ಆರ್‌ಟಿಐ ಕಾಯ್ದೆಗೆ ಭಯಪಡುತ್ತಿರುವವರು ಯಾರು?

Update: 2019-08-01 18:40 GMT

ಸದ್ಯದ ಸರಕಾರ ಅಧಿಕಾರಕ್ಕೇರಿದ ವಾರಗಳ ಒಳಗೆ ಈ ಕಾಯ್ದೆಯನ್ನು ಅಸಮಂಜಸ ಎಂದು ಕರೆಯುತ್ತದೆ ಮತ್ತು ಅದನ್ನು ರಾತ್ರಿ ಹಗಲಾಗುವುದರೊಳಗೆ ತೆಗೆದು ಹಾಕಲು ಬಯಸುತ್ತದೆ. ಇಷ್ಟೊಂದು ವೇಗದಲ್ಲಿ ಆತುರವಾಗಿ ಕಾನೂನಿಗೆ ತಿದ್ದುಪಡಿ ತರುತ್ತಿರುವುದಾದರೂ ಯಾಕೆ? ನಿಶ್ಚಿತವಾಗಿಯೂ, ಯಾರೋ ಆರ್‌ಟಿಐ ಕಾಯ್ದೆಯಿಂದ ಭಯಭೀತಗೊಂಡಿದ್ದಾರೆ.

ಲೋಕಸಭೆಯಲ್ಲಿ ಮಾಹಿತಿ ಹಕ್ಕು (ತಿದ್ದುಪಡಿ) ಕಾಯ್ದೆ, 2019ರ ಮಂಡನೆ ಮತ್ತು ಪರಿಚಯಗೊಂಡ ಮೂರು ದಿನಗಳ ಒಳಗೆ ಅದನ್ನು ಅಂಗೀಕರಿಸಿರುವುದರ ಸುತ್ತ ನಿಗೂಢತೆ ಮನೆ ಮಾಡಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಇದು ಪ್ರತಿ ಭಾರತೀಯನ ದೌರ್ಬಲೀಕರಣ ಮತ್ತು ಈ ಕಾಯ್ದೆಯು ಈಗ ವಿನಾಶದ ಅಂಚಿನಲ್ಲಿದೆ ಎಂದು ಸರಿಯಾಗಿಯೇ ಹೇಳಿದ್ದಾರೆ. ಈ ತಿದ್ದುಪಡಿಯ ಮೂಲಕ ರಾಜ್ಯಗಳ ಮತ್ತು ಕೇಂದ್ರದ ಮುಖ್ಯ ಮಾಹಿತಿ ಆಯುಕ್ತರ ವೇತನ ಮತ್ತು ಸೇವಾವಧಿಯಲ್ಲಿ ಬದಲಾವಣೆಗಳನ್ನು ತರಲಾಗಿದೆ. ತಿದ್ದುಪಡಿಯ ಪ್ರಕಾರ, ಮಾಹಿತಿ ಆಯುಕ್ತರ ಸದ್ಯದ ಸೇವಾವಧಿಯ ಐದು ವರ್ಷ (ಗರಿಷ್ಠ ವಯಸ್ಸು 65) ಗಳ ಬದಲಿಗೆ ಕೇಂದ್ರ ಸರಕಾರ ಸೂಚಿಸಿದಷ್ಟು ಅವಧಿಗೆ ಇರಲಿದೆ ಮತ್ತು ವೇತನವನ್ನೂ ಕೇಂದ್ರವೇ ನಿರ್ಧರಿಸಲಿದೆ. ಈ ಮೊದಲು ಮಾಹಿತಿ ಆಯುಕ್ತರು ಚುನಾವಣಾ ಆಯುಕ್ತರಿಗೆ ಸಮಾನವಾದ ಅಧಿಕಾರ ಮತ್ತು ವೇತನವನ್ನು ಪಡೆಯುತ್ತಿದ್ದರು.

