾರತೀಯ ಉದ್ಯಮಗಳ ಅಸ್ತಿತ್ವಕ್ಕೆ ಸಂಚಕಾರ ತರುತ್ತಿದೆ ಹಾಗೂ ಅವುಗಳಿಗೆ ಸಾಲ ವಾಪಸ್ ನೀಡುವುದು ಕಷ್ಟಕರವಾಗುತ್ತಿವೆ.

“ಹೆಚ್ಚು ಲಾಭ ಗಳಿಸುವ ಏಕೈಕ ಉದ್ದೇಶ ಹೊಂದಿರುವ ಖಾಸಗಿ ಈಕ್ವಿಟಿ ಸಂಸ್ಥೆಗಳು ಭಾರತೀಯ ಉದ್ಯಮಿಗಳ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುತ್ತವೆ. ಅಷ್ಟೇ ಅಲ್ಲದೆ  ಪಾಶ್ಚಿಮಾತ್ಯ ಬ್ರ್ಯಾಂಡುಗಳಿಗೆ ಸ್ಪರ್ಧೆ ನೀಡುವ (ಈ ಪ್ರಕರಣದಲ್ಲಿ ಸ್ಟಾರ್ ಬಕ್ಸ್) ಉದ್ಯಮಗಳನ್ನು ನಾಶಗೈಯ್ಯುವ ಕಾರ್ಯದಲ್ಲೂ ಇವು ಸಹಕಾರಿಯಾಗುತ್ತದೆ” ಎಂದು ಒಬ್ಬರು ಹೂಡಿಕೆದಾರ ಹೇಳಿದ್ದಾರೆ.

ಅಂತಿಮವಾಗಿ ಕೆಫೆ ಕಾಫಿ ಡೇ ಸ್ಥಾಪಕ ವಿ ಜಿ ಸಿದ್ಧಾರ್ಥ ಅವರ ಸಾವಿಗೆ ಕಾರಣವಾದ ಖಾಸಗಿ ಈಕ್ವಿಟಿ ಸಂಸ್ಥೆ ಹಾಗೂ ಸಾಲ ನೀಡಿದವರು ಯಾರೆಂಬ ಪ್ರಶ್ನೆ ಇದ್ದೇ ಇದೆ.

ಕೃಪೆ: dnaindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News