ಪುರುಷರ ಒಪ್ಪಿಗೆಯಿಲ್ಲದೆ ವಿದೇಶ ಪ್ರಯಾಣಕ್ಕೆ ಮಹಿಳೆಗೆ ಅವಕಾಶ

Update: 2019-08-02 17:53 GMT

ರಿಯಾದ್ (ಸೌದಿ ಅರೇಬಿಯ), ಆ. 2: ಮಹಿಳೆಯರು ಪಾಸ್‌ಪೋರ್ಟ್‌ಗಳನ್ನು ಪಡೆಯಲು ಹಾಗೂ ಪುರುಷ ರಕ್ಷಕರ ಒಪ್ಪಿಗೆಯಿಲ್ಲದೆ ವಿದೇಶಕ್ಕೆ ಪ್ರಯಾಣಿಸಲು ಸೌದಿ ಅರೇಬಿಯ ಅನುಮತಿ ನೀಡಲಿದೆ ಎಂದು ಸರಕಾರ ಗುರುವಾರ ಹೇಳಿದೆ.

ಇದರೊಂದಿಗೆ ಅಂತರ್‌ರಾಷ್ಟ್ರೀಯ ಟೀಕೆಗೆ ಕಾರಣವಾಗಿದ್ದ ತುಂಬಾ ಹಿಂದಿನಿಂದ ನಡೆದುಕೊಂಡು ಬಂದಿದ್ದ ನಿರ್ಬಂಧವೊಂದು ಕೊನೆಗೊಂಡಂತಾಗಿದೆ.

‘‘ಅರ್ಜಿ ಸಲ್ಲಿಸುವ ಯಾವುದೇ ಸೌದಿ ರಾಷ್ಟ್ರೀಯರಿಗೆ ಪಾಸ್‌ಪೋರ್ಟ್ ನೀಡಲಾಗುವುದು’’ ಎಂದು ಅಧಿಕೃತ ಗಝೆಟ್ ‘ಉಮ್ಮ್ ಅಲ್ ಕುರಾ’ದಲ್ಲಿ ಪ್ರಕಟವಾಗಿರುವ ಸರಕಾರಿ ಆದೇಶವೊಂದು ತಿಳಿಸಿದೆ.

21 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಮಹಿಳೆಯರಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ‘ಒಕಾಝ್’ ಪತ್ರಿಕೆ ಮತ್ತು ಸ್ಥಳೀಯ ಮಾಧ್ಯಮಗಳು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ಸೌದಿ ಅರೇಬಿಯದಲ್ಲಿ ಈವರೆಗೆ ಮಹಿಳೆಯರು ಮದುವೆಯಾಗಲು, ತಮ್ಮ ಪಾಸ್‌ಪೋರ್ಟ್‌ಗಳನ್ನು ನವೀಕರಿಸಲು ಅಥವಾ ದೇಶದಿಂದ ಹೊರಗೆ ಹೋಗಲು ಗಂಡ, ತಂದೆ ಅಥವಾ ಇತರ ಪುರುಷ ಸಂಬಂಧಿಗಳ ಅನುಮತಿಯನ್ನು ಪಡೆಯಬೇಕಾಗಿತ್ತು.

ಈ ರಕ್ಷಕ ವ್ಯವಸ್ಥೆಯ ವಿರುದ್ಧ ಮಹಿಳಾ ಹಕ್ಕುಗಳ ಕಾರ್ಯಕರ್ತರು ದಶಕಗಳ ಕಾಲ ಹೋರಾಟ ನಡೆಸಿದ್ದಾರೆ.

ಸೌದಿ ಅರೇಬಿಯದ ವಸ್ತುತಃ ಆಡಳಿತಗಾರ ಹಾಗೂ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಸುಧಾರೀಕರಣ ಅಭಿಯಾನದ ಒಂದು ಭಾಗ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News