 ಕಾಯ್ದೆಯಲ್ಲಿನ ಕೆಲವು ಅಸಮಂಜಸತೆಗಳನ್ನು ತೆಗೆದು ಹಾಕಲು ಈ ತಿದ್ದುಪಡಿ ಮಾಡಿರುವುದಾಗಿ ತಿಳಿಸಿರುವ ಸರಕಾರ, ಚುನಾವಣಾ ಆಯೋಗ ಮತ್ತು ಮಾಹಿತಿ ಆಯೋಗ ನಿರ್ವಹಿಸುವ ಕಾರ್ಯಗಳು ಸಂಪೂರ್ಣ ಭಿನ್ನವಾಗಿದೆ ಎಂದು ಬೆಟ್ಟು ಮಾಡಿದೆ. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದೆ ಮತ್ತು ಮಾಹಿತಿ ಆಯೋಗಗಳು ಆರ್‌ಟಿಐ ಕಾಯ್ದೆ, 2005ರ ಅಡಿಯಲ್ಲಿ ಸ್ಥಾಪಿಸಲಾಗಿರುವ ಶಾಸನಬದ್ಧ ಸಂಸ್ಥೆಗಳಾಗಿವೆ.
ಸಂಸ್ಥೆಯ ಸ್ವಾಯತ್ತೆಯ ಮೇಲೆ ಪರಿಣಾಮ ಬೀರುವ ಯಾವುದೇ ರೀತಿಯ ಕಾರ್ಯ ಅಥವಾ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಈ ಹೇಳಿಕೆ ಪೊಳ್ಳು ಮತ್ತು ಸೋಗಲಾಡಿತನದಂತೆ ಕೇಳಿಸುತ್ತದೆ. ಮಾಹಿತಿ ಆಯುಕ್ತರ ವೇತನ ಮತ್ತು ಸೇವಾವಧಿಯ ವ್ಯಾಪ್ತಿಯು ಸರಕಾರದ ನಿಯಂತ್ರಣಕ್ಕೆ ಬಂದ ನಂತರ ಮಾಹಿತಿ ಆಯೋಗಕ್ಕೆ ಇರುವ ಸ್ವಾಯತ್ತೆಯಾದರೂ ಏನು?
2015ರ ಅಕ್ಟೋಬರ್‌ನಲ್ಲಿ ಆರ್‌ಟಿಐ ಕಾಯ್ದೆಯ 10ನೇ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸುವ ವೇಳೆ ಪ್ರಧಾನಿ ಮೋದಿ, ಆಡಳಿತವನ್ನು ಪ್ರಶ್ನಿಸುವ ಮತ್ತು ಅದು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳುವ ಅಧಿಕಾರವನ್ನು ಸಾಮಾನ್ಯ ಜನರಿಗೆ ನೀಡುವ ಈ ಕಾಯ್ದೆ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ಹೇಳಿಕೊಂಡಿದ್ದರು. ಈ ಕಾಯ್ದೆಯಿಂದ, ತನ್ನ ಕಾರ್ಯನಿರ್ವಹಣೆಯ ಮೇಲೆಯೇ ನಿಗಾ ಇರಿಸಲು ಮತ್ತು ಪಾರದರ್ಶಕತೆ ಹಾಗೂ ಜವಾಬ್ದಾರಿ ಮೂಡಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು.
ಈ ಕುರಿತು ಹೇಳಿಕೆ ನೀಡಿದ ಭಾರತದ ಮೊದಲ ಮುಖ್ಯ ಮಾಹಿತಿ ಆಯುಕ್ತ ವಜಹತ್ ಹಬೀಬುಲ್ಲ ಅವರು, ಮಾಹಿತಿ ಆಯುಕ್ತರ ಪಾತ್ರವನ್ನು ಪರಿಗಣಿಸಿದ ಸಂಸತ್ ಅವರ ವೇತನ ಮತ್ತು ಭತ್ತೆಗಳನ್ನು ಮತ್ತು ಸೇವಾವಧಿಯನ್ನು ಆರ್‌ಟಿಐ ಕಾಯ್ದೆಯಲ್ಲೇ ನಿಗದಿಪಡಿಸುವುದು ಸೂಕ್ತ ಎಂದು ಯೋಚಿಸಿತ್ತು. ಯಾಕೆಂದರೆ ಹತ್ತರಲ್ಲಿ ಒಂಬತ್ತು ಮನವಿ ಪ್ರಕರಣಗಳಲ್ಲಿ ಮಾಹಿತಿ ನೀಡಬೇಕಾದ ಪಕ್ಷಗಳು ಒಂದೋ ಸರಕಾರ ಅಥವಾ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾಗಿರುವ ಕಾರಣ ಮಾಹಿತಿ ಆಯುಕ್ತರು ಯಾವುದೇ ಭಯ ಅಥವಾ ಓಲೈಕೆಗೆ ಬಲಿಯಾಗದೆ ಸ್ವಾಯತ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಸಂಸತ್ ಈ ಯೋಜನೆಯನ್ನು ರೂಪಿಸಿದೆ. ಸದ್ಯದ ತಿದ್ದುಪಡಿ ಅದೆಲ್ಲವನ್ನೂ ನಾಶಮಾಡಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ವಿಚಿತ್ರವೆಂದರೆ, ಸರಕಾರ ಈ ತಿದ್ದುಪಡಿಯನ್ನು ಸಂಪೂರ್ಣ ಗೌಪ್ಯತೆ ಮತ್ತು ಪೂರ್ವ ಶಾಸಕಾಂಗ ಸಮಾಲೋಚನೆ ನಿಯಮವನ್ನು ಉಲ್ಲಂಘಿಸುವ ಮೂಲಕ ಪರಿಚಯಿಸಿದೆ. ಈ ನಿಯಮದ ಪ್ರಕಾರ, ಒಂದು ಕರಡು ಮಸೂದೆಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದು ಮತ್ತು ಸಮಾಲೋಚನೆ ಕಡ್ಡಾಯವಾಗಿದೆ. ಕಾಯ್ದೆಯನ್ನು ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಪರಿಚಯಿಸಿದ್ದರಿಂದ ಕರಡು ಮಸೂದೆಯನ್ನು ಪರಿಚಯಿಸುವ ಸಂದರ್ಭದಲ್ಲಿ ಲೋಕಸಭಾ ಸದಸ್ಯರಿಗೆ ಹಂಚುವವರೆಗೂ ಅದರಲ್ಲಿ ಏನಿದೆ ಎಂಬುದು ಸಂಸದರು, ನಾಗರಿಕರು ಮತ್ತು ಮಾಧ್ಯಮಕ್ಕಾಗಲೀ ತಿಳಿದಿರಲಿಲ್ಲ.


