ಸೊತ್ತು ಮುಟ್ಟುಗೋಲು: ಮಲ್ಯ ಮನವಿಯನ್ನು ಅ. 13ಕ್ಕೆ ಮುಂದೂಡಿದ ಸುಪ್ರೀಂ

Update: 2019-08-02 17:56 GMT

ಹೊಸದಿಲ್ಲಿ, ಅ. 2: ತನ್ನ ಹಾಗೂ ಸಂಬಂಧಿಕರ ಮಾಲಕತ್ವದ ಸೊತ್ತು ಮುಟ್ಟುಗೋಲು ಹಾಕುವುದಕ್ಕೆ ತಡೆ ವಿಧಿಸುವಂತೆ ಕೋರಿ ದೇಶದಿಂದ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಆಗಸ್ಟ್ 13ಕ್ಕೆ ಮುಂದೂಡಿದೆ.

ಮಲ್ಯ ಅವರ ವಕೀಲ ಫಾಲಿ ನಾರಿಮನ್ ಅನಾರೋಗ್ಯಕ್ಕೀಡಾದ ಬಗ್ಗೆ ಮಾಹಿತಿ ನೀಡಿದ ಬಳಿಕ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಆಗಸ್ಟ್ 13ಕ್ಕೆ ಮುಂದೂಡಿತು. ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿರುವ ಕಿಂಗ್‌ಫಿಶರ್‌ಗೆ ಸೇರಿದ ಸೊತ್ತುಗಳ ಹೊರತಾಗಿ ಉಳಿದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ವಿಜಯ್ ಮಲ್ಯ ಮನವಿಯಲ್ಲಿ ಕೋರಿದ್ದರು. ಸರಕಾರದ ಸಂಸ್ಥೆ ಸೊತ್ತು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ತಡೆ ನೀಡುವಂತೆ ಕೋರಿ ಮಲ್ಯ ಸಲ್ಲಿಸಿದ ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಜುಲೈ 11ರಂದು ತಿರಸ್ಕರಿಸಿತ್ತು.

ವಿಜಯ್ ಮಲ್ಯ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಜನವರಿ 5ರಂದು ಘೋಷಿಸಿತ್ತು. ಅಲ್ಲದೆ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News