ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗಾರ್ ನಿವಾಸ ಸಹಿತ 15 ಸ್ಥಳಗಳಿಗೆ ಸಿಬಿಐ ದಾಳಿ

Update: 2019-08-04 17:50 GMT

ಉನ್ನಾವೊ, ಆ. 4: ಉನ್ನಾವೊ ಅತ್ಯಾಚಾರ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ನ ಇಲ್ಲಿನ ನಿವಾಸ ಸಹಿತ 15ಕ್ಕೂ ಅಧಿಕ ಸ್ಥಳಗಳ ಮೇಲೆ ಸಿಬಿಐ ರವಿವಾರ ದಾಳಿ ನಡೆಸಿದೆ. ಉನ್ನಾವೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಲಕ್ನೋ, ಉನ್ನಾವೊ ಹಾಗೂ ಫತೇಪುರ ಜಿಲ್ಲೆಗಳಲ್ಲಿ ಸಿಬಿಐ ದಾಳಿ ನಡೆಸಿದೆ.

ಉನ್ನಾವೊದಲ್ಲಿರುವ ಸೆಂಗಾರ್ ನಿವಾಸದಲ್ಲಿ 2017 ಜೂನ್ 4ರಂದು ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾದ ಬಾಲಕಿ ಸಂಚರಿಸುತ್ತಿದ್ದ ಕಾರಿಗೆ ರಾಯ್‌ಬರೇಲಿಯಲ್ಲಿ ಟ್ರಕ್ಕೊಂದು ಢಿಕ್ಕಿಯಾಗಿತ್ತು. ಈ ಅಪಘಾತದಲ್ಲಿ ಅವರ ಇಬ್ಬರು ಚಿಕ್ಕಮ್ಮಂದಿರು ಮೃತಪಟ್ಟಿದ್ದರು. ಅವರು ಹಾಗೂ ಅವರ ವಕೀಲ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

  ಜುಲೈ 28ರಂದು ನಡೆದ ಅಪಘಾತಕ್ಕೆ ಸಂಬಂಧಿಸಿ ಟ್ರಕ್ ಚಾಲಕ ಹಾಗೂ ಕ್ಲೀನರ್‌ಗೆ ಸಿಬಿಐ ಶನಿವಾರ ಮೂರು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅಪಘಾತದ ತನಿಖೆಗೆ ನೆರವು ನೀಡಲು 100 ತನಿಖಾಧಿಕಾರಿಗಳ ಹೆಚ್ಚುವರಿ ವಿಶೇಷ ತಂಡವನ್ನು ಆಗಸ್ಟ್ 2ರಂದು ರೂಪಿಸಿತ್ತು.

ಕುಲದೀಪ್ ಸಿಂಗ್ ಸೆಂಗಾರ್ ಯಾರೆಂದು ಗೊತ್ತಿಲ್ಲ

ಲಕ್ನೋ: ಕುಲದೀಪ್ ಸಿಂಗ್ ಸೆಂಗಾರ್ ಯಾರೆಂದು ತನಗೆ ಗೊತ್ತಿಲ್ಲ ಎಂದು ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಕಾರಿಗೆ ರಾಯ್‌ಬರೇಲಿಯಲ್ಲಿ ಢಿಕ್ಕಿ ಹೊಡೆದ ಟ್ರಕ್‌ನ ಮಾಲಕ ಕಿಶೋರ್ ಪಾಲ್ ಹೇಳಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿ ವಿಚಾರಣೆಗೆ ಲಕ್ನೋದಲ್ಲಿರುವ ತನ್ನ ಕಚೇರಿಗೆ ಆಗಮಿಸುವಂತೆ ಪಾಲ್‌ಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು.

‘‘ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅಥವಾ ಇನ್ಯಾವುದೇ ವ್ಯಕ್ತಿಗಳೊಂದಿಗೆ ನನಗೆ ಸಂಬಂಧ ಇಲ್ಲ. ಇದರಲ್ಲಿ ಯಾವುದೇ ಪಿತೂರಿ ಇಲ್ಲ. ಕಾರು ಯಾರಿಗೆ ಸೇರಿದ್ದು ಎಂದು ನನಗೆ ಗೊತ್ತಿರಲಿಲ್ಲ. ಆಗ ಮಳೆ ಸುರಿಯುತ್ತಿತ್ತು. ಟ್ರಕ್ ನಿಯಂತ್ರಣ ಕಳೆದುಕೊಂಡು ಕಾರಿಗೆ ಢಿಕ್ಕಿಯಾಯಿತು. ಇದಕ್ಕಿಂತ ಬೇರೇನೂ ಇಲ್ಲ’’ ಎಂದು ಅವರು ಹೇಳಿದ್ದಾರೆ.

ಐಎಎಸ್ ಅಧಿಕಾರಿಗೆ ನ್ಯಾಯಾಂಗ ಬಂಧನ

ತಿರುವನಂತಪುರ: ಕಾರು ಢಿಕ್ಕಿ ಹೊಡೆದು ಪತ್ರಕರ್ತನ ಸಾವಿಗೆ ಕಾರಣರಾದ ಐಎಎಸ್ ಅಧಿಕಾರಿಯನ್ನು ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಾಮನ್‌ನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶನಿವಾರ ರಾತ್ರಿ ನ್ಯಾಯಾಂಗ ದಂಡಾಧಿಕಾರಿ ಆಸ್ಪತ್ರೆಗೆ ತೆರಳಿದರು ಹಾಗೂ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದರು.

ಚಿಕಿತ್ಸೆಯ ನಂತರ ಬಿಡುಗಡೆ ಮಾಡಲು ವೈದ್ಯರು ಅವಕಾಶ ನೀಡಿದ ಬಳಿಕ ಜೈಲಿಗೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News