ಡಯಾಬಿಟಿಸ್ + ಇನ್‌ಫ್ಲುಯೆಂಝಾ =ಅಪಾಯಕಾರಿ

Update: 2019-08-01 18:36 GMT

ಭಾರತವು ವಿಶ್ವದ ಡಯಾಬಿಟಿಸ್ ಅಥವಾ ಮಧುಮೇಹ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ವಿಶ್ವದಲ್ಲಿಯ ಒಟ್ಟು 425 ಮಿಲಿಯ ಮಧುಮೇಹಿಗಳ ಪೈಕಿ ಸುಮಾರು 74 ಮಿಲಿಯ ರೋಗಿಗಳು ಭಾರತದಲ್ಲಿದ್ದಾರೆ. ಮಧುಮೇಹ ಕುರಿತು ಹೆಚ್ಚಿನ ಜಾಗೃತಿಯಿಂದಾಗಿ ಜನರೀಗ ಈ ರೋಗದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ ನಿಜ. ಆದರೆ ಮಧುಮೇಹಿಗಳ ಮೇಲೆ ಇನ್‌ಫ್ಲುಯೆಂಝಾ ಅಥವಾ ಶೀತಜ್ವರದ ಅಪಾಯಕಾರಿ ಪರಿಣಾಮಗಳ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ.
ಇನ್‌ಫ್ಲುಯೆಂಝಾ ಸೋಂಕು ಯಾರನ್ನೂ ಕಾಡಬಹುದು,ಆದರೆ ಮಧುಮೇಹಿಗಳಿಗೆ ಈ ಸೋಂಕಿನ ವಿರುದ್ಧ ಹೋರಾಡುವುದು ಕಷ್ಟವಾಗುತ್ತದೆ.
ಇನ್‌ಫ್ಲುಯೆಂಝಾ ಸೋಂಕು ಸಾಮಾನ್ಯವಾಗಿ ಇನ್‌ಫ್ಲುಯೆಂಝಾ ಎ ಅಥವಾ ಬಿ ವೈರಸ್‌ಗಳಿಂದ ಉಂಟಾಗುತ್ತದೆ. ದುರ್ಬಲ ರೋಗ ನಿರೋಧಕ ಶಕ್ತಿ ಅಥವಾ ಮಧುಮೇಹದಂತಹ ದೀರ್ಘಕಾಲಿಕ ಕಾಯಿಲೆಗಳನ್ನು ಹೊಂದಿದವರಲ್ಲಿ ಇನ್‌ಫ್ಲುಯೆಂಝಾ ಗಂಭೀರ ಪರಿಣಾಮಗಳನ್ನುಂಟು ಮಾಡಬಲ್ಲದು. ನಾವು ಇನ್‌ಫ್ಲುಯೆಂಝಾದಿಂದ ಬಳಲುತ್ತಿರುವಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಒತ್ತಡಕ್ಕೊಳಗಾಗುತ್ತೇವೆ. ಇದು ಸೋಂಕಿನ ವಿರುದ್ಧ ಹೋರಾಡಲು ಶರೀರವು ಕೆಲವು ಹಾರ್ಮೋನ್‌ಗಳನ್ನು ಬಿಡುಗಡೆಗೊಳಿಸುವಂತೆ ಮಾಡುತ್ತದೆ. ಆದರೆ ಈ ಹಾರ್ಮೋನ್‌ಗಳು ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ಏರಿಳಿತಗಳನ್ನುಂಟು ಮಾಡುತ್ತವೆ,ತನ್ಮೂಲಕ ಶರೀರದಲ್ಲಿಯ ಇನ್ಸುಲಿನ್‌ನ ಮೆಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ.


 ಅಲ್ಲದೆ ಇನ್‌ಫ್ಲುಯೆಂಝಾ ರೋಗ ನಿರೋಧಕ ಶಕ್ತಿಯನ್ನೂ ದುರ್ಬಲಗೊಳಿಸುತ್ತದೆ ಮತ್ತು ಇತರ ಸೋಂಕುಗಳುಂಟಾ ಗುವ ಅಪಾಯವನ್ನು ಹೆಚ್ಚಿಸುತ್ತದೆ. ಜ್ವರದಿಂದ ಬಳಲುತ್ತಿರುವಾಗ ಏನನ್ನೂ ಸೇವಿಸಲು ಮನಸ್ಸು ಬಯಸುವುದಿಲ್ಲ ಮತ್ತು ಇದು ರಕ್ತದಲ್ಲಿಯ ಗ್ಲುಕೋಸ್ ಮಟ್ಟದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಅನಾರೋಗ್ಯದಿಂದಾಗಿ ಮಧುಮೇಹಿಗಳಿಗೆ ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸುವ ಕ್ರಮ ತಪ್ಪುವುದರಿಂದ ಮಧುಮೇಹ ಸ್ಥಿತಿಯು ಇನ್ನಷ್ಟು ಹದಗೆಡುತ್ತದೆ.
ಮಧುಮೇಹಿಗಳಲ್ಲಿ ಇನ್‌ಫ್ಲುಯೆಂಝಾ ಸೋಂಕು ಹೃದಯ ಸಮಸ್ಯೆಗಳು ಮತ್ತು ಶ್ವಾಸನಾಳ ಸೋಂಕುಗಳಂತಹ ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ರೋಗಿಗಳ ಸಾವಿಗೂ ಕಾರಣವಾಗಬಲ್ಲದು. ಮಧುಮೇಹಿಗಳು ಶೀತಜ್ವರದಿಂದ ಉಂಟಾಗುವ ತೊಂದರೆಗಳ ಅಪಾಯದಿಂದ ದೂರವಿರಲು ವರ್ಷಕ್ಕೊಮ್ಮೆ ಇನ್‌ಫ್ಲುಯೆಂಝಾ ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿದೆ.
 

Writer - ಎನ್. ಕೆ.

contributor

Editor - ಎನ್. ಕೆ.

contributor

Similar News