ಸದ್ಯದ ಸರಕಾರ ಅಧಿಕಾರಕ್ಕೇರಿದ ವಾರಗಳ ಒಳಗೆ ಈ ಕಾಯ್ದೆಯನ್ನು ಅಸಮಂಜಸ ಎಂದು ಕರೆಯುತ್ತದೆ ಮತ್ತು ಅದನ್ನು ರಾತ್ರಿ ಹಗಲಾಗುವುದರೊಳಗೆ ತೆಗೆದು ಹಾಕಲು ಬಯಸುತ್ತದೆ. ಇಷ್ಟೊಂದು ವೇಗದಲ್ಲಿ ಆತುರವಾಗಿ ಕಾನೂನಿಗೆ ತಿದ್ದುಪಡಿ ತರುತ್ತಿರುವುದಾದರೂ ಯಾಕೆ? ನಿಶ್ಚಿತವಾಗಿಯೂ, ಯಾರೋ ಆರ್‌ಟಿಐ ಕಾಯ್ದೆಯಿಂದ ಭಯಭೀತಗೊಂಡಿದ್ದಾರೆ.
ಹಾಗೆ ಭಯಗೊಂಡಿರುವುದು ಸರಕಾರ ಮತ್ತು ಚುನಾವಣಾ ಆಯೋಗ ಎಂದು ತಿಳಿಯಬಹುದೇ? ಖಂಡಿತವಾಗಿಯೂ, ಮುಖ್ಯವಾಗಿ ಚುನಾವಣಾ ಆಯೋಗ ಮತ್ತು ಮಾಹಿತಿ ಆಯೋಗದ ನಡುವಿನ ಅಸಮಂಜಸತೆಯನ್ನು ಈ ತಿದ್ದುಪಡಿಗೆ ಕಾರಣ ಎಂದು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ. ಕೇವಲ ಅಸಮಂಜಸತೆಯನ್ನು ತೆಗೆದು ಹಾಕುವುದೇ ಉದ್ದೇಶವಾಗಿದ್ದರೆ ಅದನ್ನು ಸಾಮಾನ್ಯ ರೀತಿಯಲ್ಲಿ ಬಹಿರಂಗವಾಗಿಯೇ ಮಾಡಬಹುದಿತ್ತು. ಈ ತಪ್ಪಿತಸ್ಥ ಭಾವ ಯಾಕೆ? ಯಾಕೀ ಅವಸರ ಮತ್ತು ಗೌಪ್ಯತೆ?
 ಇದರ ಹಿಂದೆ ಸಮಗ್ರತೆಯ ಮೂಲ ಅಂಶಗಳೇ ಇಲ್ಲದ, ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯ ರಹಸ್ಯ ಅಡಗಿದೆ. ಈ ಚುನಾವಣೆಯಲ್ಲಿ ಚುನಾವಣಾ ಆಯೋಗದ ಸಹಾಯದಿಂದಲೇ ದೊಡ್ಡ ಮಟ್ಟದಲ್ಲಿ ಮತಯಂತ್ರಗಳನ್ನು ತಿರುಚಲಾಗಿರುವ ಅನುಮಾನ ದಟ್ಟವಾಗಿದೆ. ಈ ವಿಷಯ ಎಷ್ಟು ಗಂಭೀರವಾಗಿದೆಯೆಂದರೆ, 64 ಮಾಜಿ ನಾಗರಿಕ ಸೇವಕರು (ಹಲವರು ಚುನಾವಣೆಗಳನ್ನು ನಡೆಸಿದ್ದಾರೆ ಮತ್ತು ಮೇಲುಸ್ತುವಾರಿ ನೋಡಿಕೊಂಡಿದ್ದಾರೆ) ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಆ ಪತ್ರದ ಸಾರಾಂಶ ಈ ರೀತಿಯಿದೆ:
