ಉದ್ವಿಗ್ನತೆ ಸೃಷ್ಟಿಸುವ ಯಾವುದೇ ಕ್ರಮ ಬೇಡ: ಭಾರತ,ಪಾಕ್ ಗೆ ಫಾರೂಕ್ ಅಬ್ದುಲ್ಲಾ ಎಚ್ಚರಿಕೆ

Update: 2019-08-04 18:25 GMT

ಶ್ರೀನಗರ,ಆ.4: ಕಾಶ್ಮೀರದಲ್ಲಿ ಉದ್ವಿಗ್ನತೆಗೆ ಕಾರಣವಾಗುವ ಯಾವುದೇ ಹೆಜ್ಜೆಗಳನ್ನಿರಿಸದಂತೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಭಾರತ ಮತ್ತು ಪಾಕಿಸ್ತಾನಗಳನ್ನು ಆಗ್ರಹಿಸಿದ್ದಾರೆ.

ರವಿವಾರ ಇಲ್ಲಿಯ ತನ್ನ ನಿವಾಸದಲ್ಲಿ ಸರ್ವಪಕ್ಷ ಸಭೆಯ ಬಳಿಕ ಮಾತನಾಡಿದ ಅವರು,ಶಾಂತಿಯನ್ನು ಕಾಯ್ದಕೊಳ್ಳುವಂತೆ ಜನತೆಯನ್ನು ಕೋರಿಕೊಂಡರು. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ರಾಜ್ಯದಲ್ಲಿಯ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಒಗ್ಗಟ್ಟಾಗಿದ್ದಾರೆ ಎಂದ ಅವರು,ಪ್ರಚಲಿತ ರಾಜಕೀಯ ಸ್ಥಿತಿ ಮತ್ತು ಭದ್ರತಾ ಪಡೆಗಳ ನಿಯೋಜನೆ ಕುರಿತು ಸರ್ವಪಕ್ಷ ಸಭೆಯು ಚರ್ಚಿಸಿದೆ. ಹಿಂದೆಂದೂ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿರಲಿಲ್ಲ. ಇದೇ ರೀತಿ ಮುಂದುವರಿದರೆ ಸಂಭಾವ್ಯ ಪರಿಣಾಮಗಳ ಬಗ್ಗೆ ನಮ್ಮ ಕಳವಳಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ತಿಳಿಸಲು ನಾವು ನಿರ್ಧರಿಸಿದ್ದೇವೆ ಎಂದರು.
ಪಿಡಿಪಿಯ ಮೆಹಬೂಬ ಮುಫ್ತಿ,ಎನ್ಸಿಯ ಉಮರ್ ಅಬ್ದುಲ್ಲಾ,ಕಾಂಗ್ರೆಸ್ನ ತಾಜ್ ಮೊಹಿಯುದ್ದೀನ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News