ಇಂದು ಭಾರತ-ವಿಂಡೀಸ್ ಟಿ-20 ಸರಣಿ ಆರಂಭ

Update: 2019-08-02 18:36 GMT

ಲೌಡರ್‌ಹಿಲ್(ಫ್ಲೋರಿಡಾ), ಆ.2: ಇತ್ತೀಚೆಗೆ ವಿಶ್ವಕಪ್ ಗೆಲ್ಲುವ ಕನಸು ಈಡೇರಿಸಿಕೊಳ್ಳಲು ವಿಫಲವಾಗಿರುವ ಟೀಮ್ ಇಂಡಿಯಾ ಶನಿವಾರ ಇಲ್ಲಿ ಆರಂಭವಾಗಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡುವುದರೊಂದಿಗೆ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಈಗಲೇ ತಯಾರಿ ಆರಂಭಿಸಲಿದೆ.

ಟಿ-20 ಸರಣಿಯ ಮೊದಲೆರಡು ಪಂದ್ಯಗಳನ್ನು ಸತತ 2 ದಿನ ಅಮೆರಿಕದ ನೆಲದಲ್ಲಿ ಆಡಲಿರುವ ಭಾರತ 3ನೇ ಹಾಗೂ ಕೊನೆಯ ಪಂದ್ಯವನ್ನು ವಿಂಡೀಸ್‌ನಲ್ಲಿ ಆ.6ರಂದು ಆಡುವ ಮೂಲಕ ಕೆರಿಬಿಯನ್ ಪ್ರವಾಸ ಆರಂಭಿಸಲಿದೆ. ಆಯ್ಕೆಗಾರರ ಮನಸ್ಸಿನಲ್ಲಿರುವ ಯುವ ಆಟಗಾರರಿಗೆ ವೆಸ್ಟ್‌ಇಂಡೀಸ್ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಗಳಲ್ಲಿ ಅವಕಾಶ ಒದಗಿಸುವುದು ನಮ್ಮ ಮುಖ್ಯ ಆದ್ಯತೆಯಾಗಿದೆ ಎಂದು ಕೆರಿಬಿಯನ್ ನಾಡಿಗೆ ಪ್ರವಾಸ ಕೈಗೊಳ್ಳುವ ಮೊದಲು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಸೀಮಿತ ಓವರ್ ಪಂದ್ಯಗಳಿಂದ ವಿಶ್ರಾಂತಿ ಪಡೆಯುವ ನಿರೀಕ್ಷೆಯಿತ್ತು. ಆದರೆ, ಸ್ಟಾರ್ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಹೊರತುಪಡಿಸಿ ಸಂಪೂರ್ಣ ಶಕ್ತಿಶಾಲಿ ತಂಡವನ್ನು ವಿಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಬುಮ್ರಾ ಆಗಸ್ಟ್ 22ರಂದು ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಇಡೀ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

► ಅಯ್ಯರ್, ಪಾಂಡೆ ವಾಪಸ್: ಭಾರತದ 50 ಓವರ್‌ಗಳ ವಿಶ್ವಕಪ್ ಯೋಜನೆಯಿಂದ ಬದಿಗೆ ಸರಿಸಲ್ಟಟ್ಟಿದ್ದ ಶ್ರೇಯಸ್ ಅಯ್ಯರ್ ಹಾಗೂ ಮನೀಶ್ ಪಾಂಡೆ ಮತ್ತೆ ತಂಡಕ್ಕೆ ವಾಪಸಾಗಿದ್ದಾರೆ. ಪಾಂಡೆ 2018ರ ನವೆಂಬರ್‌ನಲ್ಲಿ ಹಾಗೂ ಅಯ್ಯರ್ ಫೆಬ್ರವರಿ 2018ರಲ್ಲಿ ಭಾರತ ತಂಡದ ಪರ ಕೊನೆಯ ಬಾರಿ ಆಡಿದ್ದರು.

ಭಾರತ ಏಕದಿನ ಕ್ರಿಕೆಟ್‌ನಲ್ಲಿ ಮಧ್ಯಮ ಸರದಿಯನ್ನು ಬಲಿಷ್ಠಗೊಳಿಸಲು ಎದುರು ನೋಡುತ್ತಿದೆ. ಆರು ಸೀಮಿತ ಓವರ್ ಪಂದ್ಯಗಳಲ್ಲಿ ಈ ಇಬ್ಬರು ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ಲಭಿಸಿದೆ.

ಪಾಂಡೆ ಹಾಗೂ ಅಯ್ಯರ್ ಕೆರಿಬಿಯನ್‌ನಲ್ಲಿ ಇತ್ತೀಚೆಗೆ ಕೊನೆಗೊಂಡಿರುವ ಭಾರತ-ವಿಂಡೀಸ್ ‘ಎ’ ತಂಡಗಳ ನಡುವಿನ ಸರಣಿಯಲ್ಲಿ ಭಾಗವಹಿಸಿದ್ದರು. ‘ಎ’ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಹಾಗೂ ವೇಗದ ಬೌಲರ್‌ಗಳಾದ ಖಲೀಲ್ ಅಹ್ಮದ್ ಹಾಗೂ ದೀಪಕ್ ಚಹಾರ್ ಟಿ-20 ತಂಡಕ್ಕೆ ವಾಪಸಾಗಿದ್ದಾರೆ. ವೇಗದ ಬೌಲರ್ ನವದೀಪ್ ಸೈನಿ ಹಾಗೂ ದೀಪಕ್‌ರ ಸಹೋದರ ರಾಹುಲ್ ಭಾರತದ ಪರ ಚೊಚ್ಚಲ ಪಂದ್ಯ ಆಡುವ ನಿರೀಕ್ಷೆಯಲ್ಲಿದ್ದಾರೆ.