2019ರ ಸಾಮಾನ್ಯ ಚುನಾವಣೆ ದೇಶ ಇತ್ತೀಚಿನ ದಶಕಗಳಲ್ಲಿ ಕಂಡ ಅತೀ ಕನಿಷ್ಠ ಮುಕ್ತ ಮತ್ತು ನ್ಯಾಯಬದ್ಧ ಚುನಾವಣೆಯಾಗಿದೆ. ಈ ಹಿಂದೆ ಕ್ರಿಮಿನಲ್ ಶಕ್ತಿಗಳು, ತೋಳ್ಬಲ ಮತ್ತು ನಿರ್ಲಜ್ಜ ರಾಜಕಾರಣಿಗಳ ಪ್ರಯತ್ನಗಳ ನಡುವೆಯೂ ಅಂದು ಚುನಾವಣಾ ಆಯೋಗದ ನೇತೃತ್ವ ವಹಿಸಿದ್ದವರು ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಬದ್ಧವಾಗಿ ನಡೆಸಲು ಸಾಧ್ಯವಾದಷ್ಟು ಪ್ರಯತ್ನಪಡುತ್ತಿದ್ದರು. ಆದರೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಂವಿಧಾನದ ಪಾವಿತ್ರವನ್ನು ಕಾಪಾಡಲು ರಚಿಸಲಾಗಿರುವ ಸಾಂವಿಧಾನಿಕ ಪ್ರಾಧಿಕಾರವೇ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದೆ ಮತ್ತು ದಾರಿ ತಪ್ಪಿಸಿದೆ ಎಂಬ ಅನುಮಾನ ದಟ್ಟವಾಗುತ್ತಿದೆ. ಚುನಾವಣಾ ಆಯೋಗದ ಪಕ್ಷಾತೀತತೆ, ಸಮಗ್ರತೆ ಮತ್ತು ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿರುವಂತಹ ಘಟನೆಗಳು ನಡೆದಿರುವುದು ವಿರಳ. ದುರದೃಷ್ಟವಶಾತ್, ಪ್ರಸಕ್ತ ಚುನಾವಣಾ ಆಯೋಗ ಮತ್ತು ಅದು 2019ರ ಸಾರ್ವತ್ರಿಕ ಚುನಾವಣೆಯನ್ನು ನಡೆಸಿರುವ ರೀತಿಯ ಬಗ್ಗೆ ಈ ರೀತಿ ಹೇಳಲು ಸಾಧ್ಯವಿಲ್ಲ.
ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಮರೆಮಾಚಲಾಗಿದ್ದರೂ ಚುನಾವಣಾ ಆಯೋಗದ ವಿರುದ್ಧ ದೂರುಗಳ ಮಹಾಪೂರವೇ ಬಂದಿವೆ ಮತ್ತು ಆಯುಕ್ತರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಸಾಯುತ್ತಿರುವ ಪ್ರಜಾಪ್ರಭುತ್ವವನ್ನು ಉಳಿಸಲು ಅನೇಕ ಸಾರ್ವಜನಿಕ ಅಭಿಯಾನಗಳನ್ನು ನಡೆಸಲಾಗಿದೆ. ಈ ಪ್ರಕ್ರಿಯೆಯಲ್ಲಿ, ಅಭಿಯಾನಗಳನ್ನು ಗಟ್ಟಿಗೊಳಿಸುವ ಮತ್ತು ಕಾನೂನಿನ ಮೂಲಕ ಸಮಾಧಾನವನ್ನು ಕಂಡುಹುಡುಕುವ ಉದ್ದೇಶದಿಂದ ವಾಸ್ತವವನ್ನು ಖಚಿತಪಡಿಸಲು ಮತ್ತು ಮಾಹಿತಿ ಪಡೆದುಕೊಳ್ಳಲು ಇಸಿ ಮತ್ತು ಐಸಿಗಳಿಗೆ ಅನೇಕ ಆರ್‌ಟಿಐ ಅರ್ಜಿಗಳು ಬಂದಿವೆ. ಇದರಿಂದ ಅದಾಗಲೇ ಇಸಿಗೆ ಬಿಸಿ ಮುಟ್ಟಿದ್ದು ಸುಳ್ಳು ಮತ್ತು ಕುಂಟು ನೆಪಗಳನ್ನು ಹೇಳಲು ಆರಂಭಿಸಿದೆ.
ಈ ರೀತಿಯ ಒಂದು ಉತ್ತರ, 2019ರ ಲೋಕಸಭಾ ಚುನಾವಣೆಯ ವಿವಿಪ್ಯಾಟ್ ಲೆಕ್ಕದ ಅಂಕಿಅಂಶದ ಮಾಹಿತಿ ಮತ್ತು ದಾಖಲೆಯನ್ನು ಕೋರಿ ‘ದಿ ಕ್ವಿಂಟ್’ ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಸಿಕ್ಕಿದೆ; 2019ರ ಲೋಕಸಭಾ ಚುನಾವಣೆಯ ಮತಗಟ್ಟೆ ವಾರು ಅಂಕಿಅಂಶ ಆಯೋಗದ ಬಳಿಯಿಲ್ಲ. ಅದು ಎಲ್ಲ ರಾಜ್ಯಗಳ/ಕೇಂದ್ರಾಡಳಿತಗಳ ಸಿಇಒಗಳ ಬಳಿ ಇರಬಹುದು. ಆರ್‌ಟಿಐ ಕಾಯ್ದೆ, 2005ರ ಅಡಿಯಲ್ಲಿ ಪ್ರತ್ಯೇಕ ಅರ್ಜಿ ಹಾಕುವ ಮೂಲಕ ನೀವು ಈ ಮಾಹಿತಿಯನ್ನು ರಾಜ್ಯಗಳ/ಕೇಂದ್ರಾಡಳಿತಗಳ ಸಿಇಒಗಳಿಂದ ಈ ಮಾಹಿತಿಯನ್ನು ಪಡೆದುಕೊಳ್ಳಬಹುದು. ಆರ್‌ಟಿಐ ಕಾಯ್ದೆ 2005ರ ವಿಧಿ 6(3) ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಪಿಐಒಗಳು ಇರುವುದರಿಂದ ನಿಮ್ಮ ಅರ್ಜಿಯನ್ನು ಅವರಿಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ.
ಮತ ಎಣಿಕೆಯ ದಿನದ ನಂತರ ಏಳು ದಿನಗಳ ಒಳಗಾಗಿ ಎಲ್ಲ ಮುಖ್ಯ ಚುನಾವಣಾ ಆಯುಕ್ತರೂ ವಿವಿಪ್ಯಾಟ್ ಅಂಕಿಅಂಶವನ್ನು ಆಯೋಗಕ್ಕೆ ಒಪ್ಪಿಸಬೇಕು ಎಂದು ಇಸಿಯೇ ಅಧಿಸೂಚನೆ ಹೊರಡಿಸಿರುವಾಗ ಈ ಅಸಂಬದ್ಧ ಉತ್ತರ ನೀಡಲಾಗಿದೆ. ಹಾಗಾದರೆ ಚುನಾವಣಾ ಆಯೋಗ ಈ ಅಂಕಿಅಂಶಗಳನ್ನು ನೀಡಲು ನಿರಾಕರಿಸುವ ಮೂಲಕ ಇವಿಎಂ ಎಣಿಕೆ ಮತ್ತು ವಿವಿಪ್ಯಾಟ್ ಸ್ಲಿಪ್‌ಗಳ ನಡುವಿನ ಬೃಹತ್ ಅಂತರವನ್ನು ಮರೆಮಾಚಲು ಯಾಕೆ ಪ್ರಯತ್ನಿಸುತ್ತಿದೆ?
