ದಿಲ್ಲಿಯಲ್ಲಿ 200 ಯೂನಿಟ್‌ವರೆಗೆ ವಿದ್ಯುತ್ ಬಳಕೆಗೆ ಶುಲ್ಕವಿಲ್ಲ: ಕೇಜ್ರಿವಾಲ್

Update: 2019-08-01 18:15 GMT

ಹೊಸದಿಲ್ಲಿ, ಆ.1: ತಿಂಗಳಿಗೆ 200 ಯೂನಿಟ್‌ವರೆಗೆ ವಿದ್ಯುತ್ ಬಳಸುವವರು ವಿದ್ಯುತ್ ಶುಲ್ಕ ಪಾವತಿಸಬೇಕಿಲ್ಲ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

 ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಜ್ರೀವಾಲ್, 200 ಯೂನಿಟ್‌ವರೆಗೆ ವಿದ್ಯುತ್ ಬಳಸುವವರ ಪೂರ್ಣ ಶುಲ್ಕ ಮನ್ನಾ ಮಾಡಲಾಗುತ್ತದೆ. 201ರಿಂದ 400 ಯೂನಿಟ್‌ವರೆಗಿನ ಬಳಕೆದಾರರ ಶೇ.50 ವಿದ್ಯುತ್ ಶುಲ್ಕ ಮನ್ನಾ ಮಾಡಲಾಗುತ್ತದೆ . ಆ.1ರಿಂದಲೇ ಇದು ಜಾರಿಗೆ ಬರುತ್ತದೆ ಎಂದು ಘೋಷಿಸಿದರು.

ಸರಕಾರಕ್ಕೆ ವಿದ್ಯುತ್ ಸಬ್ಸಿಡಿಯಿಂದ ವಾರ್ಷಿಕ ಸುಮಾರು 2 ಸಾವಿರ ಕೋಟಿ ರೂ. ಹೊರೆ ಬೀಳುತ್ತದೆ. ಸರಕಾರದ ಘೋಷಣೆಯಿಂದ ವಿದ್ಯುತ್ ಬಳಕೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಿದೆ . ರಾಜ್ಯದ ಒಟ್ಟು ವಿದ್ಯುತ್ ಬಳಕೆದಾರರಲ್ಲಿ ಶೇ.35ರಷ್ಟು ಮಂದಿ 200 ಯೂನಿಟ್‌ಗಿಂತ ಕಡಿಮೆ ಬಳಸುವವರು. ಮುಂದಿನ ದಿನದಲ್ಲಿ ಈ ಪ್ರಮಾಣ ಹೆಚ್ಚಬಹುದು ಎಂದವರು ಹೇಳಿದರು.

  2015ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ವಿದ್ಯುತ್ ಬಿಲ್‌ನ ಮೇಲೆ ಶೇ.50 ರಿಯಾಯಿತಿ ನೀಡುತ್ತಿದೆ. ಕಳೆದ ನಾಲ್ಕೂವರೆ ವರ್ಷದಿಂದ ದಿಲ್ಲಿ ಸರಕಾರ ವಿದ್ಯುತ್ ದರ ಏರಿಸಿಲ್ಲ. ದೇಶದಲ್ಲೇ ಅತೀ ಕಡಿಮೆ ಬೆಲೆಗೆ ವಿದ್ಯುತ್ ಒದಗಿಸುವ ಹೆಗ್ಗಳಿಕೆ ನಮ್ಮದಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಚುನಾವಣೆ ಎದುರಾದಾಗ ಉಚಿತ ಕೊಡುಗೆ ನೀಡುವ ಕುರಿತ ಟೀಕೆಗೆ ಉತ್ತರಿಸಿದ ಅವರು, ದೇಶದ ದೊಡ್ಡ ದೊಡ್ಡ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅದನ್ನೇ ದಿನದ 24 ಗಂಟೆಯೂ ದುಡಿಯುತ್ತಿರುವ ಜನಸಾಮಾನ್ಯರಿಗೂ ನೀಡಲು ಬಯಸುತ್ತಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News