►4ನೇ ಕ್ರಮಾಂಕದಲ್ಲಿ ರಾಹುಲ್ ಸಾಧ್ಯತೆ: ರೋಹಿತ್ ಶರ್ಮಾ ಫಿಟ್ನೆಸ್ ಪಡೆದಿರುವ ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ನಾಲ್ಕನೇ ಕ್ರಮಾಂಕವನ್ನು ಕೆಎಲ್ ರಾಹುಲ್ ವಶಪಡಿಸಿಕೊಳ್ಳುವ ಸಾಧ್ಯತೆಯಿದೆ. ರಾಹುಲ್ 3 ವರ್ಷಗಳ ಹಿಂದೆ ಇಲ್ಲಿನ ಸೆಂಟ್ರಲ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ವಿಂಡೀಸ್ ವಿರುದ್ಧವೇ ಔಟಾಗದೆ 110 ರನ್ ಗಳಿಸಿದ್ದರು.

ರೋಹಿತ್ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಸಿಡಿಸಿ ಅಗ್ರ ಸ್ಕೋರರ್‌ಆಗಿ ಹೊರಹೊಮ್ಮಿದ್ದರು. ಕೊಹ್ಲಿಯೊಂದಿಗೆ ಶೀತಲ ಸಮರ ನಡೆಸುತ್ತಿದ್ದಾರೆಂಬ ವದಂತಿಯ ಮಧ್ಯೆ ತನ್ನ ಹಿಂದಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ ರೋಹಿತ್. ಉಪ ನಾಯಕ ರೋಹಿತ್‌ರೊಂದಿಗೆ ಯಾವುದೇ ಮನಸ್ತಾಪವಿಲ್ಲ ಎಂದು ಕೊಹ್ಲಿ ಈಗಾಗಲೇ ಸ್ಪಷ್ಟಪಡಿಸುವ ಮೂಲಕ ವದಂತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

►ಪಂತ್ ಹೆಗಲೇರಲಿದೆ ಹೊಣೆಗಾರಿಕೆ: ವಿಂಡೀಸ್ ಪ್ರವಾಸದ ಬಳಿಕ ರಿಷಭ್ ಪಂತ್‌ಗೆ ಭಾರೀ ಜವಾಬ್ದಾರಿ ಹೆಗಲೇರಲಿದೆ. ಆಯ್ಕೆಗಾರರು ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಪಂತ್ ನಂ.1 ವಿಕೆಟ್‌ಕೀಪರ್ ಆಗಬೇಕೆಂಬ ಬಯಕೆಯೊಂದಿಗೆ ಅವರ ಬೆಂಬಲಕ್ಕೆ ನಿಂತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ವೃತ್ತಿಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವುದು ಇದಕ್ಕೆ ಕಾರಣವಾಗಿದೆ.

 ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ತಂಡವಾಗಿರುವ ವಿಂಡೀಸ್‌ನ್ನು ಮಣಿಸಲು ಭಾರತ ಯೋಜನೆ ಹಾಕಿಕೊಂಡಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಕಿರೊನ್ ಪೊಲಾರ್ಡ್ ಹಾಗೂ ಸ್ಪಿನ್ನರ್ ಸುನೀಲ್ ನರೇನ್ ತಂಡಕ್ಕೆ ಮರಳಿದ್ದಾರೆ. ಕ್ರಿಸ್ ಗೇಲ್ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಆ್ಯಂಡ್ರೆ ರಸೆಲ್ ಟಿ-20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡಗಳು ಭಾರತ

►ವಿರಾಟ್ ಕೊಹ್ಲಿ( ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಕೃನಾಲ್ ಪಾಂಡ್ಯ, ರವೀಂದ್ರ ಜಡೇಜ , ವಾಶಿಂಗ್ಟನ್ ಸುಂದರ್, ರಾಹುಲ್ ಚಹಾರ್, ಭುವನೇಶ್ವರ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್ ಹಾಗೂ ನವದೀಪ ಸೈನಿ.

►ವೆಸ್ಟ್‌ಇಂಡೀಸ್: ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮೆಯರ್, ನಿಕೊಲಸ್ ಪೂರನ್, ಕಿರೊನ್ ಪೊಲಾರ್ಡ್, ರೊವ್‌ಮನ್ ಪೊವೆಲ್, ಕಾರ್ಲೊಸ್ ಬ್ರಾತ್‌ವೇಟ್(ನಾಯಕ), ಕೀಮೊ ಪಾಲ್, ಸುನೀಲ್ ನರೇನ್, ಶೆಲ್ಡನ್ ಕೊಟ್ರೆಲ್, ಒಶಾನ್ ಥಾಮಸ್, ಅಂಥೋನಿ ಬ್ರಾಂಬ್ಲೆ, ಆ್ಯಂಡ್ರೆ ರಸೆಲ್, ಖಾರಿ ಪೀರ್.

►ಪಂದ್ಯದ ಸಮಯ: ರಾತ್ರಿ 8:00

►(ಭಾರತೀಯ ಕಾಲಮಾನ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News