ಇಸಿ ಭಯಗೊಂಡಿದೆ. ಇವಿಎಂ ಮತ ಲೆಕ್ಕ ಮತ್ತು ವಿವಿಪ್ಯಾಟ್ ಸ್ಲಿಪ್‌ಗಳ ನಡುವಿನ ವ್ಯತ್ಯಾಸದ ಬಗ್ಗೆ ನೀಡಿರುವ ವಿರುದ್ಧ ಹೇಳಿಕೆಗಳನ್ನು ಇನ್ನು ಹೇಗೆ ಅರ್ಥೈಸಲು ಸಾಧ್ಯ? ಯಾವುದೇ ವ್ಯತ್ಯಾಸವಿಲ್ಲ ಎಂದು ಮೇ 26, 2019ರಂದು ಚುನಾವಣಾ ಆಯೋಗ ತಿಳಿಸಿತ್ತು. ಆದರೆ ಜುಲೈ 22ರಂದು ಅದು ಎಂಟರಲ್ಲಿ ವ್ಯತ್ಯಾಸವಿದೆ ಎಂದು ತಿಳಿಸಿತ್ತು. ಇದನ್ನು ಮರೆಮಾಚಲು ಇಸಿ ಪಾವತಿ ಮಾಡಿದ ಜಾಹೀರಾತುಗಳ ಮೂಲಕ ಇವಿಎಂ ಸಾಮರ್ಥ್ಯದ ಬಗ್ಗೆ ಡಂಗುರ ಸಾರಲು ಆರಂಭಿಸಿತು. ಇವೆಲ್ಲವೂ ಏನೋ ಒಳಗಿಂದ ಕೊಳೆಯುತ್ತಿದೆ ಮತ್ತು ಇಸಿಯ ಪೆಟ್ಟಿಗೆಯಲ್ಲಿ ಅನೇಕ ಅಸ್ಥಿಪಂಜರಗಳಿವೆ ಎಂಬುದನ್ನು ಸೂಚಿಸುತ್ತವೆ.
ಇಲ್ಲಿರುವ ಮುಖ್ಯ ವಿಷಯವೆಂದರೆ; ಚುನಾವಣಾ ಆಯೋಗದ ಅನಿಯಂತ್ರಿತ, ಸರ್ವಾಧಿಕಾರಿ ಮತ್ತು ಪಕ್ಷಪಾತಿ ಕಾರ್ಯವೈಖರಿಯ ಸತ್ಯವನ್ನು ಸಾರ್ವಜನಿಕಗೊಳಿಸಬೇಕೇ? ಮಾಹಿತಿ ಆಯೋಗಗಳು ಸತ್ಯವನ್ನು ಬಹಿರಂಗಪಡಿಸಲು ಇರುವುದರಿಂದ ಚುನಾವಣಾ ಆಯೋಗ ಅದನ್ನು ಅದುಮಲು ಪ್ರಯತ್ನಿಸುತ್ತಿದೆ. ಚುನಾವಣಾ ಆಯೋಗ ಮಾಹಿತಿ ಆಯೋಗದ ಬಗ್ಗೆ ಕುಹಕವಾಡುವಾಗ ಅದು ತನ್ನದೇ ಭಯವನ್ನು ವ್ಯಕ್ತಪಡಿಸುತ್ತದೆ ಮತ್ತು ಜನರಿಗೆ ನಕಲಿ ಮುಖವನ್ನು ತೊರಿಸುತ್ತದೆ. ಹಾಗಾದರೆ ಆರ್‌ಟಿಐ ಕಾಯ್ದೆಗೆ ಭಯಪಡುತ್ತಿರುವವರು ಯಾರು? ನಮಗೆ ತೀರ್ಪುಗಾರರ ಅಗತ್ಯವಿದೆಯೇ?
ಕೃಪೆ: ದಿ ವೈರ್

Writer - ಎಂ. ಜಿ. ದೇವಸಹಾಯಮ್

contributor

Editor - ಎಂ. ಜಿ. ದೇವಸಹಾಯಮ್

contributor

Similar News

ಜಗದಗಲ
ಜಗ ದಗಲ